ಕರ್ನಾಟಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶೇಷ ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಚಾಲನೆ ನೀಡಿದರು.
ಕೊಪ್ಪಳ ತಾಲೂಕಿನಲ್ಲಿ ನ. ೦೧ ರಿಂದ ೦೬ ರವರೆಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಆರೋಗ್ಯ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಆರೋಗ್ಯ ಮಿತ್ರರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಪ.ಜಾತಿ, ಪ.ಪಂಗಡದವರಿಗೆ ಆರೋಗ್ಯ ತಪಾಸಣಾ ಕಾರ್ಡ್ ಅನ್ನು ವಿತರಿಸಲಾಗಿತ್ತು. ಅಲ್ಲದೆ ಅವರಿಗೆ ಸೋಮವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ಸಪ್ತಗಿರಿ ಹಾಗೂ ಮಹಾವೀರ ಜೈನ್ ಆಸ್ಪತ್ರೆಯ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು, ಆರೋಗ್ಯ ತಪಾಸಣೆ ನಡೆಸಿದರು. ತಪಾಸಣೆ ಸಂದರ್ಭದಲ್ಲಿ ತೀವ್ರ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸ್ಥಳದಲ್ಲಿಯೇ ಕಾರ್ಡ್ ಅನ್ನು ನೀಡಲಾಗುವುದು. ರೋಗಿಗಳು ಸಂಬಂಧಪಟ್ಟ ಆಸ್ಪತ್ರೆಗೆ ತೆರಳಿ, ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ರೋಗಿಗಳು ಬೆಂಗಳೂರಿಗೆ ಹೋಗಿ ಬರುವ ಪ್ರಯಾಣ ವೆಚ್ಚವನ್ನೂ ಸಹ ಸರ್ಕಾರವೇ ಭರಿಸಲಿದೆ ಎಂಬುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡದವರಿಗೆ ಮಾರಕ ರೋಗಗಳಿಂದ ರಕ್ಷಿಸಲು ಉಚಿತ ಚಿಕಿತ್ಸೆ ದೊರಕಿಸುವ ಕಾರ್ಯ ಸಮರ್ಪಕವಾಗಿ ಆಗಬೇಕು ಎಂದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ವಾರ್ತಾ ಇಲಾಖೆಯಿಂದ ಕೊಪ್ಪಳ ತಾಲೂಕಿನಲ್ಲಿ ಬೀದಿ ನಾಟಕದ ಮೂಲಕ ಆರೋಗ್ಯ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯಕ್ರಮವನ್ನು ನ. ೦೧ ರಿಂದ ೦೬ ರವರೆಗೆ ನಡೆಸಲಾಯಿತು ಎಂದರು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ವಿಭಾಗೀಯ ಸಮಾಲೋಚಕ ಡಾ. ಕೋರಧಾನ್ಯಮಠ,. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕಾನಂದ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಮನ್ವಯಾಧಿಕಾರಿ ಸಂಜಯ್, ತಾಲೂಕು ವೈದ್ಯಾಧಿಕಾರಿ ಡಾ. ಆಂಜನೇಯ, ಶಿವಾನಂದ ಹೊದ್ಲುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಒಟ್ಟು ೭೦೭ ಜನರು ಸೋಮವಾರದಂದು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಪೈಕಿ ೭೨ ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು.
ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಚಾಲನೆ
Leave a Reply
You must be logged in to post a comment.