ಉದ್ಯೋಗ ಖಾತ್ರಿ : ಬುಡಶೆಟ್ನಾಳ ಗ್ರಾಮದ ಕೆರೆ ಸ್ಥಳದಲ್ಲಿ ವಿಶೇಷ ರೋಜಗಾರ್ ದಿನಾಚರಣೆ


ಕೊಪ್ಪಳ ಡಿ.೧೨  ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡಶೆಟ್ನಾಳ ಗ್ರಾಮದ ಕೆರೆ ಸ್ಥಳದಲ್ಲಿ “ವಿಶೇಷ ರೋಜಗಾರ್ ದಿನಾಚರಣೆ” ಆಚರಿಸುವುದರ ಮೂಲಕ ಕೆರೆ ಹೂಳೆತ್ತುವ ಕಾಮಗಾರಿಗೆ ಬುಧವಾರದಂದು ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರದ ಪುರಸೃತ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಡಶೆಟ್ನಾಳ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ (ಐಇಸಿ) ನರೇಗಾ ಯೋಜನೆಯ ಕುರಿತು ವಿಶೇಷ ರೋಜಗಾರ ದಿನಾಚರಣೆ ಆಚರಿಸಲಾಯಿತು.
ವಿಶೇಷ ರೋಜಗಾರ ದಿನಾಚರಣೆ ಕುರಿತು ತಾ.ಪಂ. ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಎಂ.ಜಿ.ಎನ್.ಆರ್.ಇ.ಜಿ.ಎ. ಯೋಜನೆಯಡಿಯಲ್ಲಿ ಕೆರೆ ಹೂಳೆತ್ತುವದರಿಂದ ಮಣ್ಣು ಸಂರಕ್ಷಣೆಯಾಗುವದರ ಜೊತೆಗೆ ಅಂತರ ಜಲ ಪ್ರಮಾಣ ಹೆಚ್ಚಾಗಿ ಸುತ್ತ-ಮುತ್ತಲಿನ ಕೊಳವೆ ಬಾವಿಗಳ ನೀರಿನ ಮಟ್ಟ ಹೆಚ್ಚಾಗುತ್ತದೆ. ಕೂಲಿಕಾರರು ತಮಗೆ ನೀಡಿದ ಕೆಲಸದ ಪ್ರಮಾಣಕ್ಕೆ ಕೂಲಿ ಕೆಲಸ ನಿರ್ವಹಿಸಿದಲ್ಲಿ ಮಾತ್ರ ರೂ. ೨೪೯/- ಕೂಲಿ ಜೊತೆಗೆ ಗುದ್ದಲಿ, ಸಲಿಕೆ ಹರಿತಗೊಳಿಸಲು ರೂ.೧೦/- ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ. ಗುಳೆ ಹೋಗುವದನ್ನು ತಪ್ಪಿಸಲು ಕೆರೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಸರ್ಕಾರದ ಸುತ್ತೋಲೆಗಳಿಗೆ ನಾವೆಲ್ಲರೂ ಬದ್ದರಾಗಿ ಈ ಯೋಜನೆಯಲ್ಲಿ ಭಾಗವಹಿಸಿ ಕೂಲಿ ನಿರ್ವಹಿಸಬೇಕು. ಕಳೆದ ಸಾಲಿನಲ್ಲಿ ಜಾಬಕಾರ್ಡ ಹೊಂದಿದ ಯಜಮಾನ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು ಕೂಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ ಸರ್ಕಾರದ ಸುತ್ತೋಲೆ ಹೊರಡಿಸಿದ್ದು, ಜಾಬಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಬ್ಯಾಂಕ್ ಖಾತೆ ಹೊಂದಿ ಜೊತೆಗೆ ಆಧಾರಕಾರ್ಡ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲು ಆಧಾರ ಕಾರ್ಡನ ಜೆರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ನೀಡಿ ಲಿಂಕ್ ಮಾಡಲು ಎಲ್ಲರೂ ಅನುಸರಿಸಬೇಕು. ಪ್ರಸಕ್ತ ಸಾಲಿನ ಮಳೆಯ ಪ್ರಮಾಣ ಕಡಿಮೆ ಆಗಿರುವದರಿಂದ ಕೂಲಿಕಾರರು ಗುಳೆ ಹೋಗದೇ ಗ್ರಾಮ ಪಂಚಾಯತಿಯ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆರ್ಥಿಕ ಜೀವನಮಟ್ಟ ಸುಧಾರಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಅಡಿವೆಮ್ಮ ಅರ್ಜುನ ಒಂಟೆತ್ತಿನವರ ಈ ಯೋಜನೆಗೆ ಚಾಲನೆ ನೀಡಿದರು. ಇಂದು ೪೬ ಜನ ಕೂಲಿಕಾರರು ಕೆಲಸಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ದಾನಪ್ಪ ಸಂಗಟಿ, ಗ್ರಾ.ಪಂ. ಸದಸ್ಯರಾದ ಸುರೇಶ ಯಲಬುರ್ಗಿ, ಶರಣಪ್ಪ ಮುರಡಿ, ನಾಗಪ್ಪ ಹಳ್ಳಿಕೇರಿ ಮತ್ತು ತಾಂತ್ರಿಕ ಸಹಾಯಕ ವಿಜಯಕುಮಾರ ಬಂಡಿ, ಕಾರ್ಯದರ್ಶಿ ಮಲ್ಲಕಾಜಪ್ಪ ಕಮ್ಮಾರ, ಸಿಬ್ಬಂದಿಗಳಾದ ಬಸವರಾಜೇಶ್ವರಿ ಸಂಗಾಪುರ, ಕುಮಾರ ಪರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Please follow and like us:
error