ಎಸ್ಪಿ ಅನೂಪ್ ಶೆಟ್ಟಿ ಬೆಂಗಳೂರು ಸಿಐಡಿಗೆ ವರ್ಗಾವಣೆ

ಕೊಪ್ಪಳ : ಕೊಪ್ಪಳದ ಎಸ್ಪಿ ಅನೂಪ್ ಶೆಟ್ಟಿಯವರನ್ನು ಬೆಂಗಳೂರಿನ  ಸಿಐಡಿಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಮೊದಲು ಹುಬ್ಬಳ್ಳಿಯ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವರ್ಗಾವಣೆ ಮಾಡದಂತೆ ಆದೇಶ ಮಾಡಿತ್ತು. ಅಲ್ಲದೇ ಈ ಮೊದಲು ಸಹ ಎಸ್ಪಿ ಅನೂಪ್ ಶೆಟ್ಟಿಯವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ತಮ್ಮ ವರ್ಗಾವಣೆ ಆದೇಶದ ವಿರುದ್ದ ಅನೂಪ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು. ಚುನಾವಣೆಗಳೆಲ್ಲಾ ಮುಗಿದು ಹೋದ ನಂತರ ವಿಚಾರಣೆ ನಡೆಸಿದ್ದ ಸಿಎಟಿಯು ಸರಕಾರದ ಆದೇಶ ಸರಿಯಾಗಿದೆ ಎಂದು ಆದೇಶ ನೀಡಿತ್ತು. ಹೀಗಾಗಿ ಅನಿವಾರ್ಯವಾಗಿ ಎಸ್ಪಿ ಅನೂಪ್ ಶೆಟ್ಟಿ ವರ್ಗವಾಗಲೇಬೇಕಾಯಿತು. ಈ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬಂದಿದ್ದರಿಂದ ಮತ್ತೆ ಚುನಾವಣೆ ಆಯೋಗ  ಈ ಸಂದ‍ರ್ಭದಲ್ಲಿ ವರ್ಗವಣೆ ಮಾಡದಂತೆ ನಿರ್ದೇಶನ ನೀಡಿತ್ತು. ಕೊನೆಗೆ ಇವತ್ತು ಅನೂಪ್ ಶೆಟ್ಟಿಯವರನ್ನು ಸಿಐಡಿಯ ಬೆಂಗಳೂರು ಕಚೇರಿಗೆ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಗೆ ಬಂದಾಗಿನಿಂದ ತಮ್ಮ ಹುರುಪಿನ ಕೆಲಸದಿಂದ ಜನಪ್ರಿಯತೆ ಗಳಿಸಿಕೊಂಡ ಎಸ್ಪಿ ಜಿಲ್ಲೆಯಾದ್ಯಂತ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದರು.  ತಮ್ಮ  ಇಲಾಖೆಯಲ್ಲಿಯೂ ಸಹ ಬಹಳಷ್ಟು ಬದಲಾವಣೆ ಮಾಡಿದರು. ಚುನಾವಣೆ ಸಂದರ್ಭದಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು , ರಾಜಕಾರಣಿಗಳ ಹಿಂಬಾಲಕರ ಮರಳು ದಂದೆ ಸೇರಿದಂತೆ ಇತರೆ ದಂದೆಗಳಲ್ಲಿ ತೊಡಗಿದವರನ್ನು ಮಟ್ಟಹಾಕಿದ್ದು  ಹಲವರ ಕೆಂಗಣ್ಣಿಗೆ ಕಾರಣವಾಯಿತು.  ಜನಾನುರಾಗಿಯಾಗಿ ಕೆಲಸ ಮಾಡಿರುವ ಎಸ್ಪಿ ಅನೂಪ್ ಶೆಟ್ಟಿ ತಮ್ಮ ಪೊಲಿಸ್ ಕ್ವಾಟ್ರಸ್ ನಲ್ಲಿಯೂ ಸಹ  ಉದ್ಯಾನವನ ನಿರ್ಮಿಸಲು ಕಾರಣೀಕರ್ತರಾಗಿದ್ಧಾರೆ.

ಬಿಜೆಪಿ ನಾಯಕರಿಗೆ ಸಹಾಯವಾಗುವಂತೆ ಕೆಲಸ ಮಾಡಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪವಾಗಿತ್ತು. ಹಲವಾರು ಸಂದರ್ಭಗಳಲ್ಲಿ ಎಸ್ಪಿಯವರು ಬೇಕೆಂದೆ ತಮ್ಮ ವಿರುದ್ದ ಪ್ರಕರಣಗಳನ್ನು ದಾಖಲಿಸಿದ್ದಾರೆ ಎನ್ನುವುದು ಕೆಲವು ಮುಖಂಡರ ಆರೋಪವಾಗಿದೆ.

ಒಟ್ಟಿನಲ್ಲಿ ಮತ್ತೊಮ್ಮೆ ಎಸ್ಪಿ ಅನೂಪ್ ಶೆಟ್ಟಿಯವರ ವರ್ಗಾವಣೆಗೆ ಆದೇಶ ಬಂದಿದೆ.