ಅನರ್ಹ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‍ಗಳನ್ನು ಹಿಂದಿರುಗಿಸಿ : ಡಿಸಿ

ಕೊಪ್ಪಳ,ಮಾ.  ): ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ರೀತಿಯ ಅನರ್ಹರು ಅಂತ್ಯೋದಯ ಮತ್ತು ಆದ್ಯತಾ ಬಿಪಿಎಲ್ ಕಾರ್ಡ್‍ಗಳನ್ನು ಹೊಂದಿದ್ದಲ್ಲಿ ಅವುಗಳನ್ನು ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.
ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 03 ಹೆಕ್ಟರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಹೊಂದಿರುವ ಕುಟುಂಬಗಳು, ಗ್ರಾಮೀಣ ಪ್ರದೇಶಗಳನ್ನು ಹೊರತು ಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಯಕ್ಕಾಗಿ ಸ್ವತಃ ಟ್ರಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಮುಂತಾದವುಗಳನ್ನು ಹೊಂದಿರುವ ಕುಟುಂಬಗಳನ್ನು ಹೊರತು ಪಡಿಸಿ, ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ.ಗಿಂತಲೂ ಹೆಚ್ಚು ಇರುವ ಈ ನಾಲ್ಕು ವರ್ಗಗಳಿಗೆ ಸೇರಿದ ಕುಟುಂಬಗಳು ಅಂತ್ಯೋದಯ ಮತ್ತು ಆದ್ಯತಾ ಬಿಪಿಎಲ್ ಕಾರ್ಡ್‍ಗಳನ್ನು ಹೊಂದಲು ಅನರ್ಹರಾಗಿರುತ್ತಾರೆ.
ಜಿಲ್ಲೆಯಲ್ಲಿ 2019ರ ಅಕ್ಟೋಬರ್ ಮಾಹೆಯವರೆಗೆ ಅಂತ್ಯೋದಯ – 36,688 ಮತ್ತು ಆದ್ಯತಾ ಬಿಪಿಎಲ್ – 2,90,512 ಸೇರಿ ಒಟ್ಟು 3,27,200 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗಿದೆ. 11,787 ಕುಟುಂಬಗಳಿಗೆ ಆದ್ಯತೇತರ (ಎಪಿಎಲ್) ಪಟಿತರ ಚೀಟಿಗಳನ್ನು ನೀಡಲಾಗಿದೆ. ಉದ್ಯೋಗಸ್ಥರು ಆರ್ಥಿಕವಾಗಿ ಸದೃಢವಾಗಿರುವವರು ಹಾಗೂ ಜಂಟಿ ಕುಟುಂಬಗಳನ್ನು ಕೃತಕವಾಗಿ ವಿಭಾಗಿಸಿಕೊಂಡಿರುವ ಹಾಗೂ ಏಕವ್ಯಕ್ತಿ ಹೆಸರಿನಲ್ಲಿ ಪಡಿತರ ಚೀಟಿಗಳನ್ನು ಪಡೆದಿದ್ದು, ಈ ಕಾರಣದಿಂದ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿರುತ್ತದೆ.
ಆರ್ಥಿಕವಾಗಿ ಸಬಲ ಮತ್ತು ಇತರೆ ಅನರ್ಹರು ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಬಿಪಿಎಲ್ ಕಾರ್ಡ್‍ಗಳನ್ನು ಹಿಂದಿರುಗಿಸಲು ಈಗಾಗಲೇ ಸಾರ್ವಜನಿಕರಿಗೆ ಮನವಿ ಮಾಡಲಾಗಿದ್ದು, ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳಿಗೆ ವಿರುದ್ದವಾಗಿ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವವರು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಪಡಿತರ ಕಾರ್ಡ್‍ಗಳನ್ನು ನೀಡಿ ಎಪಿಎಲ್ ಕಾರ್ಡ್‍ಗಳನ್ನು ಪಡೆದುಕೊಳ್ಳಬೇಕು.
ತಹಶೀಲ್ದಾರರಿಗೆ ಅನರ್ಹರ ಕಾರ್ಡ್‍ಗಳನ್ನು ನೀಡದೆ ಇದ್ದಲ್ಲಿ ಅಕ್ರಮ ಪಡಿತರ ಚೀಟಿ ಎಂದು ಗುರುತಿಸಿ ಅವರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ – 1955 ಹಾಗೂ ಕರ್ನಾಟಕ ಅನಾಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ – 1977ರ ಹಾಗೂ ಐಪಿಸಿ ಕಲಂಗಳ ಅಡಿಯಲ್ಲಿ ಇಲ್ಲವಾದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error