You are here
Home > Koppal News > ಉಜ್ವಲ್ ಪ್ಲಸ್ ಅಡಿ ಗ್ಯಾಸ್ ಕಿಟ್ | ಅಗಳಕೇರಾ, ಹುಲಿಗಿ ಗ್ರಾಮದ ಫಲಾನುಭವಿಗಳಿಗೆ ವಿತರಣೆ

ಉಜ್ವಲ್ ಪ್ಲಸ್ ಅಡಿ ಗ್ಯಾಸ್ ಕಿಟ್ | ಅಗಳಕೇರಾ, ಹುಲಿಗಿ ಗ್ರಾಮದ ಫಲಾನುಭವಿಗಳಿಗೆ ವಿತರಣೆ


ಹೊಗೆರಹಿತ ಗ್ರಾಮ ಮಾಡುವುದೇ ಪ್ರಧಾನಿ ಆಶಯ: ಅಮರೇಶ ಕರಡಿ

ಕೊಪ್ಪಳ: ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಇಡೀ ದೇಶವನ್ನು ಹೊಗೆರಹಿತ ಗ್ರಾಮಗಳನ್ನಾಗಿ ಮಾಡುವ ಉದ್ದೇಶವಿದೆ. ಅದಕ್ಕಾಗಿಯೆ ಬಡ ಕುಟುಂಬಗಳಿಗೆ ಉಜ್ವಲ್ ಯೋಜನೆ ಜಾರಿಗೆ ತಂದು ಬಡವರಿಗೆ ಗ್ಯಾಸ್ ಕಿಟ್ ವಿತರಿಸುವ ಕಾರ್ಯ ಗೈಗೊಂಡಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ್ ಕರಡಿ ಹೇಳಿದರು.
ತಾಲೂಕಿನ ಅಗಳಕೇರಾ ಮತ್ತು ಹುಲಿಗಿ ಗ್ರಾಮಗಳಲ್ಲಿ ಉಜ್ವಲ ಪ್ಲಸ್ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಗ್ಯಾಸ್ ಕಿಟ್ ವಿತರಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರು ಸ್ವತಃ ಬಡತನದಲ್ಲಿ ಹುಟ್ಟಿ ಬೆಳೆದ ಕಾರಣ ಅವರಿಗೆ ಬಡವರ ಕಷ್ಟಗಳು ಏನು ಎಂದು ಹತ್ತಿರದಿಂದ ಬಲ್ಲವರು. ಹೀಗಾಗಿ ಬಡವರ ಏಳಿಗೆಗಾಗಿ ಅಧಿಕಾರಕ್ಕೆ ಬಂದ ನಂತರ ಅನೇಕ ಜನಪರ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ಮಾಡದೆ ಉತ್ತಮ ಆಡಳಿತ ನೀಡಿದ ಕೀರ್ತಿ ಅವರದ್ದು ಎಂದು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದ್ದು, ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಲಿದೆ. ಕಾಂಗ್ರೆಸ್ ಯೋಜನೆಗೆ ಜೆಡಿಎಸ್ ಎಳ್ಳುನೀರು ಬಿಟ್ಟರೆ, ಜೆಡಿಎಸ್ ಯೋಜನೆಯಳನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಇದರಲ್ಲಿಯೇ ಈ ಸರ್ಕಾರ ಕಾಲಹರಣ ಮಾಡಲಿದೆ. ಮುಂಗಾರು ಆರಂಭವಾಗಿದ್ದು, ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ವಿತರಣೆ ಮಾಡುವ ಬದಲು ಸಚಿವಗಿರಿಗೆ ಕಿತ್ತಾಡಿದರು. ಇನ್ನು ರೈತರ ಸಾಲ ಮನ್ನಾ ಮಾಡುತ್ತೇನೆ ಎಂದ ಸಿಎಂ ಕುಮಾರಸ್ವಾಮಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದಲ್ಲದೆ ಫಸಲ ಬಿಮಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ಬಿಡಗಡೆ ಮಾಡಿದರೂ ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಹಣ ಜಮಾ ಮಾಡುವಂತೆ ವಿಮಾ ಕಂಪನಿಗಳಿಗೆ ಒತ್ತಡ ಹಾಕುತ್ತಿಲ್ಲ. ಇದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇದು ಈ ಸಮ್ಮಿಶ್ರ ಸರ್ಕಾರಕ್ಕೆ ಅರ್ಥ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಉತ್ತಮ ಆಡಳಿತ, ಅಭಿವೃದ್ಧಿ ಕಾರ್ಯಗಳು ಆಗಬೇಕೆಂದರೆ ಸ್ಥಿರ ಸರ್ಕಾರ, ಒಂದೇ ಪಕ್ಷದ ಸರ್ಕಾರ ಜಾರಿಗೆ ಬರಬೇಕು. ಅಂದಾಗ ಮಾತ್ರ ಅವುಗಳು ಸಾಧ್ಯ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಕೇವಲ ಕಾಲೆಳೆಯುವ ಕೆಲಸ ಮಾತ್ರ ಆಗುತ್ತದೆ. ಈ ಸರ್ಕಾರ ಅಧಿಕಾರದಲ್ಲಿರುವರೆಗೂ ಅಭಿವೃದ್ಧಿ ಎನ್ನುವುದು ರಾಜ್ಯದಲ್ಲಿ ಕುಂಠಿತವಾಗಲಿದೆ. ರಾಜ್ಯದ ಜನತೆ ಇನ್ನು ೧೫-೨೦ ಸೀಟು ಬಿಜೆಪಿಗೆ ಕೊಟ್ಟಿದ್ದರೆ ಇಷ್ಟೊತ್ತಿಗಾಗಲೆ ರೈತರ ಸಾಲ ಮನ್ನಾ ಆಗಿರುತ್ತಿತ್ತು. ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಾಗುತ್ತಿತ್ತು. ಈ ನಿಟ್ಟಿನಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಬೇಕಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಅಗಳಕೇರಾ ಗ್ರಾಮದ ಮುಖಂಡರಾದ ಮಹೇಶ ಮಂಗಳೂರು, ವೀರೇಶ ಅಂಗಡಿ, ಪ್ರಕಾಶ, ಪುಟ್ಟರಾಜ, ಬಸವರಾಜ ಕರ್ಕಿಹಳ್ಳಿ, ಮಂಜುನಾಥ, ರಾಜಶೇಖರ್, ಮಂಗಳೇಶಪ್ಪ, ವೀರಯ್ಯ ಸ್ವಾಮಿ, ನಾಗರಾಜ ವಿ., ನಿಂಗಪ್ಪ ಆರೇರ, ಶೇಖರಪ್ಪ ಸಿಂದೋಗಿ, ಹುಲಿಗಿ ಗ್ರಾಮದಲ್ಲಿ ತಾಪಂ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಗ್ರಾಪಂ ಅಧ್ಯಕ್ಷೆ ರೇಣುಕಾ ನಾಯಕ, ಶಂಕ್ರಪ್ಪ ಗುಂಗಾಡಿ, ಸುರೇಶ ನಾಯಕ, ವಿರುಪಾಕ್ಷಪ್ಪ ಬೃಂಗಿ, ಸುರೇಶ ನಾಯಕ, ಬಸವರಾಜ ಈಶ್ವರಗೌಡ್ರ, ಬಸವರಾಜ ಭೋವಿ ಸೇರಿದಂತೆ ಇತರರು ಭಾಗವಹಿಸಿದ್ದರು.

Top