You are here
Home > Koppal News > ಅ. ೨೪ ರಂದು ಕೊಪ್ಪಳದಲ್ಲಿ ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆ : ಪಿ. ಸುನೀಲ್ ಕುಮಾರ್

ಅ. ೨೪ ರಂದು ಕೊಪ್ಪಳದಲ್ಲಿ ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆ : ಪಿ. ಸುನೀಲ್ ಕುಮಾರ್


ಕೊಪ್ಪಳ ಅ.  : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಇದೇ ಅ. ೨೪ ಮಹರ್ಷಿ ವಾಲ್ಮೀಕಿರವರ ಜಯಂತಿಯನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಅ. ೨೪ ರಂದು ಮಧ್ಯಹ್ನ ೧೨ ಗಂಟೆಗೆ ವೇದಿಕೆ ಸಮಾರಂಭವು ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಧಾರವಾಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ಅವರು ಮಹರ್ಷಿ ವಾಲ್ಮೀಕಿರವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದಲ್ಲಿ ಆಗಮಿಸಿದ ಗಣ್ಯರಿಗೆ “ವಾಲ್ಮೀಕಿ ರಾಮಾಯಣ” ಕಿರು ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಗುವುದು. ವೇದಿಕೆ ಸಮಾರಂಭಕ್ಕೂ ಮುನ್ನ ಬೆಳಿಗ್ಗೆ ೮-೩೦ ಗಂಟೆಗೆ ನಗರದ ಸಿರಸಪ್ಪಯ್ಯನಮಠದಿಂದ ಮಹರ್ಷಿ ವಾಲ್ಮೀಕಿರವರ ಭಾವಚಿತ್ರದೊಂದಿಗೆ ಮೆರವಣಿಗೆ ಜರುಗಲಿದ್ದು, ಮೆರವಣಿಗೆಯು ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ವೃತ್ತದದ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಸಮಾಜ ಬಾಂಧವರು, ಸಾರ್ವಜನಿಕರು ಮೆರವಣಿಗೆ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು. ಕಾರ್ಯಕ್ರಮ ದಿನದಂದು, ರಸ್ತೆ ಸ್ವಚ್ಛತೆ, ಮೆರವಣಿಗೆಯಲ್ಲಿ ಹಾಗೂ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಅಲ್ಲದೇ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ಶಿವಾನಂದ ಹೊದ್ಲೂರ್ ಉಪಸ್ಥಿತರಿದ್ದರು. ಅಲ್ಲದೇ ಸಮಾಜದ ಮುಖಂಡರುಗಳು ಭಾಗವಹಿಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Top