ಉದ್ಯೋಗಖಾತ್ರಿ ಕೆಲಸದ ಸ್ಥಳದಲ್ಲಿರುವ ಮಕ್ಕಳಿಗೂ ಪೂರಕ ಪೌಷ್ಠಿಕ ಆಹಾರ ನೀಡಿ- ಉಮಾ ಮಹದೇವನ್

ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆಯಡಿ ಕೆಲಸ ಮಾಡುವ ಕೂಲಿಕಾರರ ೦೬ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೂರಕ ಪೌಷ್ಠಿಕ ಆಹಾರ ನೀಡುವ ಕಾರ್ಯವನ್ನು ಕೂಡಲೆ ಪ್ರಾರಂಭಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಯುವುದು, ನಮ್ಮ-ಹೊಲ ನಮ್ಮ ದಾರಿ ಹೀಗೆ ಸಮುದಾಯಿಕ ಕಾಮಗಾರಿಗಳನ್ನು ಕೈಗೊಳ್ಳಲು ಬರುವ ಕೂಲಿಕಾರರ ೦೬ ವರ್ಷದೊಳಗಿನ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ವತಿಯಿಂದ ಪೂರಕ ಪೌಷ್ಠಿಕ ಆಹಾರವನ್ನು ಪೂರೈಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಯಿ-ಶಿಶು ಮರಣ ತಪ್ಪಿಸಲು ಮಾತೃಪೂರ್ಣ : ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ರಕ್ತ ಹೀನತೆ ಬಹುತೇಕ ಕಾರಣವಾಗಿದ್ದು, ಇಂತಹ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಜೊತೆಗೆ ಬಿಸಿಯೂಟ ನೀಡುವಂತಹ ಮಾತೃ ಪೂರ್ಣ ಯೋಜನೆಯನ್ನು ಈಗಾಗಲೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದು, ಆಗಸ್ಟ್ ತಿಂಗಳಿನಿಂದ ಈ ಯೋಜನೆ ಎಲ್ಲೆಡೆ ಜಾರಿಗೆ ಬರಲಿದೆ ಎಂದರು.
ಮೈತ್ರಿ ಯೋಜನೆಗೆ ವಿಶೇಷ ಕಾರ್ಯಕ್ರಮ ರೂಪಿಸಿ : ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಾಶನ ನೀಡುವಂತಹ ಮೈತ್ರಿ ಯೋಜನೆಯನ್ನು ಸರ್ಕಾರ koppal-dc-koppal-nodal-secretaryಜಾರಿಗೊಳಿಸಿದ್ದು, ಈ ಯೋಜನೆಗಾಗಿ ೨೦೧೬-೧೭ ರಲ್ಲಿ ಕೇವಲ ೦೬ ಅರ್ಜಿಗಳು ಮಾತ್ರ ಜಿಲ್ಲೆಯಲ್ಲಿ ಸ್ವೀಕೃತಗೊಂಡು, ೩ ಅರ್ಜಿಗಳು ವಿಲೇವಾರಿಯಾಗಿವೆ. ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹೇಳಿದರು. ಲೈಂಗಿಕ ಅಲ್ಪಸಂಖ್ಯಾತರು ಮೈತ್ರಿ ಯೋಜನೆಯ ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿಲ್ಲ. ಇದಕ್ಕೆ, ಒಂದೆಡೆ ಅವರು ನೆಲೆಸದಿರುವುದು ಸೇರಿದಂತೆ ಹಲವು ಕಾರಣಗಳಿವೆ ಎಂದು ತಹಸಿಲ್ದಾರರು ಸಭೆಯ ಗಮನಕ್ಕೆ ತಂದರು. ’ಸಮೂಹ’ ನಂತಹ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಇದಕ್ಕಾಗಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ, ಮೈತ್ರಿ ಯೋಜನೆಯ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಮಾಸಾಶನ ದೊರೆಯುವಂತೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಆದ್ಯತೆ : ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈಗಾಗಲೆ ಸುತ್ತೋಲೆ ಹೊರಡಿಸಲಾಗಿದೆ. ಜಿಲ್ಲೆಯಲ್ಲಿಯೂ ಈ ವಿಷಯದ ಬಗ್ಗೆ ಗಮನಹರಿಸಿ, ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ನೇಮಕ ಮಾಡಲು ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಡಿಸಿಎಫ್ ಪ್ರಭಾಕರನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:

Leave a Reply