ಅತಿಥಿ ಉಪನ್ಯಾಸಕರಿಗೆ ಲಾಕ್‍ಡೌನ್ ಅವಧಿಯ 5 ತಿಂಗಳ ವೇತನ ಪಾವತಿಗೆ ಆದೇಶ : ಸರ್ಕಾರದ ಕ್ರಮ ಸ್ವಾಗತಾರ್ಹ

 

Kannadanet NEWS ರಾಜ್ಯದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 14447 ಅತಿಥಿ ಉಪನ್ಯಾಸಕರಿಗೆ ಲಾಕ್‍ಡೌನ್ ಅವಧಿಯ ಎಪ್ರೀಲ್ 2020ರಿಂದ ಅಗಷ್ಟ್ 2020ರ ವರೆಗಿನ 5 ತಿಂಗಳ ಕೊರೋನಾ ಅವಧಿಯನ್ನು ಆನ್‍ಡ್ಯೂಟಿ ಎಂದು ಪರಿಗಣಿಸಿ ಗೌರವಧನ ಪಾವತಿಸಲು ಸರ್ಕಾರ ಆದೇಶಿಸಿದೆ. ಇದು ಅತಿಥಿ ಉಪನ್ಯಾಸಕರು ರಾಜ್ಯಾಧ್ಯಂತ ನಡೆಸಿದ ಆನ್‍ಲೈನ್ ಹಾಗೂ ಆಫ್‍ಲೈನ್ ಹೋರಾಟಗಳಿಗೆ ಸಂದ ಜಯವಾಗಿದೆ. ಆ ಹೋರಾಟಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಅಭಿನಂದನೆಗಳನ್ನು ತಿಳಿಸುತ್ತದೆ. ಹಾಗೂ ಹೋರಾಟಕ್ಕೆ ಸ್ಪಂದಿಸಿ ಗೌರವಧನ ಪಾವತಿಸಲು ಆದೇಶಿಸಿದ ಸರ್ಕಾರದ ಕ್ರಮವನ್ನು ಎಲ್ಲ ಅತಿಥಿ ಉಪನ್ಯಾಸಕರ ಪರವಾಗಿ ಹೋರಾಟ ಸಮಿತಿಯು ಸ್ವಾಗತಿಸುತ್ತದೆ.

ಒಟ್ಟು 14447 ಅತಿಥಿ ಉಪನ್ಯಾಸಕರಿಗೆ 5 ತಿಂಗಳ ಗೌರವಧನ ಪಾವತಿಸಲು ರೂ.85.92 ಕೋಟಿ ಅನುಧಾನದ ಅವಶ್ಯಕತೆ ಇದೆ. ಆದರೆ ಈಗ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಲಭ್ಯವಿರುವ ಉಳಿಕೆ ಹಣದಲ್ಲಿ ಕೇವಲ ರೂ.55.70 ಕೋಟಿ ಬಿಡುಗಡೆಗೆ ಆದೇಶ ನೀಡಲಾಗಿದೆ. ಇನ್ನೂ ರೂ.32.22 ಕೋಟಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಆಗ್ರಹಿಸುತ್ತದೆ. ಹಾಗೂ ನಮ್ಮ ಇನ್ನುಳಿದ ಬೇಡಿಕೆಗಳಾದ ಹರಿಯಾಣ, ಪಶ್ಚಿಮ ಬಂಗಾಳ ಮಾದರಿಯಲ್ಲಿ ಸಮರ್ಪಕ ವೇತನ ಹಾಗೂ ಸೇವಾ ಭದ್ರತೆಯನ್ನು ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತದೆ.

ನಾವು ಲಾಕ್‍ಡೌನ್ ಅವಧಿಯ ವೇತನವನ್ನು ಹೋರಾಟದ ಮೂಲಕ ಪಡೆದುಕೊಳ್ಳಲು ಸಾಧ್ಯವಾಗಿದೆ. ಆದರೆ ನಮ್ಮ ಇನ್ನಿಳಿದ ಬೇಡಿಕೆಗಳಿಗಾಗಿ ಬಲಿಷ್ಠ ಐಕ್ಯ ಹೋರಾಟ ಕಟ್ಟಲು ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಸಜ್ಜಾಗಬೇಕೆಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಈ ಮೂಲಕ ಕರೆ ನೀಡುತ್ತದೆ ಎಂದು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಕೊಪ್ಪಳ ಸಂಚಾಲಕ ಶರಣು ಪಾಟೀಲ್ ಹೇಳಿದ್ದಾರೆ.

Please follow and like us:
error