ಎಲ್ಲ ಅಕ್ರಮಗಳಿಗೂ ಕಡಿವಾಣ: ಬಿ.ಸಿ.ಪಾಟೀಲ್

-ವೈದ್ಯರು ಸರ್ಕಾರಿ ಸೇವೆಯತ್ತ ಹೆಚ್ಚಿನ ಆಸಕ್ತಿ ತೋರಲಿ: ಬಿ.ಸಿ.ಪಾಟೀಲ್

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವರ ಕಾರ್ಯಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಆಹಾರ ಇಲಾಖೆಯ ಉಪನಿರ್ದೇಶಕರ ಜೊತೆ ಮಾತನಾಡಿದ್ದು ಮಾಹಿತಿ ಸಂಗ್ರಹಿಸಿದ್ದೇನೆ. ಇದುವರೆಗೂ ಕೊಪ್ಪಳದಲ್ಲಿದ್ದ ಆಡಳಿತ ಬೇರೆ. ಇನ್ಮುಂದೆ ನಡೆಯುವ ಆಡಳಿತವೇ ಬೇರೆ. ಒಂದು ತಿಂಗಳು ಕಾದು ನೋಡಿ, ಜಿಲ್ಲೆಯ ಎಲ್ಲ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತೇನೆ ಎಂದರು.

ಉನ್ನತ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆದ ನಂತರ ವೈದ್ಯರು ಖಾಸಗಿ ಸೇವೆಗಿಂತ ಸರ್ಕಾರಿ ಸೇವೆಗೆ ಹೆಚ್ಚಿನ ಆಸಕ್ತಿ ತೋರಲಿ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಕೊಪ್ಪಳ ಅಷ್ಟೇ ಅಲ್ಲದೇ ರಾಜ್ಯದ ಬಹುತೇಕ ಕಡೆ ಸರ್ಕಾರಿ ವೈದ್ಯರ ಕೊರತೆಯಿದೆ. ಇದಕ್ಕೆ ವೈದ್ಯರು ಖಾಸಗಿ ಸೇವೆಯತ್ತ ಹೆಚ್ಚು ಆಸಕ್ತಿ ತೋರುತ್ತಿರುವುದೇ ಕಾರಣ. ವೈದ್ಯರು ಸರ್ಕಾರಿ ಸೇವೆಗೆ ಹೆಚ್ಚಿನ ಆದ್ಯತೆಕೊಡಲಿ. ಇದರಿಂದ ಗ್ರಾಮೀಣ ಜನರಲ್ಲಿಯೂ ಸರ್ಕಾರಿ ವೈದ್ಯರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ ಎಂದು ವಿವರಿಸಿದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ತಾವು ಕಳೆದ ತಿಂಗಳು ಕೋವಿಡ್-19 ಲಾಕ್ಡೌನ್‌ನಿಂದ ರೈತರು ಮತ್ತು ಕೃಷಿ ಚಟುವಟಿಕೆಗಳ ಸ್ಥಿತಿಗತಿ ಬಗ್ಗೆ ಅರಿಯಲು ಭೇಟಿ ನೀಡಿ ಸಭೆ ನಡೆಸಲಾಗಿತ್ತು. ಈಗ ತಾವು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿರುವುದಾಗಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೆಸೂಗೂರು, ಸಂಸದ ಕರಡಿ ಸಂಗಣ್ಣ, ಮುಖಂಡರಾದ ನವೀನ್ ಗುಳಗಣ್ಣವರ್ ಇತರರು ಇದ್ದರು.

Please follow and like us:
error