You are here
Home > Koppal News > ಅರಿತು ನಡೆದರೆ ಒತ್ತಡವಿಲ್ಲ : ರಾಜಶೇಖರ ಪಾಟೀಲ

ಅರಿತು ನಡೆದರೆ ಒತ್ತಡವಿಲ್ಲ : ರಾಜಶೇಖರ ಪಾಟೀಲ

ಕೊಪ್ಪಳ ಡಿ. ೧೯: ಅರಿತು ನಡೆದರೆ ಒತ್ತಡಗಳಿಲ್ಲ, ಮನಸ್ಸು ಸಶಕ್ತವಾಗಿದ್ದಲ್ಲಿ ಬದುಕು ಒತ್ತಡದಿಂದ ದೂರವಿರುತ್ತದೆ ಎಂದು ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ  ರಾಜಶೇಖರ ಪಾಟೀಲರವರು ನುಡಿದರು. ಅವರು ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ೨೦೧೮ರ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ’ಸಶಕ್ತ ಮನ – ಸಂತೃಪ್ತ ಜೀವನ’ ಎಂಬ ಧ್ಯೇಯದಡಿಯಲ್ಲಿ ’ನಮ್ಮ ನಡೆ ಒತ್ತಡ ರಹಿತ ಬದುಕಿನ ಕಡೆ’ ಎಂಬ ಶಿರ್ಷಿಕೆಯಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಮನಸ್ಸನ್ನು ಗಟ್ಟಿಯಾಗಿ, ಸಶಕ್ತವಾಗಿ ಮಾಡಿಕೊಂಡಾಗ ಎಂತಹ ಸಮಸ್ಯೆಗಳು ಬಂದರೂ ಎದುರಿಸುವ ಸಾಮರ್ಥ್ಯ ಬರುತ್ತದೆ. ಬಾಲಕರಿಂದ ಹಿಡಿದು ಮುದುಕರವರೆಗೂ ಅನೇಕ ಒತ್ತಡಗಳಿರುತ್ತವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯು ಅವರಲ್ಲಿರುತ್ತದೆ. ಅದನ್ನು ಸದೃಢವಾಗಿ ಬಳಸಿಕೊಳ್ಳಬೇಕಿದೆ. ಗುರಿ ಮತ್ತು ಪ್ರಯತ್ನಗಳೆರಡೂ ಸಮನಾಗಿದ್ದಾಗ ಯಾವುದೇ ಒತ್ತಡಗಳು ಎದುರಾಗುವುದಿಲ್ಲ. ಗುರಿ ಮತ್ತು ಪ್ರಯತ್ನಗಳಲ್ಲಿ ವ್ಯತ್ಯಾಸಗಳಿದ್ದಾಗ ಮನುಷ್ಯನ ಬದುಕಿನಲ್ಲಿ ಒತ್ತಡಗಳು ಹೆಚ್ಚಾಗಿ ಬದುಕು ದುರಂತದ ಕಡೆಗೆ ಸಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ   ಅಶೋಕ ಓಜಿನಹಳ್ಳಿ ನೆರವೇರಿಸಿದರೆ,   ಶಿವನಗೌಡ ಪೋಲಿಸ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ. ಮೇಘನಾ ಕುಲಕರ್ಣಿ ಪ್ರಾರ್ಥನೆಗೈದರು. ಈ ಕಾರ್ಯಕ್ರಮದಲ್ಲಿ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Top