ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಸಂಯುಕ್ತ ಪ್ರೌಡ ಶಾಲೆಯಲ್ಲಿ ಇಂದು ಸಮರ್ಪಣ್ ಟ್ರಸ್ಟ ಇನ್ಪೋಸಿಸ್ ಬೆಂಗಳೂರು ಇದರ ವತಿಯಿಂದ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಜರುಗಿತು. ಆರಂಭದಲ್ಲಿ ಸಮರ್ಪಣ್ ಟ್ರಸ್ಟ ಇನ್ಪೋಸಿಸ್‌ನ ಮುಖ್ಯಸ್ಥರಾದ ರಿತೇಶಕುಮಾರ ಸಸಿಗೆ ನೀರೆರೆಯುವದರ ಮೂಲಕ ಸಮಾರಂಭ ಉದ್ಘಾಟಿಸಿದರು.
ಬಳಿಕ ಮಾತನಾಡಿ ಇನ್ಪೋಸಿಸ್‌ನ ಎಲ್ಲ ಉದ್ಯೋಗಿಗಳು ಸೇರಿಕೊಂಡು ಕಟ್ಟಿರುವ ಈ ಸಮರ್ಪಣ್ ಟ್ರಸ್ಟ ಇದು ೨೦೧೪ ರಿಂದ ಮೊದಲು ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಪಾಟಿ, ಪೆನ್ಸಿಲ್.ಕಂಪ್ಯೂಟರ ಹಾಗೂ ನೋಟ್ ಬುಕ್ಸಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈ ಸಲ ೮,೯ ಹಾಗೂ ೧೦ ನೇ ವರ್ಗದ ವಿದ್ಯಾರ್ಥಿಗಳ ವಿಜ್ಞಾನದ ಪಠ್ಯಪುಸ್ತಕವನ್ನು ಮುಂದಿಟ್ಟುಕೊಂಡು ಅಲ್ಲಿ ಬರುವ ವಿಜ್ಞಾನದ ಪರಿಕರಗಳನ್ನೇ ವಿತರಿಸಬೇಕೆಂದು ನಿರ್ಧರಿಸಿದೆವು. ಈಗಾಗಲೇ ೧೨ ಜಿಲ್ಲೆಗಳಿಗೆ ತೆರಳಿ ವಿಜ್ಞಾನದ ಶೈಕ್ಷಣಿಕ ಪರಿಕರಗಳನ್ನು ನೀಡಿದ್ದೇವೆ. ಈಗ ೧೩ ನೇ ಯದಾಗಿ ಕೊಪ್ಪಳಕ್ಕೆ ವಿತರಣೆ ಮಾಡುತ್ತಲಿದ್ಧೇವೆ. ಎಲ್ಲ ಮಕ್ಕಳು ಇಂಜೀನಿಯರ್ ಹಾಗೂ ಡಾಕ್ಟರ್‌ಗಳು ಆಗಬೇಕು ಎಂಬುದು ನಮ್ಮ ಸಂಕಲ್ಪ ಅಲ್ಲ. ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ತಂದುಕೊಡಲು ಹಾಗೂ ಮೌಡ್ಯತೆಗಳನ್ನು ಹೋಗಲಾಡಿಸುವ ದಿಸೆಯಲ್ಲಿ ಇದು ನಮ್ಮ ಪ್ರಯತ್ನ. ಶಿಕ್ಷಕರು ನಾವು ನೀಡಿದ ಈ ಕಿಟ್ ಪಡೆದುಕೊಂಡು ಮಕ್ಕಳಿಗೆ ಪ್ರಾತ್ಯಕ್ಷಿಕವಾಗಿ ಪಾಠ ಪ್ರವಚನ ಮಾಡಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಜಿ. ದಾಸರ್ ಮಾತನಾಡಿ ಇಂದು ನಮಗೆ ಸುದಿನ. ಏಕೆಂದರೆ ಸಮರ್ಪಣ್ ಟ್ರಸ್ಟ ಇನ್ಪೋಸಿಸ್ ಬೆಂಗಳೂರು ಇವರು ಸ್ವಯಂ ಪ್ರೇರಿತವಾಗಿ ಸಾಮಾಜಿಕ ಸೇವೆ ಮಾಡುತ್ತಿರುವದು ಶ್ಲಾಘನೀಯ. ಅವರೆಲ್ಲ ಸಮಯದ ಸದ್ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇವರ ಸೇವೆಯನ್ನು ನಾವು ಸಾರ್ಥಕ ಪಡಿಸಿಕೊಳ್ಳೋಣವೆಂದರು.
ಶ್ರೀಗವಿಸಿದ್ಧೇಶ್ವರ ಸಂಯುಕ್ತ ಪ್ರೌಡ ಶಾಲೆಯ ಮುಖ್ಯೋಪಾಧ್ಯಯರಾದ ಗವಿಸಿದ್ದಪ್ಪ ಕೊಪ್ಪಳ ಅಧ್ಯಕ್ಷತೆ ವಹಿಸಿ ಹಿಂದುಳಿದ ಈ ಹೈ.ಕ ಪ್ರದೇಶದಲ್ಲಿನ ಮಕ್ಕಳಲ್ಲಿ ವಿಜ್ಞಾನದ ಚಿಂತನ -ಮಂತನಗಳನ್ನು ಮೂಡಿಸುವ ದಿಸೆಯಲ್ಲಿ ಈ ಸಂಸ್ಥೆಯವರು ತುಂಬಾ ಮಹತ್ವದ ಸಾಮಾಜೀಕ ಕೆಲಸ ಮಾಡುತ್ತಿದ್ದಾರೆ. ಇವರುಗಳು ವಿತರಿಸಿದ ಎಲ್ಲ ವಿಜ್ಞಾದ ಶೈಕ್ಷಣಿಕ ಪರಿಕರಗಳನ್ನು ಶಿಕ್ಷಕರು ಸದ್ಬಳಕೆ ಮಾಡಿಕೊಂಡು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ತಂದುಕೊಡುತ್ತಾರೆಂದು ಭರವಸೆ ನೀಡಿದರು.
ಇದೇ ಸಮಯದಲ್ಲಿ ಕೊಪ್ಪಳದ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ಕಿಟ್ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಸಮರ್ಪಣ್ ಟ್ರಸ್ಟ ಇನ್ಪೋಸಿಸ್ ಬೆಂಗಳೂರಿನ ಗಣೇಶ, ಜಗದೀಶ,ನಾಗರಾಜ, ಶಿಕ್ಷಣ ಸಂಯೋಜಕರಾದ ಶಂಕರಗೌಡ ಇದ್ದರು. ಪ್ರಾರ್ಥನೆ ಶಿಕ್ಷಕ ಶಿವಕುಮಾರ ಬಹದ್ದೂರ ಬಂಡಿ. ಸ್ವಾಗತ ಶಿಕ್ಷಕ ಗುಂಡನಗೌಡರ ವಂದನಾರ್ಪಣೆ ಶಿಕ್ಷಕ ಬಿ ನಾಗರಾಜ ಶಿಕ್ಷಕರು ಹಾಗೂ ನಿರೂಪಣೆ ಶಿಕ್ಷಕ ಮರಿಶಾಂತವೀರ ಎಸ್ ಶೆಟ್ಟರ ನೆರವೇರಿಸಿದರು. ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಕಾಶ ಬಳ್ಳಾರಿ