You are here
Home > Koppal News > ಎಲ್ಲಾ ಇಲಾಖೆಗಳ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ : ಪಿ. ಸುನೀಲ್ ಕುಮಾರ್ ಸೂಚನೆ

ಎಲ್ಲಾ ಇಲಾಖೆಗಳ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ : ಪಿ. ಸುನೀಲ್ ಕುಮಾರ್ ಸೂಚನೆ

ಕೊಪ್ಪಳ ಅ. : ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳು, ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್‍ಗಳ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧ ಪ್ರಾಧಿಕಾರವು ಕನ್ನಡ ಅಭಿವೃದ್ಧಿಗಾಗಿ ಕನ್ನಡ ಅನುಷ್ಠಾನದ ಕುರಿತು 20 ಅಂಶಗಳನ್ನು ನೀಡಿದೆ. ಈ ಎಲ್ಲಾ ಇಪ್ಪತ್ತು ಅಂಶಗಳನ್ನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ಇದರ ಜೊತೆ ಸಾಂಸ್ಕøತಿಕ ಕ್ಷೇತ್ರದ ಅಭಿವೃದ್ಧಿಗಾಗಿಯೂ ಸಹ ಪ್ರಾಧಿಕಾರವು ನಿರ್ದೇಶಿಸಿದೆ. ಸಾಂಸ್ಕøತಿ ಕ್ಷೇತ್ರದಲ್ಲಿ ಪ್ರವಾಸೋಧ್ಯಮ ಪ್ರಮುಖ ಪಾತ್ರದ್ದಾಗಿದೆ. ಜಿಲ್ಲೆಯಲ್ಲಿ ಉತ್ಸವಗಳು ನಡೆಯಬೇಕು. ಇದರಿಂದಾಗಿ ಪ್ರವಾಸೋಧ್ಯಮವು ಸಾಕಷ್ಟು ಅಭಿವೃದ್ಧಿಗಾಗಿಯಾಗಲಿದೆ. ಹಂಪಿ ಉತ್ಸವದಂತೆ ಆನೆಗುಂದಿ ಉತ್ಸವವು ಸಹ ನಡೆಯಬೇಕು. ಆದರೆ ಬರದ ಕಾರಣದಿಂದಾಗಿ ಉತ್ಸವಗಳು ಬೇಡ ಎಂಬುವುದು ಸಾರ್ವಜನಿಕರ ಬೇಡಿಕೆಯಾಗಿದೆ. ಆದರೆ ಉತ್ಸವಗಳಿಗೆ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತಿದ್ದು, ಕಡಿಮೆ ವೆಚ್ಚದಲ್ಲಾದರೂ ಉತ್ಸವಗಳನ್ನು ಆಚರಿಸಲೇ ಬೇಕು. ಎಲ್ಲಾ ಸಾರ್ವಜನಿಕರು ಸಹ ತಮ್ಮ ಅಂಗಡಿ, ಹೋಟೆಲ್ ಹೀಗೆ ತಮ್ಮ-ತಮ್ಮ ವ್ಯವಹಾರಗಳಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಕೆಮಾಡಬೇಕು. ಜಿಲ್ಲೆಯಲ್ಲಿ ಕನ್ನಡವನ್ನು ಅನುಷ್ಠಾನ ಮಾಡುವ ನೀಟ್ಟಿನಲ್ಲಿ ಅಧಿಕಾರಿಗಳಿಗಿಂತ ಮೊದಲು ಸಾರ್ವಜನಿಕರಿಂದಲೇ ಇಂತಹ ಚಳುವಳಿಗಳು ಪ್ರಾರಂಭವಾಗಬೇಕು.
ಪ್ರಾಧಿಕಾರದ ಕನ್ನಡ ಅನುಷ್ಠಾನದ 20 ಅಂಶಗಳನ್ವಯ ಜಿಲ್ಲೆಯ ಎಲ್ಲಾ ಇಲಾಖೆಗಳ ಅಂತರ್ಜಾಲ ತಾಣದ ಪ್ರಧಾನ ಪುಟ ಕನ್ನಡದಲ್ಲಿ (ಡಿಫಾಲ್ಟ್ ಪೇಜ್) ರೂಪಿಸುವುದು ಮತ್ತು ಒಳಪುಟದ ಮಾಹಿತಿಗಳೆಲ್ಲವೂ ಕನ್ನಡದಲ್ಲಿಯೇ ಇರಬೇಕು. ಎಲ್ಲಾ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು. ಆಡಳಿತಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು, ಕಡತಗಳ ನಿರ್ವಹಣೆ, ತಂತ್ರಾಂಶಗಳ ಅಳವಡಿಕೆ, ಅಂತರ್ಜಾಲ ತಾಣ, ಸಾಮಾಜಿಕ ಜಾಲತಾಣ, ಯೋಜನೆಗಳ ಪ್ರಚಾರ, ಜಾಹಿರಾತು ಇತ್ಯಾದಿ ಎಲ್ಲಾ ಕಛೇರಿ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಕನ್ನಡ ಯುನಿಕೋಡ್ ತಂತ್ರಾಂಶವನ್ನೇ ಬಳಸಬೇಕು. ಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಕೃತ ಜ್ಞಾಪನ, ಅಧಿಸೂಚನೆ, ನಡವಳಿಗಳೆಲ್ಲವನ್ನೂ ಕಡ್ಡಾಯವಾಗಿ ಕನ್ನಡದಲ್ಲಿ ಹೊರಡಿಸಬೇಕು. ಎಲ್ಲಾ ಕಾಗದಗಳ ತೆಲೆಬರಹಗಳು (ಲೆಟರ್ ಹೆಡ್) ಅಥವಾ ವಿಸಿಟಿಂಗ್ ಕಾರ್ಡ್‍ಗಳು, ಮೊಹರುಗಳು, ಲೆಕ್ಕಪತ್ರಗಳು ಮತ್ತು ಎಲ್ಲಾ ವಹಿಗಳು ಕನ್ನಡದಲ್ಲಿರಬೇಕು. ಸಚಿವಾಲಯ ಮಟ್ಟದಲ್ಲಿ ಕನ್ನಡ ಅನುಷ್ಠಾನ ವಿಭಾಗವನ್ನು ರಚನೆ ಮಾಡಿ ಕನ್ನಡ ಅನುಷ್ಠಾನದ ಪ್ರಗತಿಯ ವಿವರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಕನ್ನಡ ಅಭಿವೃದ್ಧಿಯ ಉದ್ದೇಶಗಳನ್ನು ನೇರವೇರಿಸಲು ಜವಾಬ್ದಾರರನ್ನಾಗಿ ಮಾಡಿರುವ ಅಧಿಕಾರಿಗಳು ಸರ್ಕಾರದ ಸುತ್ತೋಲೆ ಡಿ.ಪಿ.ಆರ್ 24 ಪಿಒಎಲ್ 80, ದಿನಾಂಕ: 5/1/1982ರನ್ವಯ ಅಧಿನ ಕಚೇರಿ/ ಶಾಖೆಗಳ ತನಿಖೆ ಮಾಡಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇಲಾಖಾ ವಾರ್ಷಿಕ ಆಡಳಿತ ವರದಿಗಳು, ವಾರ್ಷಿಕ ವರದಿಗಳು, ಆಯವ್ಯಯ ದಾಖಲೆಗಳು ಮತ್ತು ಇತರೆ ಎಲ್ಲಾ ಅಗತ್ಯ ದಾಖಲಾತಿಗಳು ಕನ್ನಡದಲ್ಲಿರಬೇಕು ಹಾಗೂ ವಾರ್ಷಿಕ ವರದಿಗಳ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದು. ಕನ್ನಡ ಅನುಷ್ಠಾನದ ಪ್ರಗತಿಯ ವರದಿಯನ್ನು ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ನಿಗಧಿತ ನಮೂನೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇ-ಟೆಂಡರ್, ಜಾಹೀರಾತು, ದರಪಟ್ಟಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು. ಪ್ರತಿ ತಿಂಗಳು ನಡೆಯುವ ಇಲಾಖಾ ಪ್ರಗತಿ ಪರಿಶೀಲನಾ ಸಭೆ (ಎಂ.ಎಂ.ಆರ್) ಯಲ್ಲಿ ಕನ್ನಡ ಅನುಷ್ಠಾನ ಪ್ರಗತಿಯ ವಿಷಯವನ್ನು ಪ್ರಮುಖವಾಗಿ ಚರ್ಚಿಸಿ ಅದರ ನಡವಳಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದು. ನಗರಪಾಲಿಕೆ, ಜಿಲ್ಲೆಯಾದ್ಯಂತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ, ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಅಂದರೆ ಶೇ.60 ರಷ್ಟು ಭಾಗ ಕನ್ನಡವನ್ನು ಬಳಸಬೇಕು. ಡಾ. ಸರೋಜಿನಿ ಮಹಿಷಿ ವರದಿಯನ್ವಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆ, ಕಾರ್ಖಾನೆಗಳಲ್ಲಿ, ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ನೌಕರರನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ನೀಡುವುದು. ಪ್ರತಿ ಮೂರು ತಿಂಗಳಿಗೊಮ್ಮೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕರು/ಉಪ ನಿರ್ದೇಶಕರುಗಳು ಎಲ್ಲಾ ಇಲಾಖೆಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದು. ಜಿಲ್ಲೆಯಲ್ಲಿರುವ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ದಿಮೆಗಳು, ಸಂಸ್ಥೆಗಳಲ್ಲಿ ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕಾಲಿಕ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಕನ್ನಡ ಅಭಿವೃದ್ಧಿ ಕಾರ್ಯಕ್ರಮ ಸಭೆಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಧಾನವಾಗಿ ಚರ್ಚಿಸಿ ಪ್ರತಿ ಜಿಲ್ಲೆಯ ನಡುವಳಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದು. ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ನಾಡಿನ ಪ್ರಸಿದ್ಧ ಸಾಹಿತಿಗಳ, ಜಿಲ್ಲೆಯ ಹಿರಿಯ ಹೊರಟಗಾರರ, ಗಣ್ಯ ವ್ಯಕ್ತಿಗಳ ಹೆಸರನ್ನು ಇಡುವ ಕ್ರಮಕೈಗೊಳ್ಳುವುದು ಮತ್ತು ವೃತ್ತಗಳಲ್ಲಿ ಜಿಲ್ಲೆಗೆ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳ ಪ್ರತಿಮೆಗಳ ಅನಾವರಣಗೊಳಿಸುವುದು. ಬ್ಯಾಂಕ್‍ಗಳಲ್ಲಿ ಜನೋಪಯೋಗಕ್ಕೆ ಬಳಸುವ ಚಲನ್, ನಮೂನೆ, ಅರ್ಜಿಗಳನ್ನು ಕನ್ನಡದಲ್ಲಿಯೂ ಮುದ್ರಿಸಬೇಕು ಹಾಗೂ ಬ್ಯಾಂಕ್‍ಗಳ ಎಟಿಎಂ ಯಂತ್ರಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವುದು. ಜಿಲ್ಲೆಯ ಎಲ್ಲಾ ರಸ್ತೆ, ರಾಜ್ಯ, ರಾಷ್ಟ್ರ ಹೆದ್ದಾರಿಗಳಲ್ಲಿರುವ ನಾಮಫಲಕಗಳು, ಹೆದ್ದಾರಿ ಫಲಕಗಳು, ಮಾರ್ಗ ಸೂಚಿಗಳು ಹಾಗೂ ವಿಷಯ ಸೂಚಿಗಳನ್ನು ಕನ್ನಡದಲ್ಲಿ ಬರೆಸುವುದು. ಕನ್ನಡ ಭಾಷಾ ಅಧಿನಿಯಮ 2015 ರನ್ವಯ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು 1 ರಿಂದ 10ನೇ ತರಗತಿಯವರಿಗೆ ಪ್ರಥಮ ಅಥವಾ ದ್ವೀತಿಯ ಭಾಷೆಯಾಗಿ ಕಡ್ಡಾಯವಾಗಿ ಭೋಧಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ಶಾಲೆಗಳಿಂದ ಕ್ರೂಢೀಕೃತ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ಪ್ರವೇಶಾವಕಾಶ ಒದಗಿಸುವುದು ಮತ್ತು ಅವರೊಂದಿಗೆ ಜಿಲ್ಲೆಯಾದ್ಯಂತ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಚರ್ಚಿಸಿ ಸಲಹೆ ಪಡೆಯಬೇಕಾಗಿದ್ದು, ಈ ಎಲ್ಲಾ ಅಂಶಗಳನ್ನು ಅಧಿಕಾರಿಗಳು ಹಾಗೂ ಸಾರ್ವಜನಿಕರೆಲ್ಲರೂ ಸಹ ಪಾಲನೆ ಮಾಡಿಕೊಂಡಲ್ಲಿ ಕನ್ನಡ ಭಾಷೆಯ ಸಮರ್ಪಕ ಬಳಕೆಯಾಗಲಿದೆ. ಆದ್ದರಿಂದ ಎಲ್ಲರೂ ಕನ್ನಡ ಅನುಷ್ಠಾನಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಕನ್ನಡ ಅನುಷ್ಠಾನಕ್ಕಾಗಿ ಕೊಪ್ಪಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯನ್ನು ರಚಿಸಿದ್ದು, ಈ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದಾರೆ. ಜಿಲ್ಲೆಯ ಐದು ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿ ಸದಸ್ಯರಾದ ಎಸ್.ಎಸ್. ಪಾಟೀಲ್, ಅಲ್ಲಪ್ರಭು ಬೆಟ್ಟದೂರ, ಸಿರಾಜ್ ಬಿಸರಳ್ಳಿ, ರವಿಂದ್ರ ಬಾಕಳೆ ಮತ್ತು ಹನುಮೇಶ ಗುಮಗೇರಿ ಉಪಸ್ಥಿತರಿದ್ದು, ಉಪಯುಕ್ತ ಸಲಹೇಗಳನ್ನು ನೀಡಿದರು.

Top