ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ- ಡಾ. ರುದ್ರೇಶ್ ಘಾಳಿ

 ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಇಲಾಖೆಗಳ ಮೂಲಕ ಜಾರಿಯಲ್ಲಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ನೇರ ಸಾಲ, ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ, ಗಂಗಾ ಕಲ್ಯಾಣ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.  ಆದರೆ ಇದುವರೆಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ.  ಆಯ್ಕೆ ಪಟ್ಟಿಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರುಗಳಿಂದ ಕೂಡಲೆ ಅನುಮೋದನೆ ಪಡೆದು, ಫಲಾನುಭವಿಗಳಿಗೆ ಸೌಲಭ್ಯ ದೊರೆಕುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.  ಈ ವರ್ಷ ಪಶು ಸಂಗೋಪನೆ, ಟ್ಯಾಕ್ಸಿ ವಾಹನ, ಕೃಷಿ ಯಂತ್ರೋಪಕರಣ, ಆಟೋಮೊಬೈಲ್ ಸರ್ವಿಸ್‌ಗಾಗಿ ಸಾಲ ಸೌಲಭ್ಯ ನೀಡುವ ನೂತನ ಯೋಜನೆ ಜಾರಿಗೊಂಡಿದ್ದು, ಅರ್ಜಿ ಆಹ್ವಾನಿಸಿ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜರುಗಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದರು.  ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಡಿ ಪ್ರಸಕ್ತ ವರ್ಷ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ೧೫ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸುವ ಗುರಿ ಇದೆ.  ಅದೇ ರೀತಿ ಉದ್ಯೋಗ ಮತ್ತು ನಿಯುಕ್ತಿ ಉಪಘಟಕದಡಿ ೧೧೦ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿಗೊಳಿಸುವ ಯೋಜನೆ ಅನುಷ್ಠಾನ ಹಂತದಲ್ಲಿದ್ದು, ಕೂಡಲೆ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕೃಷಿ ಇಲಾಖೆಯಲ್ಲಿ ಬೀಜ ಪೂರೈಕೆ, ಕೃಷಿ ಯಂತ್ರೋಪಕರಣ, ಕೃಷಿಭಾಗ್ಯ ಸೇರಿದಂತೆ ಹತ್ತು ಹಲವು ಯೋಜನೆಗಳಿದ್ದು, ಇದರಲ್ಲಿ ಶೇ. ೧೫ ರಷ್ಟು ಅಲ್ಪಸಂಖ್ಯಾತರ ವರ್ಗದವರಿಗೆ ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮೆಹಿಮೂದ್ ಅವರು, ಬಿದಾಯಿ (ಶಾದಿಭಾಗ್ಯ) ಯೋಜನೆಯಡಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧರು ಹಾಗೂ ಪಾರ್ಸಿ ಜನಾಂಗದ ಬಡ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳ ಮದುವೆಗೆ ಸರ್ಕಾರ ಸಹಾಯಧನ ನೀಡುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ ೭೮೪ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಲಾಗಿದೆ.  ಇನ್ನೂ ೬೫೨ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.  ಈ ವರ್ಷ ವಿದ್ಯಾಸಿರಿ ಯೋಜನೆಯಡಿ ಅಲ್ಪಸಂಖ್ಯಾತರ ವರ್ಗದ ೪೧೩ ವಿದ್ಯಾರ್ಥಿಗಳಿಂದ ಸಹಾಯಧನಕ್ಕಾಗಿ ಅರ್ಜಿಗಳು ಬಂದಿವೆ.  ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿವೇತನಕ್ಕಾಗಿ ೧೮ ಅರ್ಜಿಗಳು ಸ್ವೀಕೃತಗೊಂಡಿವೆ.  ಇದೇ ವರ್ಷ ಶಾದಿ ಮಹಲ್‌ಗಳ ನಿರ್ಮಾಣಕ್ಕಾಗಿ ೦೩ ಸಂಸ್ಥೆಗಳಿಗೆ ೫೩. ೦೫ ಲಕ್ಷ ರೂ., ೦೨ ಜೈನ್ ಸಮುದಾಯ ಭವನಕ್ಕಾಗಿ ೨೭. ೫೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.ಸಭೆಯಲ್ಲಿ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಬಾಬುರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು

Please follow and like us:
error