ಉದ್ಯೋಗಮೇಳ ಯಶಸ್ವಿ: ೧,೪೦೦ ಅಭ್ಯರ್ಥಿಗಳ ನೇಮಕಾತಿ 

೪,೫೦೦ ಆಕಾಂಕ್ಷಿಗಳ ನೋಂದಣಿ | ೨,೩೦೦ ಜನರಿಗೆ ಅಂತಿಮ ಹಂತಕ್ಕೆ ಆಹ್ವಾನ೪,೫೦೦ ಆಕಾಂಕ್ಷಿಗಳ ನೋಂದಣಿ | ೨,೩೦೦ ಜನರಿಗೆ ಅಂತಿಮ ಹಂತಕ್ಕೆ ಆಹ್ವಾನ


ಕೊಪ್ಪಳ: ನಗರದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಬೃಹತ್ ಉದ್ಯೋಗಮೇಳ ಅಭೂತಪೂರ್ವ ಯಶಸ್ಸು ಕಂಡಿದ್ದು ಒಟ್ಟು ೧,೪೦೦ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ.ಸಂಸದ ಸಂಗಣ್ಣ ಕರಡಿ ಹಾಗೂ ಅವರ ಪುತ್ರರಾದ ಅಮರೇಶ ಕರಡಿ ಮತ್ತು ಗವಿಸಿದ್ದಪ್ಪ ಕರಡಿ ನಗರದ ಹೊರಲವಯದ ಮಿಲೇನಿಯಂ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಘಟಿಸಿದ್ದ ಈ ಬೃಹತ್ ಉದ್ಯೋಗಮೇಳದಲ್ಲಿ ಭಾನುವಾರ ಒಟ್ಟು ೪,೫೦೦ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ ೧,೪೦೦ ಅಭ್ಯರ್ಥಿಗಳಿಗೆ ಸಂದರ್ಶನ ಮುಗಿದ ಕೂಡಲೇ ಆಹ್ವಾನ ಪತ್ರ (ಲೆಟರ್ ಆಫ್ ಇಂಟೆಂಟ್) ನೀಡಲಾಯಿತು. ಉಳಿದ ೨,೩೦೦ ಅಭ್ಯರ್ಥಿಗಳನ್ನು ಎರಡನೇ ಹಾಗೂ ಅಂತಿಮ ಹಂತಕ್ಕೆ ಆಹ್ವಾನಿಸಲಾಗಿದೆ. ಈ ಹಂತ ಎದುರಿಸುವ ಕುರಿತು ಕೌಶಲ್ಯ ತರಬೇತಿಯಲ್ಲಿ ಸಾಕಷ್ಟು ಸುದೀರ್ಘ ತರಬೇತಿ ನೀಡಲಾಗಿದ್ದು, ಸುಮಾರು ೧,೫೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ನೇಮಕ ಹೊಂದುವ ಸಾಧ್ಯತೆಗಳಿವೆ.ಭಾನುವಾರ ಈ ಎಲ್ಲ ಅಂಕಿಅಂಶಗಳನ್ನು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವರಿಸಿದ ಸಂಸದ ಸಂಗಣ್ಣ ಕರಡಿ, ಉದ್ಯೋಗ ಮೇಳ ಇಷ್ಟೊಂದು ಯಶಸ್ಸು ಕಂಡಿರುವುದು ತೀವ್ರ ಸಂತಸ ತಂದಿದೆ. ೧,೪೦೦ ಅಭ್ಯರ್ಥಿಗಳಿಗೆ ಕೆಲಸದ ಖಾತರಿ ಸಿಕ್ಕಿದ್ದು ಹಾಗೂ ಇನ್ನೂ ೧,೫೦೦ ಅಭ್ಯರ್ಥಿಗಳು ಕೆಲಸ ಪಡೆಯುವ ಸಾಧ್ಯತೆ ಇರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಕೊಪ್ಪಳದ ಯುವಜನತೆ ಅತ್ಯಂತ ಕ್ರಿಯಾಶೀಲರು ಎಂಬುದನ್ನು ಈ ಮೇಳದ ಯಶಸ್ಸು ಸಾಬೀತುಪಡಿಸಿದೆ. ಕೌಶಲ್ಯ ತರಬೇತಿ ನೀಡಿದ್ದೇ ಈ ದೊಡ್ಡ ಪ್ರಮಾಣದ ಯಶಸ್ಸಿಗೆ ಕಾರಣ ಎಂಬ ಅಭಿಪ್ರಾಯವನ್ನು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. ನಮ್ಮ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅವರಿಗೆ ನಿರಂತರವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುವುದು. ಜೊತೆಗೆ, ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ, ಮುದ್ರಾ ಯೋಜನೆಯಂತಹ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಗಣ್ಣ ಕರಡಿ ಹೇಳಿದರು.ಉದ್ಯೋಗ ಮೇಳದ ಸಂಘಟಕ ಅಮರೇಶ ಕರಡಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದೂ ಕೆಲಸ ಸಿಗದವರ ಸಂಖ್ಯೆ ತೀರಾ ಕಡಿಮೆಯಿದೆ. ಆದರೆ, ಅವರು ನಿರಾಶರಾಗಬೇಕಿಲ್ಲ. ನಿಮ್ಮ ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕ ರೀತಿಯ ಕೌಶಲ್ಯ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿರುವ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅವಕಾಶವಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಪ್ರಯತ್ನದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಮನಸ್ಸು ಮಾಡಬೇಕು ಎಂದರು.ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಹಾಲಪ್ಪ ಆಚಾರ, ನವೀನ ಗುಳಗಣ್ಣವರ, ಕೆ. ಶರಣಪ್ಪ, ತಿಪ್ಪೇರುದ್ರಸ್ವಾಮಿ ಮಾತನಾಡಿ ಆಯೋಜನಕರಿಗೆ ಅಭಿನಂದನೆ ಸಲ್ಲಿಸಿದರು. ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ,  ಶಿವಶರಣಪ್ಪಗೌಡ ಪಾಟೀಲ, ರಾಜಶೇಖರ ಪಾಟೀಲ, ದೊಡ್ಡ ಬಸವರಾಜ, ಸಂಜೀವ ಕುಮಾರ ಸೇರಿದಂತೆ ಇತರರು ಇದ್ದರು.—–

೪೬೩ ಜನರಿಗೆ ಮುದ್ರಾ ಸಾಲ 
ಉದ್ಯೋಗ ಮೇಳದ ಭಾಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮುದ್ರಾ ಯೋಜನೆಯಡಿ ಒಟ್ಟು ೪೬೩ ಜನರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಯಿತು. ಅವರವರ ಕೌಶಲ್ಯ, ಅನುಭವ ಹಾಗೂ ಆಸಕ್ತಿಯ ಹಿನ್ನೆಲೆಯಲ್ಲಿ, ಸಂಬಂಧಿಸಿದ ಕ್ಷೇತ್ರದಲ್ಲಿ ಉದ್ಯೋಗ ಕೈಗೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತೂ ಅವರಿಗೆ ಮಾಹಿತಿ ಒದಗಿಸಲಾಗಿದೆ. ಸಂಸದ ಸಂಗಣ್ಣ ಕರಡಿ, ನವೀನ ಗುಳಗಣ್ಣವರ, ಕೆ. ಶರಣಪ್ಪ, ಅಮರೇಶ ಕರಡಿ, ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಮುಂತಾದವರು ಮುದ್ರಾ ಯೋಜನಾ ಪತ್ರಗಳನ್ನು ವಿತರಿಸಿದರು.
ಶಿಶು (ರೂ.೫೦,೦೦೦ವರೆಗೆ) ೪೧೭ ಅಭ್ಯರ್ಥಿಗಳು ರೂ.೧,೯೬,೦೫,೦೦೦ಕಿಶೋರ್ (ರೂ. ೫ ಲಕ್ಷದವರೆಗೆ) ೪೩ ಅಭ್ಯರ್ಥಿಗಳು ರೂ.೭೪,೮೦,೦೦೦ತರುಣ (ರೂ.೧೦ ಲಕ್ಷದವರೆಗೆ) ೩ ಅಭ್ಯರ್ಥಿಗಳು ರೂ.೨೦,೨೪,೦೦೦ಒಟ್ಟು ೪೬೩ ಅಭ್ಯರ್ಥಿಗಳು ರೂ.೨,೯೧,೦೯,೦೦೦

Please follow and like us:
error