ಅಧಿಕಾರದಲ್ಲಿರುವವರೇ ಕೊಲೆಗಡುಕರಾಗಿರುವಾಗ ಕಾಪಾಡುವವರು ಯಾರು?-ಪ್ರಕಾಶ್ ರೈ

#ಗೌರಿ_ದಿನದ_ಸಮಾರೋಪ_ನುಡಿ: #ಪ್ರಕಾಶ್_ರೈ

ಗೌರಿಯನ್ನು ಬಿತ್ತು ಒಂದು ವರ್ಷವಾಗಿದೆ. ಆದರೆ ಗೌರಿಯೊಳಗೆ ನಾನು ಹುಟ್ಟಿ ಒಂದು ವರ್ಷವಾಗಿದೆ. ಆ ನೋವು, ಆ ಹತಾಶೆ, ಆ ಅನ್ಯಾಯ ಇವುಗಳನ್ನೆಲ್ಲಾ ಒಳಗೊಂಡ ಈ ಒಂದು ವರ್ಷದ ಹಸಿಗೂಸು ಹೇಳುವಂತೆ ನಡೆಯುತ್ತಿದ್ದೇನೆ.
ಈ ಒಂದು ವರ್ಷ ಬಹಳ ಮಾತಾಡಿದ್ದೇವೆ. ಕೋಪ, ಆಕ್ರೋಶ, ಅಸಹಾಯಕತೆ, ನೋವು.., ನಾವು ಒಂದು ವರ್ಷದ ಹಿಂದೆ ಗೌರಿಯನ್ನು ಕಳೆದುಕೊಂಡಾಗ ಅದಕ್ಕೆ ಯಾರು ಕಾರಣ ಎಂದು ಹೇಳಿದೆವೋ, ಎಲ್ಲಾ ತನಿಖೆಗಳು ಈಗ ಅದನ್ನೆ ಹೇಳುತ್ತಿವೆ.ನಾವು ನಮ್ಮ ಹೋರಾಟವನ್ನು ಬದಲಿಸಬೇಕಿದೆ. ಇಲ್ಲದಿದ್ದರೆ ಅವರು ಜನರ ಒಳ್ಳೆಯತನವನ್ನೇ ಬದಲಿಸಿಬಿಡುತ್ತಾರೆ.
ನಾವು ನಮ್ಮ ನೋವನ್ನು ಮರೆತು, ಗೌರಿಯನ್ನು ಮರೆತು ಯೋಚನೆ ಮಾಡಬೇಕಿದೆ.

ಗೌರಿ ಹೇಗೆ ಒಂದು ಮುಗಿಯದ ಕಥೆಯಾಗಿದ್ದಾಳೆ, ಎಷ್ಟು ಅನ್ಯಾಯ, ಕೂತುಹಲಗಳನ್ನು ತನ್ನ ಪ್ರಾಣಾರ್ಪಣೆಯ ಮೂಲಕ ತೋರಿಸಿದ್ದಾಳೆ. ಇದರಿಂದ ಕಲ್ಬುರ್ಗಿ, ಪಾನ್ಸಾರೆ, ದಾಬೋಲ್ಕರ್‍ರ ಹತ್ಯೆಯ ಸಂಚುಗಳು ಗೋಚರಿಸುತ್ತಿವೆ.

ಈಗ ಪರಿಸ್ಥಿತಿ ಹೇಗಿದೆ ಅಂದ್ರೆ ಅಣೆಕಟ್ಟಿಗೆ ನೀರು ಜಾಸ್ತಿ ಸೇರುತ್ತಿದೆ. ಅಣೆಕಟ್ಟು ಒಡೆಯುವುದೊಂದೇ ಬಾಕಿ. ಬಲಾಢ್ಯರು ಅಧಿಕಾರಕ್ಕೆ ಬರುತ್ತಿದ್ದಾರೆ. ಇನ್ನೊಂದಿಷ್ಟು ಕೊಲೆಗಳು, ಹೊಡೆತಗಳು ಸೇರಿದಂತೆ ಏನಾದರೂ ಮಾಡಿ ಅಧಿಕಾರದಲ್ಲಿ ಕುಳಿತುಕೊಳ್ಳಲು ಹವಣಿಸುತ್ತಿದ್ದಾರೆ.

ಜಯಶ್ರಿರವರು ಹಾಡುತ್ತಿದ್ದಾಗ ಕಾಪಾಡೋ ಕುರಿಗಳನ್ನು ಎಂದರು. ನಾವೆಲ್ಲಾ ಕುರಿಗಳಾಗಿದ್ದೇವೆ. ಕಾಪಾಡಾವವರು ಯಾರು. ಅಧಿಕಾರದಲ್ಲಿರುವವರೇ ಕೊಲೆಗಡುಕರಾಗಿರುವಾಗ ಕಾಪಾಡುವವರು ಯಾರು? ನಾವೇ ಕಾಪಾಡಬೇಕಿದೆ.
ಇಂದು ಮನುಷ್ಯ ಧರ್ಮವನ್ನಲ್ಲ, ಹಿಂದೂ ಧರ್ಮವನ್ನು ಕಾಪಾಡಬೇಕಿದೆ. ಜನಸಾಮಾನ್ಯರಿಗೆ ಇದನ್ನು ಅರ್ಥಮಾಡಿಸಬೇಕಿದೆ.

ನಾವೆಲ್ಲರು ಒಂದು ದಿನ ಸಾಯುತ್ತೇವೆ. ನಾವ್ಯಾರು ಚಿರಂಜೀವಿಗಳಲ್ಲ. ಆದರೆ ಸಾಯುವ ವಿಧಾನ ಯಾವುದು. ಅಲ್ಲಿಯವರೆಗೂ ನಮಗೆ ಬದುಕು ಇರುತ್ತದೆ.ಗೌರಿ, ದಾಬೋಲ್ಕರ್, ಪಾನ್ಸಾರೆ, ಕಲ್ಬುರ್ಗಿಯವರದು ಸಾವಲ್ಲ. ಅದು ಕೊಲೆ. ಅವರ ಬದುಕನ್ನು ನಿಲ್ಲಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನೆ ಅವರು ನಾಳೆ ನಾವಾಗುತ್ತೇವೆ.

ಮನಮೋಹನ್ ಸಿಂಗ್‍ರನ್ನು ಮೌನಿ ಎಂದು ಗೇಲಿ ಮಾಡುತ್ತಿದ್ದೇವೆ. ಆದರೆ ಹೀಗೊಬ್ಬ ಪ್ರಧಾನಿಯಾಗಿದ್ದಾರೆ ಅವರು ಮೌನವಾಗಿರುತ್ತಾರೆ. ಇದು ಅಪಾಯಕಾರಿ. ಇದು ರಾಕ್ಷಸರೂಪದ ಮೌನ. ದೇಶ ಉರಿಯುತ್ತಿದ್ದರೂ ಮೌನವಾಗಿದ್ದಾರೆ. ಲಿಂಚಿಂಗ್ ಎಲ್ಲಾವನ್ನು ಸುಮ್ಮನೆ ನೋಡಿ ಕೊಲೆಗಾರರಿಗೆ ಬೆಂಬಲಿಸುತ್ತಿದ್ದಾರೆ.

ಇವರೆಂತ ಕಳ್ಳರೆಂದರೆ ಊರು ಸುತ್ತು ಬೆಂಕಿ ಹಾಕಿ ಜನರೆಲ್ಲಾ ಆರಿಸಲು ಹೋದಾಗ ಊರು ಕೊಳ್ಳೆ ಹೊಡೆಯುವವರು ಆಗಿದ್ದಾರೆ. ಮೋದಿಯವರ ಮಾತುಗಳು ಸಿಗರೇಟ್ ಪ್ಯಾಕ್ ಮೇಲೆ ಬರೆಯುವ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬರೆಯುವ ಡಿಸ್‍ಕ್ಲೈಮರ್ ಅಷ್ಟೇ ಆಗಿವೆ. ಇದನ್ನು ಅರ್ಥಮಾಡಿಕೊಳ್ಳಬೇಕಿದೆ.

ಇದನ್ನು ನಾವು ತುಂಬಾ ವ್ಯವಸ್ಥಿತವಾಗಿ ತಾಳ್ಮೆಯಿಂದ ಜನರಿಗೆ ಹೇಳಬೇಕಿದೆ. ನಮ್ಮನ್ನು
ಅರ್ಬನ್ ನಕ್ಸಲ್, ಹಿಂದೂ ವಿರೋಧಿ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ತುಂಬಾ ವ್ಯವಸ್ಥಿತಿವಾಗಿ ಪಿತೂರಿ ಮಾಡುತ್ತಿದ್ದಾರೆ. ನಾವು ಜೋಪಾನವಾಗಿ ಮಾತಾಡಬೇಕಿದೆ. ಒಂದು ವರ್ಷದಿಂದ ನಮ್ಮ ಜೊತೆಗೆ ಇನ್ನಷ್ಟು ಜನ ಸೇರುತ್ತಿದ್ದಾರೆ. ಅವರ ಬಣ್ಣಗಳು ಬಯಲಾಗುತ್ತಿವೆ. ಪ್ರತಿಯೊಬ್ಬರ ಜೊತೆಗೆ ನಮ್ಮ ನೋವನ್ನು ಇಂದಿನ ಪರಿಸ್ಥಿತಿಯನ್ನು ವಿವೇಕದಿಂದ, ಕರುಣೆಯಿಂದ, ತಾಳ್ಮೆಯಿಂದ ಹೇಳೋಣ.

ನಾವು ಜಸ್ಟ್ ಆಸ್ಕಿಂಗ್ ಫೌಂಡೇಶನ್ ನಿಂದ ಪ್ರಶ್ನೆ ಕೇಳುತ್ತಿದ್ದಾಗ ಬರೀ ಪ್ರಶ್ನೆ ಕೇಳುವುದಷ್ಟೆ ನಿಮ್ಮ ಕೆಲಸವ ಎಂದು ಕೇಳುತ್ತಿದ್ದರು. ಅಷ್ಟೇ ಅಲ್ಲ. ಕರ್ನಾಟಕದಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದ್ದೇವೆ. ಈಗ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಮತ್ತು ಹಲವು ಪ್ರಾಧ್ಯಾಪಕರ ಬೆಂಬಲದೊಂದಿಗೆ ಕರ್ನಾಟಕದಲ್ಲಿ 10 ಸರ್ಕಾರಿ ಶಾಲೆಗಳ ಬಲವರ್ಧನೆಯಲ್ಲಿ ಕೈಜೋಡಿಸುತ್ತಿದ್ದೇವೆ.

ಅದರ ಜೊತೆಗೆ ಜಿಗ್ನೇಶ್ ಮೇವಾನಿಯವರಿಗೆ ಒಂದು ಉಡುಗೊರೆ ನೀಡಲು ಬಯಸುತ್ತೇನೆ. ಅದೇನೆಂದರೆ ನಮ್ಮ ಜಸ್ಟ್ ಆಸ್ಕಿಂಗ್ ಫೌಂಡೇಶನ್ ವತಿಯಿಂದ ಗುಜರಾತ್ ನಲ್ಲಿ ಒಂದು ಗ್ರಾಮವನ್ನು ಗೌರಿ ಹೆಸರಿನಲ್ಲಿ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇವೆ.

Please follow and like us:
error