ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತು ತೀವ್ರ ಕಟ್ಟೆಚ್ಚರವಿರಲಿ- ಎಂ. ಕನಗವಲ್ಲಿ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಕೈಗೊಳ್ಳುವ ಪ್ರತಿಯೊಂದು ಚುನಾವಣಾ ವೆಚ್ಚದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿ, ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ವಿವರಗಳ ಸಂಗ್ರಹಣೆ ಹಾಗೂ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ *ಅಭ್ಯರ್ಥಿಗೆ 28 ಲಕ್ಷ ರೂ. ಗಳ ವೆಚ್ಚ* ಮಿತಿಯನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ. ಅಭ್ಯರ್ಥಿಗಳು *ಚುನಾವಣಾ ವೆಚ್ಚ ನಿರ್ವಹಣೆಗಾಗಿಯೇ ಬ್ಯಾಂಕ್‍ನಲ್ಲಿ ಪ್ರತ್ಯೇಕವಾಗಿ ಹೊಸ ಖಾತೆಯನ್ನು ತೆರೆಯುವುದು ಕಡ್ಡಾಯವಾಗಿದೆ.* ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ವೆಚ್ಚದ ಸಂಪೂರ್ಣ ವಿವರಣೆಯನ್ನು ರಜಿಸ್ಟರ್‍ನಲ್ಲಿ ನಮೂದಿಸುವ ಸಲುವಾಗಿ ಕ್ಷೇತ್ರ ಚುನಾವಣಾಧಿಕಾರಿಗಳು ಪ್ರತ್ಯೇಕವಾಗಿ ರಜಿಸ್ಟರ್‍ಗಳನ್ನು ನೀಡುವರು. ಈ ರಜಿಸ್ಟರ್‍ನಲ್ಲಿಯೇ ಅಭ್ಯರ್ಥಿಗಳು ತಮ್ಮ ವೆಚ್ಚದ ನಿರ್ವಹಣೆಯನ್ನು ಕೈಗೊಳ್ಳಬೇಕಾಗುತ್ತದೆ. ಇದರ ಜೊತೆಗೆ ಪ್ರತಿ ಅಭ್ಯರ್ಥಿವಾರು ಶ್ಯಾಡೋ ವೆಚ್ಚ ರಜಿಸ್ಟರ್ ಅನ್ನು ನಿರ್ವಹಿಸಲಾಗುವುದು. ಅಭ್ಯರ್ಥಿಗಳು ವಾಸ್ತವವಾಗಿ ಚುನಾವಣಾ ವೆಚ್ಚ ಕೈಗೊಂಡಿದ್ದು, ಅಭ್ಯರ್ಥಿ ನೀಡುವ ವಿವರದಲ್ಲಿ ನಮೂದಾಗದೇ ಇರುವ ವೆಚ್ಚದ ವಿವರಗಳನ್ನು ಚುನಾವಣಾ ಅಧಿಕಾರಿಗಳು ಶ್ಯಾಡೋ ವೆಚ್ಚ ರಜಿಸ್ಟರ್‍ನಲ್ಲಿ ನಮೂದಿಸಿಟ್ಟುಕೊಳ್ಳುತ್ತಾರೆ. ಇದರ ಜೊತೆಗೆ ವೆಚ್ಚದ ಸಂಪೂರ್ಣ ಸಾಕ್ಷ್ಯಾಧಾರಿತ ದಾಖಲೆಗಳನ್ನು ಕೂಡ ಇಂತಹ -ರಜಿಸ್ಟರ್ ಜೊತೆಗೆ ಇರಿಸಿಕೊಳ್ಳುವರು. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಲು ಯತ್ನಿಸಿದಲ್ಲಿ, ಶ್ಯಾಡೋ ರಜಿಸ್ಟರ್‍ನಲ್ಲಿನ ಮಾಹಿತಿಯೊಂದಿಗೆ ತಾಳೆ ಹಾಕಲಾಗುವುದು. ಹೀಗಾಗಿ ಅಧಿಕಾರಿಗಳು ಶ್ಯಾಡೋ ರಜಿಸ್ಟರ್ ಅನ್ನು ಸರಿಯಾಗಿ ನಿರ್ವಹಿಸಬೇಕು. ಚುನಾವಣಾ ಸಂದರ್ಭದಲ್ಲಿ ಪ್ರತಿ ಅಭ್ಯರ್ಥಿ ಮೂರು ಬಾರಿ ವೆಚ್ಚದ ಸಂಪೂರ್ಣ ವಿವರವನ್ನು ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಿರುವುದರಿಂದ, ಈ ಕುರಿತು ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ನಿಗದಿತ ಅವಧಿಯಲ್ಲಿ ವೆಚ್ಚ ವಿವರ ಸಲ್ಲಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೇಲೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು. *ಪ್ರತಿ ದಿನದ ವೆಚ್ಚದ ವಿವರ ಹಾಗೂ ವರದಿಗಳನ್ನು ಕ್ಷೇತ್ರ ಚುನಾವಣಾಧಿಕಾರಿಗಳು, ಕಂಟ್ರೋಲ್ ರೂಂ., ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್, ಆದಾಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ವಿಡಿಯೋ ಸರ್ವೆಲೆನ್ಸ್ ಟೀಮ್, ಮೀಡಿಯಾ ಮಾನಿಟರಿಂಗ್ ಟೀಂ, ಹಾಗೂ ಬೂತ್ ಮಟ್ಟದ ಜಾಗೃತಿ ಗುಂಪುಗಳು ಅಕೌಂಟಿಂಗ್ ಟೀಂಗೆ ತಪ್ಪದೆ ಸಲ್ಲಿಸಬೇಕು.* 01 ಲಕ್ಷ ರೂ. ಮೇಲ್ಪಟ್ಟು ಬ್ಯಾಂಕ್‍ಗಳಲ್ಲಿ ಶಂಕಾಸ್ಪದ ಹಣ ಜಮಾ ಅಥವಾ ನಗದೀಕರಣ ಕುರಿತು ನಿತ್ಯ ವರದಿ ನೀಡುವಂತೆ ಈಗಾಗಲೆ ಬ್ಯಾಂಕರ್ಸ್‍ಗಳಿಗೆ ನಿರ್ದೇಶನ ನೀಡಲಾಗಿದ್ದು, ಇದರ ಬಗ್ಗೆಯೂ ನಿಗಾ ವಹಿಸಬೇಕು. ಸ್ಟಾರ್ ಪ್ರಚಾರಕರ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ಅಭ್ಯರ್ಥಿ ಇದ್ದಲ್ಲಿ ಅಥವಾ ಅವರ ಹೆಸರು ಇರುವ ಬ್ಯಾನರ್ ಅಳವಡಿಸಿದ್ದಲ್ಲಿ, ಅದರ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು. ಚುನಾವಣಾ ಅಧಿಸೂಚನೆಯ ನಂತರ ಮದುವೆ ಸಭಾಂಗಣಗಳು, ಕಾನ್ಫರೆನ್ಸ್ ಹಾಲ್‍ಗಳು ಇಂತಹ ಸಭಾಂಗಣಗಳ ಮಾಲೀಕರು ಯಾವುದೇ ಕಾರ್ಯಕ್ರಮಗಳ ಆಯೋಜನೆ ಮಾಡುವ ಪೂರ್ವದಲ್ಲಿ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಸಾಮೂಹಿಕ ಮದುವೆ ಅಥವಾ ಸಮಾರಂಭಗಳಿದ್ದಲ್ಲಿ ಅನುಮತಿ ತಪ್ಪದೆ ಪಡೆದುಕೊಳ್ಳಬೇಕು.