You are here
Home > Election_2018 > ಈ ದಾಖಲೆಗಳಿದ್ದಲ್ಲಿ ಮತ ಚಲಾಯಿಸಬಹುದು

ಈ ದಾಖಲೆಗಳಿದ್ದಲ್ಲಿ ಮತ ಚಲಾಯಿಸಬಹುದು

ಕೊಪ್ಪಳ ಮೇ.: ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಇಲ್ಲದೇ ಇರುವವರು, ತಮ್ಮ ಗುರುತು ಸಾಬೀತಿಗೆ ಚುನಾವಣಾ ಆಯೋಗ ಪರ್ಯಾಯವಾಗಿ 12 ದಾಖಲೆಗಳನ್ನು ಸೂಚಿಸಿದ್ದು, ಈ 12 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು, ಮತದಾರರು ತಮ್ಮ ಮತ ಚಲಾಯಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಮೇ. 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಧಿ ನಿಗದಿಪಡಿಸಲಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡ್ಡಾಯವಾಗಿ ಇರಬೇಕು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿರಬೇಕು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಲು ಸಾಧ್ಯವಾಗದೇ ಇದ್ದಲ್ಲಿ, ಮತದಾರರು ತಮ್ಮ ಮತ ಚಲಾಯಿಸಲು, ಚುನಾವಣಾ ಆಯೋಗ ಪರ್ಯಾಯವಾಗಿ 12 ಬಗೆಯ ದಾಖಲೆಗಳನ್ನು ನಿಗದಿಪಡಿಸಿದೆ. ಈ 12 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯಿದ್ದಲ್ಲಿ, ಮತ ಚಲಾಯಿಸಬಹುದಾಗಿದೆ. ಮತದಾನಕ್ಕೆ ಪಾಸ್ ಪೋರ್ಟ, ಡ್ರೈವಿಂಗ್ ಲೈಸನ್ಸ್, ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಬ್ಯಾಂಕ್/ ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ರಾಷ್ಟ್ರೀಯ ಜನಸಂಖ್ಯೆ ನೊಂದಣಿ ಅಡಿಯಲ್ಲಿ ಆರ್.ಜಿ.ಐ ವತಿಯಿಂದ ನೀಡಿರುವ ಸ್ಮಾರ್ಟ್‍ಕಾರ್ಡ್, ಎಂ.ಎನ್.ಆರ್.ಇ.ಜಿ.ಎ (ನರೇಗಾ) ಯೋಜನೆ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ, ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್‍ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲಾತಿಗಳು, ಚುನಾವಣಾ ಆಯೋಗದಿಂದ ನೀಡಿರುವ ಭಾವಚಿತ್ರವಿರುವ ಮತದಾರರ ಚೀಟಿಗಳು, ಲೋಕಸಭೆ/ ವಿಧಾನಸಭೆ/ ವಿಧಾನ ಪರಿಷತ್ ಸದಸ್ಯರಿಗೆ ಅಧಿಕೃತವಾಗಿ ನೀಡಿರುವ ಗುರುತಿನ ಚೀಟಿಗಳು ಹಾಗೂ ಆಧಾರ್ ಕಾರ್ಡ್, ಈ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಮತದಾನವನ್ನು ಮುಕ್ತ, ಶಾಂತ ರೀತಿಯಿಂದ ಹಾಗೂ ನಿಸ್ಪಕ್ಷಪಾತವಾಗಿ ಕೈಗೊಳ್ಳಲು ಮತದಾರರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Top