ಉಚಿತ ಬಸ್ ಪಾಸ್‌ಗಾಗಿ ಗ್ರಾಮೀಣ ಮಾಧ್ಯಮ ಪ್ರತಿನಿಧಿಗಳಿಂದ ಅರ್ಜಿ ಆಹ್ವಾನ

: ಮಾಧ್ಯಮ ಪಟ್ಟಿಯಲ್ಲಿರುವ ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಮತ್ತು ತಾಲೂಕಾ ಮಟ್ಟದ ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೊಪ್ಪಳ ಜಿಲ್ಲೆಯೊಳಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ನೀಡಲಿದ್ದು, ಅರ್ಹ ಮಾಧ್ಯಮದ ಪ್ರತಿನಿಧಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಮಾಧ್ಯಮ ಪ್ರತಿನಿಧಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪ್ರಾದೇಶಿಕ ಹಾಗೂ ಜಿಲ್ಲಾ ಪತ್ರಿಕೆಗಳಲ್ಲಿ ಪೂರ್ಣಾವಧಿ ಪತ್ರಕರ್ತರಾಗಿ ಕನಿಷ್ಠ ಎರಡು ವರ್ಷ ಸೇವಾನುಭವ ಹೊಂದಿರಬೇಕು. ಈ ಕುರಿತಂತೆ ಸೇವಾನುಭ ಪ್ರಮಾಣಪತ್ರ, ನೇಮಕಾತಿ ಆದೇಶ, ವೇತನ ರಸೀದಿ, ಬ್ಯಾಂಕ್ ಸ್ಟೇಟ್‌ಮೆಂಟ್ ಒದಗಿಸಬೇಕು. ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಪತ್ರಿಕೆ ಪ್ರಕಟಿಸುವ ಪುಟಸಂಖ್ಯೆಗಳನ್ನು ಆಧರಿಸಿ ಎಷ್ಟು ಜನ ವರದಿಗಾರರಿಗೆ ಪಾಸ್ ನೀಡಬಹುದೆಂದು ಈ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿ ನಿರ್ಧರಿಸಲಿದೆ.
ರಾಜ್ಯ ಮಟ್ಟದ ಉಪಗ್ರಹ ಸುದ್ದಿವಾಹಿನಿಗಳಲ್ಲಿ ಪೂರ್ಣಾವಧಿ ವರದಿಗಾರರು, ಕ್ಯಾಮರಾಮನ್‌ಗಳಾಗಿ ತಾಲೂಕಾ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅವರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು. ರಾಜ್ಯ ಮಟ್ಟದ ಪತ್ರಿಕೆಗಳ ಪತ್ರಕರ್ತರಿಗೆ ಹಾಗೂ ಈಗಾಗಲೇ ಮಾಧ್ಯಮ ಮಾನ್ಯತಾ ಪತ್ರಹೊಂದಿ ಕೆ.ಎಸ್.ಆರ್.ಟಿ.ಸಿ. ಬಸ್ ಪಾಸ್ ಹೊಂದಿರುವ ಮಾಧ್ಯಮ ಪ್ರತಿನಿಧಿಗಳಿಗೆ, ನಿಯತಕಾಲಿಕೆಗಳ ಪತ್ರಿಕೆಗಳಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜ. ೧೦ ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಈ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಮೇಲ್ಕಂಡ ಕಚೇರಿ ವಿಳಾಸದಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Please follow and like us:
error