fbpx

ಉದ್ದಿಮೆದಾರರು ತಮ್ಮ ವ್ಯಾಪ್ತಿಯ ರಸ್ತೆಗಳನ್ನು ತಾವೇ ನಿರ್ಮಿಸಿಕೊಳ್ಳಬೇಕು : ಬಿ.ಸಿ. ಪಾಟೀಲ್


ಕೊಪ್ಪಳ,  : ಉದ್ದಿಮೆಗಳ ಸರಕು ಸಾಗಾಣಿಕೆಗಾಗಿ ತಮ್ಮ ವ್ಯಾಪ್ತಿಯಲ್ಲಿ ಓಡಾಡುವ ವಾಹನಗಳು ಅಗತ್ಯಕ್ಕಿಂತ ಹೆಚ್ಚು ಟನ್ ಭಾರದ ವಸ್ತುಗಳನ್ನು ಸಾಗಿಸುತ್ತಿರುವುದರಿಂದ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ತಾವೇ ನಿರ್ಮಿಸಿಕೊಳ್ಳಬೇಕು ಎಂದು ಕೃಷಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿ ಮತ್ತು ಜಿಲ್ಲೆಯ ಉದ್ದಿಮೆದಾರರೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಲವರ್ತಿ ಮತ್ತು ಹೊಸಳ್ಳಿ ರಸ್ತೆ ತೀರಾ ಹದಗೆಟ್ಟಿದ್ದು, ಇದರಿಂದ ಆ ಹಳ್ಳಿಗಳ ಜನರಿಗೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ, ರೈತರ ಬೆಳೆಗಳಿಗೆ ಹಾನಿ ಮತ್ತು ಪರಿಸರ ಮಾಲಿನ್ಯದಿಂದ ಅಲ್ಲಿಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಹಾಲವರ್ತಿ ಮತ್ತು ಹೊಸಳ್ಳಿ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಿಕೊಳ್ಳಿ. ನಮ್ಮ ಸರ್ಕಾರದಿಂದ ಕೂಡ ತಮಗೆ ಸಹಾಯ ಮಾಡಲಾಗುವುದು ಎಂದು ಉದ್ದಿಮೆದಾರರಿಗೆ ಸೂಚನೆ ನೀಡಿದರು.
ಆರ್‌ಟಿಒ ಗೆ ಈ ಹಿಂದಿನ ಕೆ.ಡಿ.ಪಿ ಸಭೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಭಾರ ಹೊಂದಿದ  ವಾಹನಗಳ ಸಂಚಾರದ ತಪಾಸಣೆ ಮತ್ತು ಎಷ್ಟು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂಬ ಕುರಿತು ಮಾಹಿತಿ ನೀಡುವಂತೆ ತಿಳಿಸಲಾಗಿತ್ತು, ಆದರೆ ಇದುವರೆಗೂ ಸರಿಯಾದ ಮಾಹಿತಿ ನೀಡದ ಆರ್‌ಟಿಒ ಅವರಿಗೆ ತರಾಟೆಗೆ ತೆಗೆದುಕೊಂಡು, ಇನ್ನು ಮುಂದೆ ಕಟ್ಟುನಿಟ್ಟಾಗಿ ತಪಾಸಣೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಲಾಕ್‌ಡೌನ್ ಇರುವುದರಿಂದ ಉದ್ದಿಮೆಗಳು ನಷ್ಟದಲ್ಲಿದ್ದು, ಈಗ ಮಾರುಕಟ್ಟೆಯಲ್ಲಿಯೂ ಬೆಲೆಯಿಲ್ಲ ಅದರೊಂದಿಗೆ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾಗಿದ್ದು, ಸರ್ಕಾರದಿಂದಲೇ ಈ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಉದ್ದಿಮೆದಾರರು ಮನವಿ ಮಾಡಿದಾಗ, ಸಚಿವರು ಸರ್ಕಾರದಿಂದಲೂ ತಮಗೆ ಸಹಾಯ ಮಾಡಲಾಗುವುದು ಜೊತೆಗೆ ನೀವುಗಳು ಆದಷ್ಟು ಬೇಗನೆ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿ ಎಂದು ಸೂಚನೆ ನೀಡಿದರು.
ಕೊಪ್ಪಳ ನಗರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಉದ್ದಿಮೆಗಳಿಂದ ನಮ್ಮ ರೈತರ ಬೆಳೆ ಹಾನಿ, ಪರಿಸರ ಮಾಲಿನ್ಯ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ ನಾವೇಕೆ ಸುಮ್ಮನೆ ಕೂತಿದ್ದೇವೆ ಎಂದರೆ ನಮ್ಮ ಭಾಗದ ಹಲವಾರು ಜನರಿಗೆ ಉದ್ಯೋಗವನ್ನು ತಾವು ಕೊಟ್ಟಿದ್ದೀರಿ ಎಂಬ ಕಾರಣದಿಂದ. ಹಾಗಾಗಿ ಈ ರಸ್ತೆಯನ್ನು ಸಂಪೂರ್ಣವಾಗಿ ತಾವೇ ನಿರ್ಮಿಸಿ ಎಂದು ಹೇಳುತ್ತಿಲ್ಲ, ಸರ್ಕಾರದ ವತಿಯಿಂದಲೂ ತಮಗೆ ಶೇ.50 ರಷ್ಟು ಸಹಾಯ ಮಾಡಲಾಗುತ್ತದೆ. ಈಗಾಗಲೇ ಈ ರಸ್ತೆಯ ಮೇಲೆ ಕಳಪೆ ರಸ್ತೆಯ ಕಾರಣದಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಆದ್ದರಿಂದ ತಾವು ಯಾವುದೇ ನೆಪ ಹೇಳದೆ ಆದಷ್ಟು ಬೇಗನೆ ರಸ್ತೆ ನಿರ್ಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ನಾವು ಕೇಳಿದಾಗೊಮ್ಮೆ ಟ್ರಾನ್ಸಪೋರ್ಟ್ ಸಮಸ್ಯೆ, ಕಾರ್ಮಿಕರ ಸಮಸ್ಯೆ ಹೇಳುತ್ತೀರಿ. ಈ ರಸ್ತೆಯಲ್ಲಿ ತಮ್ಮ ವಾಹನಗಳು ಓಡಾಡಲು ಅನುಕೂಲವಾಗುವುದಕ್ಕಾಗಿ ತಮಗೆ ಹೇಳುತ್ತಿದ್ದೇವೆ. ತಾವು ಶೇ. 50 ರಷ್ಟು ಹಣ ನೀಡಿ ನಾವು ಸಚಿವರೊಂದಿಗೆ ಚರ್ಚಿಸಿ ಸರ್ಕಾರದಿಂದ ಶೇ.50 ರಷ್ಟು ಹಣವನ್ನು ಸರ್ಕಾರದಿಂದ ಕೊಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ, ಜಿಲ್ಲೆಯ ವಿವಿಧ ಉದ್ದಿಮೆಗಳ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error
error: Content is protected !!