You are here
Home > Koppal News > ಇಟಗಿ ಗ್ರಾಮದ ರೇಷ್ಮೆ ಕೃಷಿಗಾರನ ಯಶೋಗಾಥೆ

ಇಟಗಿ ಗ್ರಾಮದ ರೇಷ್ಮೆ ಕೃಷಿಗಾರನ ಯಶೋಗಾಥೆ

: ಬರ ಪರಿಸ್ಥಿತಿಯ ಸಂದರ್ಭದಲ್ಲಿ ಪಾರಂಪರಿಕ ಕೃಷಿ ಪದ್ಧತಿಗಿಂತ, ಕಡಿಮೆ ನೀರು ಬಳಸಿಕೊಂಡು, ಹೆಚ್ಚು ಆದಾಯ ಬರುವಂತಹ ಬೆಳೆಗಳನ್ನು ಬೆಳೆದು, ಆರ್ಥಿಕವಾಗಿ ಲಾಭ ಕಂಡುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿ, ಯಲಬುರ್ಗಾ ತಾಲೂಕು ಇಟಗಿ ಗ್ರಾಮದ ರೈತ ಅಂದಪ್ಪ ಹುರಳಿ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮವು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶ. ಇಲ್ಲಿ ಐತಿಹಾಸಿಕ ಮಹಾದೇವ ದೇವಾಲಯವಿದೆ.

ಗ್ರಾಮದಲ್ಲಿನ ಬಹುತೇಕ ಕುಟುಂಬಗಳು ಕೃಷಿ ಅವಲಂಬಿತವಾಗಿವೆ.  ಆದರೆ ಇಲ್ಲಿ ಯಾವುದೇ ರೀತಿಯ ನೈಸರ್ಗಿಕ ಜಲ ಸಂಪತ್ತು (ನದಿ, ಕೊಳ) ಇಲ್ಲಾ.  ಅಪ್ಪ ಹಾಕಿದ ಆಲದ ಮರ ಎಂಬಂತೆ ಎಲ್ಲ ಕೃಷಿಕರು ಸಾಂಪ್ರದಾಯಿಕ ಕೃಷಿಯನ್ನು ಅವಲಂಬಿಸಿ ಶೇಂಗಾ, ಹೆಸರು, ಸಜ್ಜೆ, ನವಣೆ, ಕುಸುಬೆ, ಗೋಧಿ, ಜೋಳ ಸೇರಿದಂತೆ ಋತುಮಾನಕ್ಕೆ ಒಗ್ಗುವ ಬೆಳೆಗಳನ್ನು ಬೆಳೆಯುತ್ತಿದ್ದಾರೆ.  ಮಳೆಯ ಕೊರತೆ, ಅಂತರ್ಜಲ ಕುಸಿತ ಮುಂತಾದ ಕಾರಣಗಳಿಂದ ರೈತರು ನಿರೀಕ್ಷೆಗೆ ತಕ್ಕಂತೆ ಬೆಳೆ ಹಾಗೂ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ.ಆದರೆ ಅದೇ ಗ್ರಾಮದ ಕೃಷಿಕರಾದ ಅಂದಪ್ಪ ಬಸಪ್ಪ ಹುರಳಿ ಇವರು ಕೃಷಿ ಕ್ಷೇತ್ರದಲ್ಲಿ ಬದಲಾವಣೆಯನ್ನು ಬಯಸಿ ತಮ್ಮ ಜಮೀನಿನಲ್ಲಿ ಪಾರಂಪರಿಕವಾಗಿ ಬೆಳೆಯುತ್ತಿದ್ದ ಬೆಳೆಗಳಿಗೆ ಪರ್ಯಾಯವಾಗಿ ರೇಷ್ಮೆ (ಹಿಪ್ಪುನೇರಳೆ) ಬೆಳೆಯನ್ನು ಬೆಳೆಯಲು ಆರಂಬಿಸಿದರು.  ಪ್ರಾರಂಭದಲ್ಲಿ ಅನೇಕ ಸಮಸ್ಯೆಗಳು ಎದುರಾದವು ವಿದ್ಯುತ್ ಸಮಸ್ಸೆಯಿಂದ ಸಕಾಲದಲ್ಲಿ ಬೆಳೆಗೆ ನೀರನ್ನು ಹರಿಸಲು ಆಗುತ್ತಿರಲಿಲ್ಲಾ. ಆದರೆ ಹನಿ ನೀರಾವರಿ ಪದ್ದತಿಯಿಂದ ಕಡಿಮೆ ನೀರು ಮತ್ತು ಶ್ರಮ ಬಳಸಿ ಬೆಳೆಗೆ ನೀರುಣಿಸುತ್ತಿದ್ದಾರೆ.  ಇದಕ್ಕೆ ಇವರಿಗೆ ಇಲಾಖೆಯಿಂದ ಹನಿ ನೀರಾವರಿ ಪದ್ದತಿ ಅಳವಡಿಕೆಗೆ ಮತ್ತು ರೇಷ್ಮೆ ಸಾಕಾಣಿಕೆ ಶೆಡ್ ನಿರ್ಮಾಣ ಮಾಡಲು ಸರ್ಕಾರದ ಸಹಾಯಧನ ಲಭಿಸಿದೆ. ಹಿಪ್ಪುನೇರಳೆ ಬೆಳೆ ನಾಟಿ ಮತ್ತು ನಿರ್ವಹಣೆ ಮಾಡಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಹಣದ ಸಹಾಯ ನೀಡಲಾಗುತ್ತಿದೆ.ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಸಿ ಬರಗಾಲದಲ್ಲಿಯು ನೀರಿನ ಸಮಸ್ಯೆಯನ್ನು ಎದುರಿಸದೇ ತಮ್ಮ ಸ್ವಂತ ೧ ಎಕರೆ ೨೦ ಗುಂಟೆ ಜಮೀನಿನಲ್ಲಿ ಪ್ರತಿ ತಿಂಗಳಿಗೆ ೩೦-೪೦ ಸಾವಿರ ರೂಪಾಯಿಗಳ ಆದಾಯ ಗಳಿಸುತ್ತಿದ್ದಾರೆ.  ರೇಷ್ಮೆ ಹಿಪ್ಪುನೇರಳೆ ಎಲ್ಲಾ ಕಚ್ಚಾ ಪದಾರ್ಥಗಳನ್ನು ಟ್ರೆಂಚಿಂಗ್- ಮಂಚಿಂಗ್ ಪದ್ದತಿ ಅಳವಡಿಸಿ ಉತ್ತಮವಾದ ಸಾವಯವ ಗೊಬ್ಬರವು ಬೆಳೆಗೆ ಸಿಗುವಂತೆ ಮಾಡಿದ್ದಾರೆ. ಇವರ ಕೃಷಿ ಸಾಧನೆ ಬೇರೆ ರೈತರಿಗೆ ಸ್ಪೂರ್ತಿಯಾಗಲಿ  ಎಂಬುದು  ಅಂದಪ್ಪ ಹುರುಳಿ ಅವರ ಅಭಿಪ್ರಾಯ. ತಮ್ಮ ಜಮೀನನ್ನು ಉತ್ತಮವಾಗಿ ಉಳುಮೆ ಮಾಡಿ ಸಾಲಿನಿಂದ ಸಾಲಿಗೆ ೩ ಅಡಿ ಅಂತರದಲ್ಲಿ, ಗಿಡದಿಂದ ಗಿಡಕ್ಕೆ ೨ ಅಡಿ ಅಂತರದಲ್ಲಿ ರೇಷ್ಮೆ ನಾಟಿ ಮಾಡಿದ್ದಾರೆ.  ಅಲ್ಲದೆ ಪ್ರತಿ ಬೆಳೆ ಕಟಾವಿನ ನಂತರ ಬೆಳೆ ನಡುವಿನ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಸಾವಯವ ಗೊಬ್ಬರ ನೀಡಿ, ಬೆಳೆ ಬೆಳೆಯುತ್ತಿದ್ದಾರೆ.  ಇವರು ರೇಷ್ಮೆಯ ಸಾಕಾಣಿಕೆ ಶೆಡ್ ಅನ್ನು ಅತೀ ಕಡಮೆ ಖರ್ಚಿನಲ್ಲಿ ಕಲ್ಲು ಮತ್ತು ಸಿಮೆಂಟ್ ಬಳಸಿ ಕಟ್ಟಡ ಕಟ್ಟಿ ಮೆಲ್ಚಾವಣಿಗೆ ಆಂಗುಲರ್ ಅಳವಡಿಸಿ ತಗಡನ್ನು ಹಾಕಿ, ಅದರ ಮೇಲೆ ತೆಂಗಿನ ಗರಿ ಹಾಕಿದ್ದರಿಂದ  ರೇಷ್ಮೆ ಕೃಷಿಗೆ ಅಧಿಕ ತಾಪಮಾನದಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಿದ್ದಾರೆ. ರೇಷ್ಮೆ ಕೃಷಿಯಲ್ಲಿ ನವೀನವೆಂಬಂತೆ ಕಡಿಮೆ ಖರ್ಚಿನಲ್ಲಿ ಚಂದ್ರಿಕೆಯ ಖರೀದಿಸದೆ ಕೇವಲ ಕೃಷಿ ಕಚ್ಚಾ ವಸ್ತುವಾದ ತೊಗರಿ ಗಿಡವನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ಎಲ್ಲದಕ್ಕೂ ದುಡ್ಡು ಬೇಕು ಎನ್ನುವುದಕ್ಕಿಂದ ನೈಸಗಿಕವಾಗಿ ಸಿಗುವ ಪದಾರ್ಥ(ಕೃಷಿ ಸಾಮಗ್ರಿ) ಉಪಯೋಗಿಸಿಕೊಂಡು ಕಡಿಮೆ ಹೂಡಿಕೆ, ಹೆಚ್ಚು ಆದಾಯ ಪದ್ದತಿಯನ್ನು ಅನುಸರಿಸಿರುತ್ತಾರೆ.  ಸತತ ೫ ವರ್ಷದಿಂದ ಬರವಿದ್ದು ಅಂರ್ತಜಲ ತೀವ್ರ ಕುಸಿದಿದೆ. ಈಗಲಾದರೂ ಕೃಷಿಕರು ಹೆಚ್ಚು ನೀರನ್ನು ಉಪಯೋಗಿಸದೆ, ಕೃಷಿಗೆ ಬೇಕಾಗುವಷ್ಟು ನೀರನ್ನು ಮಾತ್ರ ಉಪಯೋಗಿಸುವಂತಹ ಹನಿ ನೀರಾವರಿ ಪದ್ದತಿ, ಟ್ರಂಚಿಂಗ್- ಮಂಚಿಂಗ್, ಎರೆಹುಳು ತೊಟ್ಟಿ ಯಿಂದ ಸಾವಯವ ಗೊಬ್ಬರ ತಯಾರಿಸಿ ಕೃಷಿ ಕ್ಷೇತ್ರದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಬದಲಾವಣೆ ಹೊಂದಬೇಕಿದೆ.  ಈ ದಿಸೆಯಲ್ಲಿ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆ ಬಡ ಕೃಷಿಕರಿಗೆ, ಕೂಲಿಕಾರರಿಗೆ ವರದಾನವಾಗಲಿದೆ ಎನ್ನುತ್ತಾರೆ ಯಲಬುರ್ಗಾ ತಾಲೂಕ ಐ.ಇ.ಸಿ ಸಂಯೋಜಕ ಲಕ್ಮಣ ಕೆರಳ್ಳಿ ಅವರು.

Top