ಉದ್ಯೋಗಖಾತ್ರಿಯಡಿ ತುಂಗಭದ್ರಾ ಹೂಳು ತೆಗೆಸಲು ಸರ್ಕಾರಕ್ಕೆ ಮನವಿ- ಬಸವರಾಜ ರಾಯರಡ್ಡಿ

ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ತೆಗೆಸಲು ಸಾಧ್ಯಾಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದ್ದು, ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕೊಪ್ಪಳ ತಾಲೂಕು ಹಿರೇಕಾಸನಕಂಡಿ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಹೂಳು ತೆಗೆಯುತ್ತಿರುವ ಪ್ರದೇಶಕ್ಕೆ ಭಾನುವಾರದಂದು ಭೇಟಿ ನೀಡಿ, ನಂತರ ಅಲ್ಲಿನ ರೈತರೊಂದಿಗೆ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದಲ್ಲಿ ಸುಮಾರು ೩೦ ಟಿಎಂಸಿ ಯಷ್ಟು ಹೂಳು ತುಂಬಿರುವುದಾಗಿ ತಜ್ಞರು ವರದಿ ನೀಡಿದ್ದು, ಹೂಳು ತೆಗೆಯುವುದು ಅಸಾಧ್ಯ ಎಂದು ವೈಜ್ಞಾನಿಕ ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರವೂ ಕೂಡ ಇಲ್ಲಿನ ಹೂಳನ್ನು ತೆಗೆಸಲು ಜಾಗತಿಕ ಟೆಂಡರ್ ಕರೆಯಿತು. ಇದರಿಂದ ಯಾವುದೇ ಯಶಸ್ಸು ದೊರೆಯಲಿಲ್ಲ. ನಂತರ ಹೂಳು ತೆಗೆಸಲು ಸಾಧ್ಯವಿರುವ ಎಲ್ಲ ಕ್ರಮಗಳ ಬಗ್ಗೆ ಪರಿಶೀಲಿಸಿ, ನೀರಾವರಿ ತಜ್ಞರು, ಉನ್ನತ ಅಧಿಕಾರಿಗಳು, ಹಾಗೂ ರಾಜ್ಯ ಮಟ್ಟದ ಉನ್ನತ ಮಟ್ಟದಲ್ಲಿ ಸಮಾಲೋಚಿಸಿದ ನಂತರವೇ, ಹೂಳು ತೆಗೆಸುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಅಲ್ಲದೆ ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತಂತೆ ಸರ್ಕಾರ ಈಗಾಗಲೆ ಅಗತ್ಯ ಕ್ರಮ ಕೈಗೊಂಡಿದೆ. ಆದಾಗ್ಯೂ, ಈ ಭಾಗದ ರೈತರು, ಸಾಮಾಜಿಕ ಚಿಂತಕರು, ಸಮಾಜ ಸೇವಕರು ಸ್ವಯಂ ಪ್ರೇರಿತರಾಗಿ ಹೂಳು ತೆಗೆಯಲು ಮುಂದಾಗಿದ್ದಕ್ಕೆ ಅವರೆಲ್ಲರನ್ನು ಅಭಿನಂದಿಸುತ್ತೇನೆ. ಇಂತಹ ಉತ್ತಮ ಪ್ರಯತ್ನಕ್ಕೆ ತಾವು ಎಂದೂ ಬೆಂಬಲವನ್ನು ನೀಡುತ್ತೇನೆ. ಹೂಳು ತೆಗೆಯುವ ಸಲುವಾಗಿ ತಾವು ಹಾಗೂ ತಮ್ಮ ಗೆಳೆಯರ ಬಳಗದ ವತಿಯಿಂದ ೦೫ ಲಕ್ಷ ರೂ. ಗಳ ದೇಣಿಗೆಯನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಘೋಷಿಸಿದರು. ಕೆರೆ ಹೂಳೆತ್ತುವುದು, ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ತೀವ್ರ ಬರ ಪರಿಸ್ಥಿತಿಯಲ್ಲಿ ಇಂತಹ ಯೋಜನೆಗಳು ಕೂಲಿಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ತುಂಗಭದ್ರಾ ಜಲಾಶಯದ ಹೂಳನ್ನು ಉದ್ಯೋಗಖಾತ್ರಿಯಡಿ ತೆಗೆಸಲು ನಿಯಮಗಳಲ್ಲಿ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ಹೇಳಬೇಕಾಗುತ್ತದೆ. ಈ ದಿಸೆಯಲ್ಲಿ ಯೋಜನೆಯನ್ನು ಬಳಸುವ ಕುರಿತು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಹೂಳು ತೆಗೆಸಲು ರೈತರು ಸಲ್ಲಿಸಿರುವ ಬೇಡಿಕೆ ಬಗ್ಗೆ ಅವರ ಗಮನಕ್ಕೆ ತರಲಾಗುವುದು. ಅಲ್ಲದೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಸಚಿವ ಎಚ್.ಕೆ. ಪಾಟೀಲರನ್ನು ಈ ಪ್ರದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗುವುದು. ರೈತರು, ಸಾಮಾಜಿಕ ಚಿಂತಕರು, ಸಮಾಜ ಸೇವಕರು ಒಂದಾಗಿ ಸ್ವಯಂ ಪ್ರೇರಿತವಾಗಿ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಅವರನ್ನು ಅಭಿನಂದಿಸುವುದಾಗಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ, ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಗಣ್ಯರಾದ ವಿರುಪಾಕ್ಷಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು, ಸಮಾಜ ಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Please follow and like us:
error

Related posts

Leave a Comment