ಎಲ್ಲರೂ ಕೈ ಜೋಡಿಸಿ ಹರಿಯುವ ನೀರನ ಸಂಗ್ರಹಣೆ ಮಾಡಿ : ಟಿ. ಕೃಷ್ಣಮೂರ್ತಿ

ಕೊಪ್ಪಳ ಮಾ : ಎಲ್ಲರೂ ಕೈ ಜೋಡಿಸಿ ಹರಿಯುವ ನೀರನ ಸಂಗ್ರಹಣೆ ಮಾಡಿ ಎಂದು ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ಹೇಳಿದರು.
ಕೊಪ್ಪಳದ ತಾಲೂಕ ಪಂಚಾಯತ ಸಭಾಂಗಾಣದಲ್ಲಿ ಶುಕ್ರವಾರದಂದು ಆಯೋಜಿಸಲಾದ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿವರ್ಷ ಅಂತರ ಜಲ ಮಟ್ಟ ಕಡಿಮೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಹರಿದು ಹೋಗುವ ನೀರನ್ನು ಸಂಗ್ರಹಣೆ ಮಾಡದೇ ಇರುವದು ಮತ್ತು ಮಳೆಯ ನೀರನ್ನು ಭೂಮಿಯಲ್ಲಿ ಇಂಗದಂತೆ ಕ್ರಮಕೈಗೊಳ್ಳದಿರುವದು. ಜಿಲ್ಲೆಯಲ್ಲಿ ಪ್ರತಿ ವರ್ಷ ಬರಗಾಲ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಈ ದಿಸೆಯಲ್ಲಿ ನೀರನ್ನು ಮಿತವಾಗಿ ಬಳಸಿ, ಮನೆ ಮುಂದೆ ಮತ್ತು ಕಛೇರಿಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಹರಿದು ಹೋಗುವ ನೀರನ್ನು ಸಸಿಗಳಿಗೆ ಪೂರೈಕೆಯಾಗುವಂತೆ ಮಾಡಿ, ಹರಿದು ಹೋಗುವ ನೀರನ್ನು ಸಂಗ್ರಹಿಸಬೇಕು. ಈ ಮಾರ್ಗವನ್ನು ಜನರು ಹೆಚ್ಚು ಹೆಚ್ಚು ಅನುಸರಿಸುತ್ತಾ ಹೋದರೆ ಹರಿವ ನೀರನ್ನು ಸಂಗ್ರಹಿಸಬಹುದಾಗಿದೆ ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅಲ್ಲದೇ ನೀರಿನ ಬಗ್ಗೆ ವಿಶ್ವಸಂಸ್ಥೆ ಮಟ್ಟದಲ್ಲಿ ಅಪಾರ ಪ್ರಮಾಣದ ಚರ್ಚೆಯಾಗುತ್ತಿವೆ. ಕಾರಣವೆಂದರೆ ವಿಶ್ವದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನೀರಿನ ಬವಣೆ ಹೆಚ್ಚಾಗುವದನ್ನು ತಪ್ಪಿಸಲು ದೇಶ ಮತ್ತು ವಿದೇಶಗಳಲ್ಲಿ ಜಲತಜ್ಞರ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಚೆಕ್ ಡ್ಯಾಂ ನಿರ್ಮಾಣ, ಕೃಷಿಹೊಂಡ ನಿರ್ಮಾಣ, ಪಿಕಪ್ಸ್ ನಿರ್ಮಾಣ, ಕೆರೆ ಹೂಳೆತ್ತುವದು, ಚೆಕ್ ಡ್ಯಾಂ ಹೂಳೆತ್ತುವದು ಮುಂತಾದ ಕಾಮಗಾರಿಗಳನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾಲೂಕ ಅನುಷ್ಠಾನ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಯವರು ಕೈಜೋಡಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರೆ ಪ್ರತಿ ವರ್ಷ ಜರುಗುವ ವಿಶ್ವ ಜಲ ದಿನಾಚರಣೆಗೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ಹೇಳಿದರು.
ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಶರಣಯ್ಯ ಸಸಿಮಠ ಮಾತನಾಡಿ, ರಾಜ್ಯ ಸರ್ಕಾರವು ೨೦೧೯ನೇ ವರ್ಷವನ್ನು ಜಲವರ್ಷವೆಂದು ಘೋಷಿಸಿದ್ದು, ವರ್ಷಪೂರ್ತಿ ಯಶಸ್ವಿ ಕಾರ್ಯಕ್ರಮವನ್ನಾಗಿಸಬೇಕು. ೨೦೫೦ರ ವೇಳೆಗೆ ವಿಶ್ವದಲ್ಲಿ ಭೂಮಿಯೇ ಬರಡಾಗುವ ಸಾಧ್ಯತೆ ಇದ್ದು, ಅಂತರ ಜಲ ಮಟ್ಟದ ತೀವ್ರ ಆಳಕ್ಕೆ ಹೋಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಎಲ್ಲ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಜಲ ಮಹತ್ವವನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ, ತಾಲೂಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧು ಅಂಗಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಸಹಾಯಕ ಲೆಕ್ಕಾಧಿಕಾರಿ ವೈ. ಪರಿಮಳ ಸೇರಿದಂತೆ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಮತ್ತು ತಾಲೂಕ ಪಂಚಾಯತ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error