ಎಂ. ಕನಗವಲ್ಲಿ ಅವರಿಗೆ ಭಾವಪೂರ್ಣ ಹೃದಯಸ್ಪರ್ಶಿ ಬೀಳ್ಕೊಡುಗೆ

: ಕೊಪ್ಪಳ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳಿಂದ ಗುರುವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭಾವಪೂರ್ಣ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಕೊಪ್ಪಳ ಜಿಲ್ಲೆಯಲ್ಲಿ ೨ ವರ್ಷ ೦೯ ತಿಂಗಳು ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ್ದು, ರೈಲ್ವೆ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿಪರ ಯೋಜನೆಗಳಿಗೆ ತ್ವರಿತವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಹುಲಿಗೆಮ್ಮ ದೇವಿಯ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದು, ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿನ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಯತ್ನ ಮಾಡಿದ್ದೇನೆ. ಜಿಲ್ಲೆಯ ಜನರು ಸಹೃದಯಿಗಳಾಗಿದ್ದು, ಉತ್ತಮ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಮಾಧ್ಯಮದ ಪ್ರತಿನಿಧಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ ಎಂದರು.
ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪಿ. ಸುನೀಲ್ ಕುಮಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು, ಇಲ್ಲಿ ಸೇವೆ ಸಲ್ಲಿಸಲು ಬಂದಿರುವುದಕ್ಕೆ ಸಂತಸವಾಗಿದೆ. ಜಿಲ್ಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಅಭಿವೃದ್ಧಿಯತ್ತ ಜಿಲ್ಲೆಯನ್ನು ಕೊಂಡೊಯ್ಯುವ ಒಳ್ಳೆಯ ಸದಾವಕಾಶ ನನಗೆ ದೊರಕಿದೆ. ಕೊಪ್ಪಳ ಜಿಲ್ಲೆಗೆ ಹಲವಾರು ಉತ್ತಮ ರ್‍ಯಾಂಕಿಂಗ್ ಪಡೆದ ಐಎಎಸ್ ಅಧಿಕಾರಿಗಳು ಆಗಮಿಸಿ, ಇಲ್ಲಿನ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ಹೋಗಿದ್ದಾರೆ. ಯಾವುದೇ ಕಾರ್ಯ ಅನುಷ್ಠಾನಗೊಳ್ಳಬೇಕಾದರೆ ಉನ್ನತ ಅಧಿಕಾರಿಗಳಿಗೆ ಕೆಳಗಿನ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಒಂದು ತಂಡದಂತೆ ಕೆಲಸ ಮಾಡಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ. ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅದರ ನಿವಾರಣೆಯ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಕಂಡು ಬಂದ ಸಂದರ್ಭದಲ್ಲಿ ಕನಗವಲ್ಲಿ ಅವರು ಬಹಳಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡ ಪರಿಣಾಮವಾಗಿ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು. ಜಿಲ್ಲಾ ಪಂಚಾಯಿತಿಯೂ ಸೇರಿದಂತೆ ಯಾವುದೇ ಇಲಾಖೆಗಳಿರಲಿ, ಎಲ್ಲ ಇಲಾಖೆಗಳ ಕುರಿತು ಮಾಹಿತಿಯನ್ನು ಪಡೆದು, ಆಗಬೇಕಾದ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದ್ದರು ಎಂದರು.
ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡ ಸಿ.ಡಿ. ಗೀತಾ ಅವರು ಮಾತನಾಡಿ, ಕನಗವಲ್ಲಿ ಅವರು ತಾಳ್ಮೆ ಹಾಗೂ ಸಹನೆಯ ಪ್ರತಿರೂಪದಂತೆ ಇದ್ದರು, ಮಾತೃ ಹೃದಯಿಗಳಾಗಿದ್ದ ಅವರು, ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಶ್ರಮಿಸಿದರು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ವಿ. ಜಡಿಯವರ್, ತಹಸಿಲ್ದಾರ್ ಗುರುಬಸವರಾಜ, ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತರ ಕೊರಬು, ಸಹಾಯಕ ಕೃಷಿ ನಿರ್ದೇಶಕ ವಿ. ಕಮತರ್, ಸಿದ್ದಪ್ಪ ಹಂಚಿನಾಳ, ಗುರುರಾಜ್ ಸೇರಿದಂತೆ ಹಲವರು ಎಂ. ಕನಗವಲ್ಲಿ ಅವರ ಹೃದಯ ವೈಶಾಲ್ಯತೆ ಹಾಗೂ ಕಾರ್ಯದಕ್ಷತೆಯನ್ನು ಕೊಂಡಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಎಂ. ಕನಗವಲ್ಲಿ ಅವರ ಪತಿ ತಾನೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಎಂ. ಕನಗವಲ್ಲಿ ಅವರನ್ನು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.

Please follow and like us:
error

Related posts