ಆಕಾಶವಾಣಿ ಕಲಬುರಗಿಯಿಂದ ಯಶಸ್ವಿ ಎಸ್.ಎಸ್.ಎಲ್.ಸಿ – ಪಾಠಮಾಲೆಯ ನೇರ ಪ್ರಸಾರ

: ಆಕಾಶವಾಣಿ ಕಲಬುರಗಿ ಕೇಂದ್ರ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಾಯೋಜಕತ್ವದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ಹತ್ತನೇ ತರಗತಿಯ ವಿದ್ಯಾರ್ಥಿಗಳ ಗುಣಾತ್ಮಕ ಪರೀಕ್ಷಾ ಸಿದ್ಧತೆಗಾಗಿ ಯಶಸ್ವಿ ಎಸ್ ಎಸ್ ಎಲ್ ಸಿ ಎಂಬ ರೇಡಿಯೋ ಪಾಠಮಾಲೆಯನ್ನು ಆಯೋಜಿಸಿದ್ದು, ಈ ಪಾಠಮಾಲೆ ನವೆಂಬರ್ 2 ರಿಂದ 2018ರ ಫೆಬ್ರುವರಿ 28, ವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ( ರಜಾ ದಿನಗಳನ್ನು ಹೊರತು ಪಡಿಸಿ) ಮಧ್ಯಾಹ್ನ 3 ರಿಂದ 4.15 ರ ವರೆಗೆ ನೇರ ಪ್ರಸಾರದಲ್ಲಿ ಮೂಡಿ ಬರಲಿದೆ. ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ. ಎಲ್ಲಾ ವಿಷಯಗಳ ನುರಿತ, ಅನುಭವಿ ಶಿಕ್ಷಕರು ಪಾಠ ಮಾಡಲಿದ್ದಾರೆ. ಸುಮಾರು ನಾಲ್ಕು ತಿಂಗಳುಗಳಷ್ಟು ಸುದೀರ್ಘ ಅವಧಿಯವರೆಗೆ ನಡೆಯಲಿರುವ ಈ ಸರಣಿ ಕಾರ್ಯಕ್ರಮದಲ್ಲಿ ಒಟ್ಟು 96 ಪಾಠಗಳು ಮೂಡಿ ಬರಲಿವೆ.
ಪ್ರತಿದಿನ ಮಧ್ಯಾಹ್ನ 3 ರಿಂದ 3.45ರ ವರೆಗೆ ಶಿಕ್ಷಕರು ಪಾಠ ಮಾಡಲಿದ್ದಾರೆ. ಆ ನಂತರ ಆಯಾ ಪಾಠಗಳಲ್ಲಿನ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ 4.15 ರ ವರೆಗೆ ಉತ್ತರಿಸಲಿದ್ದಾರೆ.
ಈ ಪಾಠಗಳ ಜೊತೆಗೆ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ದ್ವಿತೀಯ ಭಾಷೆ ಕನ್ನಡ ಪಾಠ ಮಾಲೆ ಕೂಡ ಸೇರಿದೆ. ಇದು ಇದೇ ಅವಧಿಯಲ್ಲಿ ನ. 15 ರಿಂದ ಪ್ರತಿ ಬುಧವಾರ ಬೆಳಿಗ್ಗೆ 10.15 ರಿಂದ 11.30ರ ವರೆಗೆ ಮೂಡಿ ಬರಲಿದ್ದು, ಹನ್ನೊಂದು ಗಂಟೆಯವರೆಗೆ ಶಿಕ್ಷಕರು ಪಾಠ ಮಾಡಲಿದ್ದು, ಮುಂದೆ ಅರ್ಧಗಂಟೆಯವರೆಗೆ ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರಿಸಲಿದ್ದಾರೆ. ಈ ಪಾಠಗಳ ಧ್ವನಿ ಮುದ್ರಿಕೆಗಳನ್ನು ನವೆಂಬರ್ 8 ರಿಂದ ರಾಯಚೂರು ಹಾಗೂ ಹೊಸಪೇಟೆ ಕೇಂದ್ರಗಳಿಂದ ಕೂಡ ಮರು ಪ್ರಸಾರ ಮಾಡಲಾಗುವುದು.
ಈ ಮೊದಲು ಹೆಚ್.ಕೆ.ಆರ್.ಡಿ.ಬಿ. ಪ್ರಾಯೋಜಕತ್ವದಲ್ಲಿ 2015 ರಲ್ಲಿ, ಕಲಬುರಗಿ ಜಿಲ್ಲಾ ಪಂಚಾಯತ್‍ನ ಪ್ರಾಯೋಜಕತ್ವದಲ್ಲಿ 2010, 2012 ರಲ್ಲಿ ಯಶಸ್ವಿ ಎಸ್ ಎಸ್ ಎಲ್ ಸಿ ಯನ್ನು ಪ್ರಾಯೋಜಿಸಲಾಗಿತ್ತು. ಈ ಪ್ರಯತ್ನಗಳಿಂದಾಗಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡು ಬಂದಿತ್ತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯವರು ತಿಳಿಸಿದ್ದಾರೆ.
ಈ ಪಾಠಮಾಲೆಯಿಂದಾಗಿ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಲಾಭವಾಗಲಿದೆ. ಈ ಪಾಠಮಾಲೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಈ ಭಾಗದ ಕೀರ್ತಿಯನ್ನು ಬೆಳಗಬೇಕೆಂದು ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ಸಹಾಯಕ ನಿರ್ದೇಶಕ ಆರ್. ಕೆ. ಗೋವಿಂದ ರಾಜನ್ ಅವರು ಮನವಿ ಮಾಡಿದ್ದಾರೆ. ಅಲ್ಲದೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿನ ಶಿಕ್ಷಕರು, ಪಾಲಕರು ಈ ಸೌಲಭ್ಯದ ಗರಿಷ್ಠ ಉಪಯೋಗವಾಗುವಂತೆ ಸಹಕರಿಸಲು ಅವರು ಕೋರಿದ್ದಾರೆ.
.

Please follow and like us:
error