ಎನ್.ಪಿ.ಎಸ್ ಅವೈಜ್ಞಾನಿಕ-ಹೋರಾಟಕ್ಕೆ ಸಂಪೂರ್ಣ ಬೆಂಬಲ-ಸಂಸದ ಕರಡಿ ಸಂಗಣ್ಣ

ಸಂಸತ್ತಿನಲ್ಲಿ ಪ್ರಶ್ನೆಮಾಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ :

ಕೊಪ್ಪಳ, ಅ.೦೩:  ರಾಜ್ಯ ಸರ್ಕಾರವು ತನ್ನ ನೌಕರರಿಗೆ 2006 ರಿಂದ ಜಾರಿಗೆ ಬರುವಂತೆ ನೂತನ ಪಿಂಚಣಿ ಯೋಜನೆಯನ್ನು ಎನ್.ಪಿ.ಎಸ್ ಅನುಷ್ಠಾನಗೊಳಿಸಿತು. ಈ ಯೋಜನೆ ಅವೈಜ್ಞಾನಿಕವಾಗಿದ್ದು, ಭಾರತ ಸಂವಿಧಾನದ ಅನುಚ್ಛೇದ 14 ಮತ್ತು 16ಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಜಿಲ್ಲಾಡಳಿತ ಭವನದ ಮುಂದುಗಡೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕೊಪ್ಪಳ ತಾಲೂಕಿನ ಎನ್.ಪಿ.ಎಸ್ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿ ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ತನ್ನ ಇಳಿವಯಸ್ಸಿನಲ್ಲಿ ಜೀವನ ಸಾಗಿಸಲು 1912 ರಿಂದಲೇ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಯಿತು. ಪಿಂಚಣಿಯು ಸರ್ಕಾರಿ ನೌಕರರ ಮೂಲಭೂತ ಹಕ್ಕಾಗಿದ್ದು, ಅದನ್ನು ಆಯಾ ಸರ್ಕಾರಗಳು ಸಂವಿಧಾನಬದ್ಧವಾಗಿ ನೀಡಬೇಕಾದುದು ಅವುಗಳ ಕರ್ತವ್ಯವಾಗಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಪಿಂಚಣಿ ಯೋಜನೆಯನ್ನು ಸಮಾನ ಚಂದಾದಾರಿಕೆಯಲ್ಲಿ ಸರ್ಕಾರಿ ನೌಕರರಿಂದ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟು ಕಟಾವು ಮಾಡುವ ಅಂಶದಾಯಿ ಪಿಂಚಣಿ ಯೋಜನೆಯಾಗಿದೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಇದರ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಮಾಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹಾಲೇಶ ಕಂದಾರಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕ ಪ್ರತಿಭಟನಾಕಾರು ಉಪಸ್ಥಿತರಿದ್ದರು.