ಉಡಾನ್ ಅಡಿ ಶೀಘ್ರ ವಿಮಾನಯಾನ ಆರಂಭಿಸಿ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಮನವಿ

| ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್‌ಗೆ ಮನವಿ ಸಲ್ಲಿಕೆ
ಕೊಪ್ಪಳ:
ಕೊಪ್ಪಳ ಜಿಲ್ಲೆಗೆ ಈಗಾಗಲೇ ಜಾರಿಯಾಗಿರುವ ಉಡಾನ್ ಯೋಜನೆಯಡಿ ಶೀಘ್ರದಲ್ಲೇ ವಿಮಾನಯಾನ ಆರಂಭಿಸಬೇಕು ಎಂದು ಒತ್ತಾಯಿಸಿ ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್ ಖರೋಲಾ ಅವರಿಗೆ ಕೊಪ್ಪಳ ಸಂಸದರಾದ ಶ್ರೀ ಸಂಗಣ್ಣ ಕರಡಿ ಅವರು ಮನವಿಪತ್ರ ಸಲ್ಲಿಸಿ ಕೋರಿದರು.
ನವದೆಹಲಿಯಲ್ಲಿ ಬುಧವಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಸಂಗಣ್ಣ ಕರಡಿಯವರು, ಕೊಪ್ಪಳ ಜಿಲ್ಲೆಗೆ ಕಳೆದ ಅವಧಿಯಲ್ಲೇ ಉಡಾನ್ ಯೋಜನೆಯಡಿ ವಿಮಾನಯಾನಕ್ಕೆ ಅವಕಾಶ ನೀಡಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇರುವ ಕೆಲ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ ಕೂಡಲೇ ವಿಮಾನಯಾನ ಆರಂಭಿಸಬೇಕು ಎಂದು ಕೋರಿದ್ದಾರೆ.
ಹಿಂದುಳಿದ ಕೊಪ್ಪಳ ಜಿಲ್ಲೆಗೆ ಕೇಂದ್ರ ಸರ್ಕಾರದ ಇಂತಹ ಮಹತ್ವಕಾಂಕ್ಷಿ ಯೋಜನೆಗಳು ಜಾರಿಗೊಳ್ಳುವುದರಿಂದ ನಮ್ಮ ಭಾಗದ ಜನತೆಗೆ ಹೆಚ್ಚು ಅನುಕೂಲವಾಗುತ್ತದೆ. ದೆಹಲಿ, ಹೈದಾರಾಬಾದ್, ಮುಂಬೈ, ಕಲ್ಕತ್ತ ಸೇರಿದಂತೆ ವಿದೇಶಗಳಿಗೆ ತೆರಳಲು ಬಳ್ಳಾರಿಯ ಜಿಂದಾಲ್, ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿಯೇ ನಮ್ಮ ಭಾಗದ ಜನತೆ ವಿಮಾನಯಾನ ಮಾಡಬೇಕಿದೆ. ನಮ್ಮ ಭಾಗದಲ್ಲೇ ಇದೀಗ ಖಾಸಗಿ ವಿಮಾನ ನಿಲ್ದಾಣ ಇದ್ದು, ಅದೇ ನಿಲ್ದಾಣದ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡು ಕೂಡಲೇ ವಾಯುಯಾನ ಆರಂಭಿಸಬೇಕು. ಇದೀಗ ನಮ್ಮ ಕ್ಷೇತ್ರದ, ಜಿಲ್ಲೆಯ ಜನತೆಗೆ ಇದರಿಂದಾಗುತ್ತಿರುವ ಅನಾನುಕೂಲ ತಪ್ಪಿಸಬೇಕು. ರಾಜ್ಯ ಸರ್ಕಾರದೊಂದಿಗೆ ಕೂಡಲೇ ಮಾತುಕತೆ ನಡೆಸಿ ರಾಜ್ಯದಿಂದ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಕೂಡಲೇ ವಾಯುಯಾನ ಆರಂಭಿಸಿ ನಮ್ಮ ಭಾಗದ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಇಲಾಖೆ ಜಂಟಿ ಕಾರ್ಯದರ್ಶಿ ಉಷಾ ಪಡಿ ಸೇರಿದಂತೆ ಹಲವರು ಇದ್ದರು.

ಫೋಟೋ-೧
ಉಡಾನ್ ಯೋಜನೆಯಡಿ ಕೊಪ್ಪಳದಲ್ಲಿ ವಿಮಾನಯಾನ ಆರಂಭಿಸುವಂತೆ ಕೋರಿ ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್ ಖರೋಲಾ ಅವರಿಗೆ ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಮನವಿಪತ್ರ ಸಲ್ಲಿಸಿದರು.

Please follow and like us:
error