You are here
Home > Koppal News > ಅ. ೨೩ ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ನಿರ್ಧಾರ : ಸಿ.ಡಿ. ಗೀತಾ

ಅ. ೨೩ ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ನಿರ್ಧಾರ : ಸಿ.ಡಿ. ಗೀತಾ

ಕೊಪ್ಪಳ ಅ. ೧೫ : ಇದೇ ಅ. ೨೩ ರಂದು ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ವಿಜೃಂಭಣೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಆಚರಿಸುವುದರ ಕುರಿತು ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಅ. ೨೩ ರಂದು ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದವರೆಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು. ನಂತರ ಬೆಳಿಗ್ಗೆ ೧೧-೩೦ ಗಂಟೆಗೆ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮರವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸುವ ಗಣ್ಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಕುರಿತಾದ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಲಾಗುವುದು. ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಉದ್ದೇಶ ಮಹನಿಯರು ಮಾಡಿದ ಸಾಧನೆಗಳನ್ನು ತಿಳಿಯುವುದು ಹಾಗೂ ನೆನಪಿಸಿಕೊಳ್ಳುವುದಾಗಿದ್ದು, ಶಾಲಾ ಹಾಗೂ ಕಾಲೇಜುಗಳಲ್ಲಿಯೂ ಸಹ ಕಿತ್ತೂರ ರಾಣಿ ಚೆನ್ನಮ್ಮರವರ ಜಯಂತಿ ಆಚರಿಸುವಂತಾಗಬೇಕು. ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರಾದ ಕರಿಯಣ್ಣ ಮೇಟಿ, ಶಿವಾನಂದ ಹೊದ್ಲೂರ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ನಾಗರಾಜ ಬಳ್ಳಾರಿ, ಮಂಜುನಾಥ ಗೊಂಡಬಾಳ ಮತ್ತಿತರರು ಉಪಸ್ಥಿತರಿದ್ದು, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Top