ಉದ್ಯೋಗ ಮೇಳ ಎಲ್ಲೆಡೆ ನಡೆಯಲಿ -ಈಶ್ವರಪ್ಪ

ನನ್ನ ಏಳ್ಗೆಗೆ ಕೂಲಿ ಮಾಡುತ್ತಿದ್ದ ಅಮ್ಮ ಕಾರಣ
ಅಮ್ಮ ನೀಡಿದ ಸ್ಫೂರ್ತಿ ನೆನೆದ ಈಶ್ವರಪ್

ಕೊಪ್ಪಳ: ನಾನು ಉಪಮುಖ್ಯಮಂತ್ರಿಯಾಗಿದ್ದು, ಈಗ ವಿಧಾನಪರಿಷತ್ ಪ್ರತಿಪಕ್ಷದ ನಾಯಕನಾಗಿ ನಿಮ್ಮೆದುರು ನಿಂತಿದ್ದರೆ ಅದಕ್ಕೆ ಕಾರಣ ಕೂಲಿ ಮಾಡುತ್ತಿದ್ದ ಒಬ್ಬ ಹೆಣ್ಣುಮಗಳು. ಆಕೆ ನನ್ನ ಅಮ್ಮ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಂಸದ ಸಂಗಣ್ಣ ಕರಡಿ, ಅಮರೇಶ ಕರಡಿ ಹಾಗೂ ಗವಿಸಿದ್ದಪ್ಪ ಕರಡಿ ನೇತೃತ್ವದಲ್ಲಿ ಶನಿವಾರ ನಗರದ ಹೊರವಲಯದ ಮಿಲೇನಿಯಂ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಪ್ರಾರಂಭವಾದ ಎರಡು ದಿನಗಳ ಉದ್ಯೋಗ ಮೇ¼, ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಪ್ಪಳದಂತಹ ಪ್ರದೇಶದಲ್ಲಿ ಇಂತಹ ಮೇಳಗಳ ಅವಶ್ಯಕತೆ ಹೆಚ್ಚಿದೆ ಎಂದ ಈಶ್ವರಪ್ಪ, ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಂತಹ ಮೇಳಗಳು ನಡೆಯಬೇಕಿದೆ. ನಿರುದ್ಯೋಗವನ್ನು ತಗ್ಗಿಸಲು ಇದು ಅತ್ಯುತ್ತಮ ಹಾಗೂ ಸುರಭ ವಿಧಾನ ಎಂದು ಅಭಿಪ್ರಾಯಪಟ್ಟರು.
ಮೇಳಕ್ಕೆ ಆಗಮಿಸಿದ್ದ ಸುಮಾರು 5,000ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಗೂ ಪಾಲಕರನ್ನು ನೇರವಾಗಿ ಪ್ರಶ್ನಿಸಿ ಮಾತನಾಡಿದ ಈಶ್ವರಪ್ಪ, ಪ್ರತಿಯೊಂದು ಸಂದರ್ಶನಕ್ಕೆ ಹೋಗುವ ಮುನ್ನ ನಿಮ್ಮ ಮನೆಯ ಪರಿಸ್ಥಿತಿಯನ್ನು ಹಾಗೂ ತಂದೆತಾಯಿಯರನ್ನು ನೆನಪಿಸಿಕೊಳ್ಳಿ. ನೀವು ನೀಡಲಿರುವ ಸಂದರ್ಶನ ಅವರ ಬವಣೆಯನ್ನು ತಗ್ಗಿಸಬೇಕು. ನಿಮಗೆ ಉದ್ಯೋಗ ದೊರಕಿಸಿ ಕೊಡುವಂತಿರಬೇಕು ಎಂದು ತಿಳಿಹೇಳಿದರು.

ಅಮ್ಮನ ನೆನೆದ ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ ಇವತ್ತು ಈ ಸ್ಥಾನದಲ್ಲಿ ನಿಂತಿದ್ದರೆ, ಕೂಲಿ ಮಾಡಿ ಓದಿಸಿದ ಒಬ್ಬ ಹೆಣ್ಣುಮಗಳು ಕಾರಣ. ಆಕೆ ನನ್ನ ಅಮ್ಮ. ಮನೆಯ ಕಷ್ಟದ ಪರಿಸ್ಥಿತಿ ನೋಡಲಾರದೇ, ನಾನು ಓದುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗುತ್ತೇನೆ ಎಂದಿದ್ದೆ. ಆಗ ನನ್ನ ಅಮ್ಮ ಕೆನ್ನೆಗೆ ಹೊಡೆದಿದ್ದಳು. ಕೂಲಿ ಮಾಡಿಯಾದರೂ ನಿನ್ನನ್ನು ಓದಿಸುತ್ತೇನೆ ಎಂದಿದ್ದಳು. ಆಕೆ ಅಂದು ಕೆನ್ನೆಗೆ ಹೊಡೆದು ನನ್ನನ್ನು ಓದಿಗೆ ಹಚ್ಚದಿದ್ದರೆ, ಇವತ್ತು ನಾನು ಈ ಸ್ಥಾನದಲ್ಲಿ ಇರುತ್ತಿದ್ದಿಲ್ಲ ಎಂದು ಓದಿನ ಮಹತ್ವ ವಿವರಿಸಿದರು.

ಸಂದರ್ಶನ ಕಲೆಯ ಮಹತ್ವ
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ನಮ್ಮ ಮಕ್ಕಳು ಸಂದರ್ಶನ ಎದುರಿಸುವ ಕಲೆಯನ್ನು ಕಲಿಯುವುದು ಎಲ್ಲಕ್ಕಿಂತ ಮಹತ್ವದ್ದು. ಈ ಹಿನ್ನೆಲೆಯಲ್ಲಿ ನಾವು ಸಂದರ್ಶನಕ್ಕೂ ಮುನ್ನ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಆಯೋಜಿಸಿದ್ದೇವೆ. ಇಲ್ಲಿ ನೀವು ಗಳಿಸುವ ಜ್ಞಾನ ನಿಮ್ಮ ಮುಂದಿನ ದಿನಗಳಲ್ಲಿಯೂ ನೆರವಾಗುತ್ತದೆ ಎಂದರು.
ನಿರುದ್ಯೋಗ ನಿವಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಸಂಸದರು, ಇವನ್ನೆಲ್ಲ ಪಡೆದುಕೊಳ್ಳಲು ಉದ್ಯೋಗ ಮೇಳ ನೆರವಾಗಲಿದೆ. ಇಂತಹ ಮೇಳವನ್ನು ಕುಷ್ಟಗಿಯಲ್ಲಿ ಈ ಮುಂಚೆ ಸಂಘಟಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲರೇ ಇದಕ್ಕೆ ಪ್ರೇರಣೆ ಎಂದರು.
ಮಾಜಿ ಸಂಸದರಾದ ಶಿವರಾಮಗೌಡ ಮತ್ತು ಕೆ. ವಿರುಪಾಕ್ಷಗೌಡ, ಮಾಜಿ ಶಾಸಕರಾದ ಜಿ. ವೀರಪ್ಪ ಮತ್ತು ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ, ಉದ್ಯೋಗ ಮೇಳದ ಸಂಘಟಕರಾದ ಅಮರೇಶ ಕರಡಿ ಮತ್ತು ಗವಿಸಿದ್ದಪ್ಪ ಕರಡಿ ಸಹಿತ ಬಿಜೆಪಿ ನಾಯಕರು ವೇದಿಕೆಯಲ್ಲಿದ್ದರು.

Please follow and like us:
error