ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಆಡಳಿತ ಅನುಷ್ಠಾನ

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳಿಂದ ವಿವಿಧ ಗ್ರಾ.ಪಂ.ಗಳಿಗೆ ಭೇಟಿ : ಪರಿಶೀಲನೆ


ಕೊಪ್ಪಳ ಆ. : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಆಡಳಿತ ಅನುಷ್ಠಾನ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳು ಕೊಪ್ಪಳ ತಾಲೂಕಿನ ವಿವಿಧ ಪಂಚಾಯತಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳ ಕಡತಗಳು ಮತ್ತು ದಾಖಲಾತಿಗಳ ನಿರ್ವಹಣೆ ಕುರಿತು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಂತ್ರಿಕ ಸಮಾಲೋಚಕರಾದ ಸಿ.ಎಸ್. ದೇಶಮುಖ್ ಅವರು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಕಳೆದ ಎರಡು ವರ್ಷದಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳಿಗೆ ದಾಖಲಾತಿಗಳನ್ನು ಮತ್ತು ಉತ್ತಮ ಆಡಳಿತ ಅನುಷ್ಠಾನ ಅಂಶಗಳಾದ ೭ ವಹಿಗಳ ನಿರ್ವಹಣೆ, ಕಾಮಗಾರಿಗಳಿಗೆ ನಾಮಫಲಕ ಅಳವಡಿಕೆ ಪರಿಶೀಲಿಸಿದರು. ಬುಡಶೆಟ್ನಾಳ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ಗ್ರಾ.ಪಂ. ಮತ್ತು ಆರೋಗ್ಯ ಇಲಾಖೆ ವತಿಯಿಂದ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರ ಜರುಗಿಸಿದ ಬಗ್ಗೆ ಮಾಹಿತಿ ಪಡೆದರು. ಬುಡಶೆಟ್ನಾಳ ಕೆರೆ ಹೂಳೆತ್ತುವ ಕಾಮಗಾರಿ, ಚರಂಡಿ ನಿರ್ಮಾಣ, ದನದೊಡ್ಡಿ ನಿರ್ಮಾಣ, ಕೃಷಿಹೊಂಡ ನಿರ್ಮಾಣದ ಕಾಮಗಾರಿಗಳ ಕಡತದಲ್ಲಿರುವ ದಾಖಲಾತಿಗಳನ್ನು ಪರಿಶೀಲಿಸಿ, ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿಕಾರರಿಗೆ ಕೂಲಿ ಹಣವನ್ನು ನೀಡಿದ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರ ಜೊತೆ ಚರ್ಚಿಸಿದರು.
ನಂತರ ಗುಳದಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠಾನಗೊಂಡ ಬಹುಕಮಾನಿನ ಆರ್ಚ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ನೀರಿನ ಪ್ರಮಾಣ ಸಂಗ್ರಹಣ ಸಾಮರ್ಥ್ಯವನ್ನು ಪರಿಶೀಲಿಸಿ ನಂತರ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರರ ಜೊತೆ ಚರ್ಚಿಸಿ ದಾಖಲಾತಿ ಪರಿಶೀಲಿಸಿದರು. ಬೂದಗುಂಪಾ ಗ್ರಾ.ಪಂ.ಗೆ ಭೇಟಿ ನೀಡಿ, ೨೦೧೭-೧೮ ಮತ್ತು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ದಾಖಲಾತಿಗಳನ್ನು ಪರಿಶೀಲಿಸಿದರು. ಸಂಬಂಧಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಒದಗಿಸಿದರು.
ತಾಲೂಕ ಯೋಜನಾಧಿಕಾರಿ ಶರಣಯ್ಯ ಸಸಿಮಠ, ಜಿ.ಪಂ. ಎಡಿಪಿಸಿ ಮಹಾಂತಸ್ವಾಮಿ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ಎಂ.ಐ.ಎಸ್. ಸಂಯೋಜಕ ಮಂಜುನಾಥ ಸೇರಿದಂತೆ ಜವಳಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಿರಿಯ ಅಭಿಯಂತರರು, ತಾಂತ್ರಿಕ ಸಹಾಯಕರು ಹಾಜರಿದ್ದರು ಎಂದು ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ

Please follow and like us:
error

Related posts