ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಸಿ : ಎಂ. ಕನಗವಲ್ಲಿ

ಅಲ್ಪಸಂಖ್ಯಾತರ ಸಮುದಾಯದವರಿಗೆ ಇರುವ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿಗಳ 15 ಅಂಶಗಳ ಅನುಷ್ಠಾನ ಜಿಲ್ಲಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಗೆ ಒದಗಿಸಲಾದ ಅನುದಾನದಲ್ಲಿ ಶೇಕಡಾ 15% ರಷ್ಟನ್ನು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಅನುದಾನದ ಆರ್ಥಿಕ ಮತ್ತು ಭೌತಿಕ ಗುರಿಗಳ ಬಗ್ಗೆ ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಪ್ರಸಕ್ತ ವರ್ಷದಲ್ಲಿ ಪ್ರಥಮ ತ್ರೈಮಾಸಿಕದಲ್ಲಿ ಫಲಾನುಭವಿಗಳಿಗೆ ನೀಡಿದ ಸೌಲಭ್ಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 337 ಅಲ್ಪಸಂಖ್ಯಾತರ ಫಲಾನುಭವಿಗಳು ಯೋಜನೆಯ ಪ್ರಯೋಜನೆ ಪಡೆದಿರುತ್ತಾರೆ.   ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವತಿಯಿಂದ ಅಲ್ಪಸಂಖ್ಯಾತರಿಗೆ ಪಶುಸಂಗೋಪನೆ ಯೋಜನೆಯಡಿ 51 ಫಲಾನುಭವಿಗಳಿಗೆ ತಲಾ 40,000/- ದಂತೆ ಸಹಾಯನುಧನ ನೀಡಿದ್ದು, ಹಾಗೂ ಟ್ಯಾಕ್ಸಿ ವಾಹನ ಯೋಜನೆಯಡಿ 08 ಫಲಾನುಭವಿಗಳಿಗೆ 03 ಲಕ್ಷ ರಿಯಾಯಿತಿಯೊಂದಿಗೆ ಬ್ಯಾಂಕ ಸಹಯೋಗದೊಂದಿಗೆ ಸಾಲ ಪಡೆದು ವಾಹನ ಖರೀದಿಸಿರುತ್ತಾರೆ. ಅಲ್ಪಸಂಖ್ಯಾತರ ಸಮುದಾಯದವರಿಗೆ ಕೃಷಿ ಬಾಗ್ಯ ಯೋಜನೆಯಡಿ 1195 ಪಲಾನುಭವಿಗಳು ಹಾಗೂ ಕೃಷಿ ಯಂತ್ರೋಪಕರಣ ಯೋಜನೆಯಲ್ಲಿ 14 ಜನ ಪಲಾನುಭವಿಗಳಾಗಿದ್ದಾರೆ. ರೇಷ್ಮೆ ಇಲಾಖೆಯಲ್ಲಿ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ರೇಷ್ಮೆಯ 100 ಮೊಟ್ಟೆಗಳಿಗೆ 1000 ರೂ. ಗಳ ಸಹಾಯಧನ ನೀಡಲು ಅವಕಾಶವಿದೆ ಎಂದು ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮಾತನಾಡಿ ಅಲ್ಪಸಂಖ್ಯಾತರ ಸಮುದಾದವರಿಗೆ 5490 ಫಲಾನುಭವಿಗಳಿಗೆ 6550 ಲಕ್ಷ ರೂ. ಸಾಲ ಮಂಜೂರಾತಿ ನೀಡಲಾಗಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ಮಾತನಾಡಿ ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳ ಮಾಹಿತಿ ಪಡೆದು ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ತಾಲೂಕುಗಳಲ್ಲಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.  ಬಿದಾಯಿ ಯೋಜನೆಯಡಿ ಫಲಾನುಭವಿಗಳ ಮೊದಲ ತ್ರೈಮಾಸಿಕ ಅನುದಾನ ಬಿಡುಗಡೆಗೆ ಸ್ಥಳ ಪರಿಶೀಲನೆ ಹಂತದಲ್ಲಿದ್ದು ಸದ್ಯದಲ್ಲಿಯೇ ಫಲಾನುಭವಿಗಳ ಖಾತೆಗಳಿಗೆ ಸಹಾಯಧನ ಪಾವತಿ ಮಾಡಲಾಗುವುದು. ಜಿ.ಎನ್.ಎಮ್ ನರ್ಸಿಂಗ, ಮೆಟ್ರಿಕ್ ಪೂರ್ವ / ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್. 30 ರೊಳಗಾಗಿ ಅರ್ಜಿಗಳನ್ನು ಆಯಾ ತಾಲೂಕು ಮಾಹಿತಿ ಕೇಂದ್ರಗಳಿಗೆ ಸಲ್ಲಿಸಬಹುದು ಎಂದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವೆಂಕಟರಾಜಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Please follow and like us:
error