ಇನ್ನರ್ ವ್ಹೀಲ್‌ನಿಂದ ವಿಜ್ಞಾನ ದಿನಾಚರಣೆ

ಇನ್ನರ್ ವ್ಹೀಲ್ ಸಂಸ್ಥೆಯ ವತಿಯಿಂದ ತಾಲೂಕಿನ ಬೀಡನಾಳ ಗ್ರಾಮದಲ್ಲಿ ರಾಮಕೃಷ್ಣ ಪರಮಹಂಸರ ಜಯಂತಿ ಹಾಗೂ ವಿಜ್ಞಾನ ದಿನಾಚರಣೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಬೀಡನಾಳದ ಬಾಂಧವ್ಯ ಶಾಲೆಯಲ್ಲಿ ಐದು ಜಿಲ್ಲೆಗಳ ದೇವದಾಸಿಯರ ಮಕ್ಕಳೂ ಓದುತ್ತಿದ್ದು, ಅಂತಹ ಮಕ್ಕಳನ್ನು ಹೊಂದಿರುವ ಕರ್ನಾಟಕದ ಏಕೈಕ ಶಾಲೆ ಇದು. ಈ ಹಿನ್ನೆಲೆಯಲ್ಲಿ ಇದೇ ಶಾಲೆಯನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಸಂಸ್ಥೆಯ ನೀತಾ ತಂಬ್ರಳ್ಳಿ ಹೇಳಿದರು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಮಕೃಷ್ಣ ಪರಮಹಂಸರ ಕೊಡುಗೆಯನ್ನು ಮಕ್ಕಳಿಗೆ ವಿವರಿಸಲಾಯಿತು. ವಿಜ್ಞಾನ ದಿನಾಚರಣೆಯ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಂತರ ಡಾ. ರಾಧಾ ಕುಲಕರ್ಣಿ ಹಾಗೂ ಡಾ. ಕವಿತಾ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಮಕ್ಕಳಿಗೆ ಔಷಧಿಯನ್ನು ಸಹ ಉಚಿತವಾಗಿ ವಿತರಿಸಲಾಯಿತು.
ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶರಣಮ್ಮ ಪಾಟೀಲ್ ಅವರು ೫೦೦ ಪುಸ್ತಕಗಳನ್ನು ಮಕ್ಕಳಿಗೆ ನೀಡಿದರು. ರಸಪ್ರಶ್ನೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ವತಿಯಿಂದಲೇ ಮಕ್ಕಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಸಂಸ್ಥೆಯ ಕಾರ್ಯದರ್ಶಿ ಪದ್ಮಾ ಜೈನ್, ಲಕ್ಷ್ಮೀ ಚಂದ್ರಶೇಖರ, ಸುಮಂಗಲಾ ಹಂಚಿನಾಳ, ನೀತಾ ತಂಬ್ರಳ್ಳಿ ಮುಂತಾದವರು ಹಾಜರಿದ್ದರು.

Please follow and like us:
error