ಆರ್ಥಿಕ ಸದೃಢತೆಗೆ ಸಹಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು : ನಾಗಲದಿನ್ನಿ

ಕೊಪ್ಪಳ.ಸೆ.೧೭ : ಪ್ರತಿಯೊಂದು ಸಮುದಾಯವಾಗಲಿ ವೈಯಕ್ತಿಕವಾಗಿ ಆರ್ಥಿಕವಾಗಿ ಸದೃಢವಾಗಲು ಸಹಕಾರಿ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಸವಿತಾ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಧಕ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಗಲದಿನ್ನಿ ಅಭಿಪ್ರಾಯಪಟ್ಟರು.
ಅವರು ಇಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ ಸವಿತಾ ಸಮಾಜ ವಿವಿದೋದ್ದೇಶ ಸಹಕಾರಿ ಸಂಘದ ೧೫ನೇ ವಾರ್ಷಿಕ ಮಹಾಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪ್ರತಿಯೊಬ್ಬರು ಸಹಕಾರ ಸಂಘಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಸಕಾಲದಲ್ಲೇ ಮರುಪಾವತಿ ಮಾಡುವುದರ ಮೂಲಕ ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಾರುಕಟ್ಟೆಯಲ್ಲಿ ಫೈನಾನ್ಸ್‌ಗಳಲ್ಲಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು, ಮರುಪಾವತಿಸಲಾಗದೇ ಆರ್ಥಿಕವಾಗಿ ಸಂಕಷ್ಟ ಎದುರಿಸುವ ಬದಲು ಸಹಕಾರ ಸಂಘಗಳಲ್ಲಿ ಸಿಗುವ ಕಡಿಮೆ ಬಡ್ಡಿದರಲ್ಲಿ ಸಂಘದ ನಿಯಮಗಳಿಗೆ ಬದ್ಧರಾಗಿ ವ್ಯವಹರಿಸುವುದು ಸೂಕ್ತ ಎಂದು ಕರೆ ನೀಡಿದರು.
ಸವಿತಾ ಸಮಾಜವು ಅತ್ಯಂತ ಹಿಂದುಳಿದ ವರ್ಗವಾದ್ದರಿಂದ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಹಾಗೂ ಸಮಾಜದ ಬಾಂಧವರು ಸದೃಢರಾಗಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ನಾವು ಸುಶಿಕ್ಷಿತರಾದಾಗಲೇ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಈ ಮಹಾಸಭೆಯ ಅಧ್ಯಕ್ಷತೆಯನ್ನು ಸಮಾಜದ ದೇವಪ್ಪ ಗೌರಿಅಂಗಳ ವಹಿಸಿದ್ದರು. ವೇದಿಕೆ ಮೇಲೆ ಸವಿತಾ ಸಮಾಜ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ರವಿಕುಮಾರ ಸೂಗೂರು, ಉಪಾಧ್ಯಕ್ಷ ಕಲ್ಲಪ್ಪ, ನಿರ್ದೇಶಕರುಗಳಾದ ಚಂದ್ರಶೇಖರ ಬಳ್ಳಾರಿ, ಈಶಪ್ಪ ಮಾದಿನಾಳ, ಚಂದ್ರಶೇಖರ, ಶಿವಮೂರ್ತಿ, ಮಾರುತಿ ಸೂಗೂರು, ಶ್ರೀನಿವಾಸ ಹೊನ್ನುಂಚಿ, ನಾಗರಾಜ ಕಂಪ್ಲಿ, ಶ್ರೀಮತಿ ರಂಗಮ್ಮ ಸೇರಿದಂತೆ ಸವಿತಾ ಸಮಾಜದ ರಾಯಚೂರು ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಯಲ್ಲಪ್ಪ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು.

Please follow and like us:
error

Related posts