ಈ ಬಾರಿ ಮಸ್ಟರಿಂಗ್, ಡೀಮಸ್ಟರಿಂಗ್‌ಗೆ ಅಚ್ಚುಕಟ್ಟು ವ್ಯವಸ್ಥೆ- ಎಂ. ಕನಗವಲ್ಲಿ

ಈ ಬಾರಿಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಯ ಅಧಿಕಾರಿ, ಸಿಬ್ಬಂದಿಗಳಿಗೆ ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್‌ಗಾಗಿ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯನ್ನು ಯಶಸ್ವಿಯಾಗಿ ಕೈಗೊಳ್ಳಲು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಲೇ ಅತಿ ಹೆಚ್ಚು ನೌಕರರು ತೊಡಗಿಕೊಳ್ಳಲಿದ್ದಾರೆ. ಅತಿ ಹೆಚ್ಚು ನೌಕರರನ್ನು ಹೊಂದಿರುವ ಶಿಕ್ಷಣ ಇಲಾಖೆ ಚುನಾವಣೆ ಪ್ರಕ್ರಿಯೆಗೆ ಸಿಂಹಪಾಲು ಒದಗಿಸಲಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ಏ. ೨೨ ರಂದು ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಸಾಮಾನ್ಯವಾಗಿ ಮತಗಟ್ಟೆ ಅಧಿಕಾರಿಗಳ ಪಾತ್ರವನ್ನು ಶಿಕ್ಷಣ ಇಲಾಖೆಯ ನೌಕರರೇ ನಿರ್ವಹಿಸುವುದು ಹೆಚ್ಚು. ಹೀಗಾಗಿ ಮೂರು ಹಂತಗಳಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈ ಬಾರಿಯ ಮಸ್ಟರಿಂಗ್, ಡೀಮಸ್ಟರಿಂಗ್ ಕಾರ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಅಚ್ಚುಕಟ್ಟಾಗಿ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೊದಲು ಮಸ್ಟರಿಂಗ್ ಡೀಮಸ್ಟರಿಂಗ್ ಕಾರ್ಯದಲ್ಲಿ ಸಿಬ್ಬಂದಿಗಳು ತೊಂದರೆ ಎದುರಿಸುತ್ತಿರುವುದನ್ನು, ಗಮನದಲ್ಲಿರಿಸಿಕೊಂಡು, ಈ ಬಾರಿ ಅಂತಹ ತೊಂದರೆಗಳಿಗೆ ಅವಕಾಶವಿಲ್ಲದ ರೀತಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗೆ ತೆರಳುವ ಅಧಿಕಾರಿ, ಸಿಬ್ಬಂದಿಗಳಿಗೆ ಅಗತ್ಯ ವ್ಯವಸ್ಥೆ ಒದಗಿಸಲಾಗುವುದು. ಮತದಾನ ಕಾರ್ಯ ಸುಲಲಿತವಾಗಿ ನಡೆಸಲು, ಚುನಾವಣಾ ಆಯೋಗದ ನಿಯಮ ಹಾಗೂ ನಿರ್ದೇಶನಗಳನ್ನು ಎಲ್ಲ ಅಧಿಕಾರಿ, ಸಿಬ್ಬಂದಿಗಳು ಅರಿತುಕೊಂಡು, ಅದರನ್ವಯ ನಿಯಮಗಳ ಪಾಲನೆ ಮಾಡಬೇಕು. ಯಶಸ್ವಿ ಚುನಾವಣೆಗೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು, ಇವಿಎಂ ಮತದಾನ ಯಂತ್ರ ಹಾಗೂ ವಿವಿ ಪ್ಯಾಟ್ ಕಾರ್ಯ ಚಟುವಟಿಕೆ ಹಾಗೂ ನಿರ್ವಹಣೆ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ನೀಡಿದರು.
ಕುಷ್ಟಗಿ ಕ್ಷೇತ್ರ ಚುನಾವಣಾಧಿಕಾರಿ ಪ್ರಶಾಂತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಹನುಮಂತಪ್ಪ ಸೇರಿದಂತೆ ಎಲ್ಲ ಬಿ.ಆರ್.ಸಿ ಗಳು, ಸಿ.ಆರ್.ಪಿ.ಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error