ಅಕ್ಷರ ಲೋಕದ ಅನನ್ಯ ಸಾಧಕ ಟಿ.ವಿ.ಮಾಗಳದ

(ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ೨೦೧೯ ರ ಜುಲೈ ೧೨ ಹಾಗೂ ೧೩ ರಂದು ನಡೆಯುವ ಕೊಪ್ಪಳ ಜಿಲ್ಲಾ ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಟಿ. ವಿ. ಮಾಗಳದ ಅವರ ಕುರಿತು ಪರಿಚಯಾತ್ಮಕ ಲೇಖನ )
ವ್ಯಕ್ತಿಗಿಂತ ವ್ಯಕ್ತಿತ್ವ ಬಹಳ ಮುಖ್ಯ. ಸೇವೆಯೊಂದಿಗೆ ಸರಳತೆ,ಸಜ್ಜನಿಕೆ ಹಾಗೂ ನಿಸ್ವಾರ್ಥ ಪ್ರೀತಿ ಬೆರೆತರೆ ಅದರ ಘನತೆ ಮತ್ತು ಸೊಬಗು ಎರಡೂ ಇಮ್ಮಡಿಯಾಗುತ್ತವೆ. ಅಂತಹ ವಿರಳ ಮತ್ತು ಸರಳ ವ್ಯಕ್ತಿತ್ವದ ಸಂಗಮ ರೂಪ ಟಿ.ವಿ.ಮಾಗಳದ ಅವರು. ಕಳೆದ ಸುಮಾರು ಐದು ದಶಕಗಳಿಂದ ಶಿಕ್ಷಣ,ಸಾಹಿತ್ಯ ಕ್ಷೇತ್ರದಲ್ಲಿ ಸದ್ದಿಲ್ಲದೇ ಮಾಡಿರುವ ಅವರ ಸಾಧನೆಯನ್ನು ಗೌರವಿಸುವ ಕಾರ್ಯವನ್ನು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡಲು ಮುಂದಾಗಿದೆ. ಇದೇ ಜುಲೈ ೧೨ ಹಾಗೂ ೧೩ ರಂದು ನೂತನ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆಯಲಿರುವ ಜಿಲ್ಲೆಯ ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಟಿ.ವಿ.ಮಾಗಳದ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಈ ಸಂದರ್ಭದಲ್ಲಿ ಹಿರಿಯ ಸಾಧಕನ ಸಾರ್ಥಕ ಬದುಕಿನ ಪ್ರಮುಖ ಘಟ್ಟಗಳನ್ನು ಮನನ ಮಾಡಿಕೊಳ್ಳುವ ಒಂದು ಹೊರಳು ನೋಟ ಇಲ್ಲಿದೆ.
ಅಳವಂಡಿ ಗ್ರಾಮ ಕೊಪ್ಪಳ ಜಿಲ್ಲೆಯ ನೈಋತ್ಯ ಭಾಗದ ಪ್ರಮುಖ ಹೋಬಳಿ ಕೇಂದ್ರ, ನಾಡಿಗೆ ಸ್ವಾತಂತ್ರ್ಯಯೋಧರು,ಹೈದರಾಬಾದ್ ವಿಮೋಚನಾ ಚಳವಳಿಗಾರರು, ಶಿಕ್ಷಣ ಪ್ರೇಮಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಪ್ರತಿಭಾವಂತ ಶಿಕ್ಷಕರರನ್ನು ನೀಡಿದ ಹೆಮ್ಮೆಯ ಊರು. ಇಲ್ಲಿನ ವೀರಪ್ಪ ಮಾಗಳದ ಹಾಗೂ ಮಾತೋಶ್ರಿ ಸಿದ್ದಮ್ಮ ಮಾಗಳದ ಅವರ ಉದರದಲ್ಲಿ ಆಗಸ್ಟ ೧೭,೧೯೪೭ ಜನಿಸಿದ ತೋಟಪ್ಪ ವೀರಪ್ಪ ಮಾಗಳದ ಅವರು ಟಿ.ವಿ.ಮಾಗಳದ ಎಂದೇ ಜನಮಾನಸದಲ್ಲಿ ಹೆಸರು ಮಾಡಿದವರು. ಹುಟ್ಟೂರು ಅಳವಂಡಿಯಲ್ಲಿ ಪ್ರಾಥಮಿಕ ಶಿಕ್ಷಣ,ಕೊಪ್ಪಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು, ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದರು.
ಅಪಾರ ಜ್ಞಾನದಾಹಿಗಳು, ಅಧ್ಯಯನಶೀಲರೂ ಆದ ಟಿ.ವಿ.ಮಾಗಳದ ಅವರು ಶಿಕ್ಷಕರಾಗಿ ಸೇವೆಗೈಯುತ್ತಲೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಡ್ ಹಾಗೂ ಧಾರವಾಡದ ಕರ್ನಾಟಕದ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಎಂ.ಎಡ್.ಪದವಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಅವರ ಓದಿನ ಪ್ರೀತಿ ಹಾಗೂ ಪ್ರಯತ್ನಶೀಲ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಶಿಕ್ಷಣ ರಂಗದ ಸಾರ್ಥಕ ಸೇವೆ;
೧೯೬೬ ರಿಂದ ೨೦೦೫ ರವರೆಗೆ ಸತತ ೩೯ ವರ್ಷಗಳು ಅಂದರೆ ನಾಲ್ಕು ದಶಕಗಳ ಕಾಲ ಕೊಪ್ಪಳದ ಪ್ರತಿಷ್ಟಿತ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸಾರ್ಥಕ ಸೇವೆಗೈಯುವ ಮೂಲಕ ಕೊಪ್ಪಳ ಭಾಗದ ಸಹಸ್ರಾರು ವಿದ್ಯಾರ್ಥಿಗಳ ಮನ ಹಾಗೂ ಮನೆಗಳಲ್ಲಿ ಅಕ್ಷರದ ಜ್ಯೋತಿ ಬೆಳಗಲು ಅಮೂಲ್ಯ ಕೊಡುಗೆ ನೀಡಿದ್ದಾರೆ. ಮುಂದೆ ೨೦೦೬ ರಿಂದ ೨೦೧೦ ರವರೆಗೆ ಧಾರವಾಡದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ೨೦೧೦ ರಿಂದ ೨೦೧೫ ರವರೆಗೆ ಗದುಗಿನ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಶಿಕ್ಷಣರಂಗದಲ್ಲಿ ಸೇವೆಯನ್ನು ವಿಸ್ತರಿಸಿದರು.೧೯೯೯ ರಿಂದ ೨೦೦೨ ರವರೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಸೇವೆಗೈದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ;
ಪ್ರಾರಂಭದಿಂದಲೂ ಸಾಹಿತ್ಯ -ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಟಿ.ವಿ.ಮಾಗಳದ ಅವರು ಕನ್ನಡದ ಹಲವಾರು ಪ್ರಮುಖ ಪತ್ರಿಕೆಗಳ ಸಾಹಿತ್ಯ,ಸಾಪ್ತಾಹಿಕ ಪುರವಣಿಗೆಗಳಿಗೆ ಲೇಖನಗಳು ಹಾಗೂ ಕತೆಗಳನ್ನು ಬರೆಯುತ್ತಲೇ ಬಂದಿದ್ದಾರೆ. ೧೯೯೦ ರಲ್ಲಿ ಪ್ರಕಟಗೊಂಡ ‘ಪ್ರಚಲಿತ ಶಿಕ್ಷಣ – ಹಲವು ವಿಚಾರಗಳು’ ಎಂಬ ಮಹತ್ವದ ಕೃತಿಯ ಮೂಲಕ ಸಮಕಾಲೀನ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಕೃತಿಯಲ್ಲಿನ ವಿಚಾರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಕರ್ನಾಟಕ ಸರ್ಕಾರದ ಯೋಜನೆ ಮತ್ತು ಹಣಕಾಸು ಇಲಾಖೆಯ ಕಾರ್ಯದರ್ಶಿಗಳೂ ಹಾಗೂ ವಿಶ್ರಾಂತ ಕುಲಪತಿಗಳೂ ಆಗಿದ್ದ ಹೆಸರಾಂತ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕ್ಷೇತ್ರದ ವಾಸ್ತವ ಸಂಗತಿಗಳನ್ನು ಧೈರ್ಯವಾಗಿ ಹೇಳುವ ಟಿ.ವಿ.ಮಾಗಳದ ಅವರ ಮನೋವೃತ್ತಿಯನ್ನು ಮನದುಂಬಿ ಶ್ಲಾಘಿಸಿ ಪತ್ರ ಬರೆದಿರುವುದು ಉಲ್ಲೇಖನೀಯವಾಗಿದೆ.
೧೯೯೩ ರಲ್ಲಿ ಕೊಪ್ಪಳದಲ್ಲಿ ಜರುಗಿದ ಅಖಿಲ ಭಾರತ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ತಿರುಳ್ಗನ್ನಡ ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೯೫ರಲ್ಲಿ ‘ಏಡ್ಸ ಎಂಬ ಯಮಪಾಶ’ ನಾಟಕ ಪ್ರಕಟಿಸಿ ಸರ್ಕಾರದ ಮನ್ನಣೆ ಪಡೆದಿದ್ದಾರೆ.
೨೦೦೭ ರಲ್ಲಿ ಹೊರತಂದ ‘ಮಿಡಿವ ಮನಗಳಿಗೆ ಗಡಿಗಳಿಲ್ಲ ‘ಇಂಗ್ಲಿಷ್‌ನಿಂದ ಅನುವಾದಿತ ಕಥಾಸಂಕಲನ ಅವರೊಳಗಿನ ಸಮರ್ಥ ಅನುವಾದಕನನ್ನು ನಾಡಿಗೆ ಪರಿಚಯಿಸಿತು. ಈ ಕೃತಿಗೆ ಮುನ್ನುಡಿ ಬರೆದಿರುವ ಮೈಸೂರಿನ ಹೆಸರಾಂತ ಭಾಷಾ ವಿಜ್ಞಾನಿ ಪ್ರೊ.ಪ್ರಧಾನ ಗುರುದತ್ ಅವರು, ಟಿ.ವಿ.ಮಾಗಳದ ಅವರ ರುಚಿ-ಶುದ್ಧಿಗಳ ಬಗ್ಗೆ ಸಹೃದಯದ ನುಡಿಗಳನ್ನಾಡಿದ್ದಾರೆ.ಆಂಟನ್ ಚೆಕಾಫ್,ಟಾಲ್‌ಸ್ಟಾಯ್, ಎಡ್ಗರ್ ಅಲನ್ ಪೋ,ಸಾಮರ್ ಸೆಟ್ ಮಾಮ್,ಕರಾಮ್ಜಿನ್,ಓ ಹೆನ್ರಿ,ಆಸ್ಕರ್ ವೈಲ್ಡ್,ನಿಕೋಲ್,ಹೆಲ್ಟಾಯ್,ಮೊಪಾಸಾ, ಮತ್ತಿತರ ಖ್ಯಾತನಾಮರ ಕತೆಗಳನ್ನು ಕನ್ನಡೀಕರಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪ್ರಧಾನ ಗುರುದತ್ ಅವರು ,ಮಾಗಳದ ಸರ್ ಅವರ ಪದ ಹಾಗೂ ನುಡಿಗಟ್ಟುಗಳ ಬಳಕೆಯನ್ನು ಕೊಂಡಾಡಿರುವುದು ಸಮರ್ಥ ಭಾವಾನುವಾದಕ್ಕೆ ,ಅನುವಾದಕನ ಪ್ರತಿಭೆಗೆ ತೋರಿದ ಗೌರವವಾಗಿದೆ.
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ೨೦೦೮ರಲ್ಲಿ ಪ್ರಕಟಿಸಿದ ವಿಲ್ ಡ್ಯುರೆಂಟರವರದ ಸ್ಟೋರಿ ಆಫ್ ಸಿವಿಲೈಜೇಷನ್ ಸಂಪುಟ ೨ ಹಾಗೂ ೩ ರ ಅನುವಾದಕ ಮಂಡಳಿಯಲ್ಲಿ ಅನುವಾದಕರಾಗಿ ಹಾಗೂ ೨೦೧೭ ರಲ್ಲಿ ‘ದಾಸ, ದಿ ಸುಪ್ರೀಮ್ ಸೆಂಟ್ – ಕನಕದಾಸ’ ಕೃತಿಯನ್ನು ಕನ್ನಡದಿಂದ ಇಂಗ್ಲೀಷಗೆ ಅನುವಾದಿಸಿದ್ದಾರೆ.
ಗದುಗಿನ ತೋಂಟದಾರ್ಯ ಮಠದ ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯ ಮೂಲಕ ೨೦೧೭ ರಲ್ಲಿ ಅಳವಂಡಿ ಶಿವಮೂರ್ತಿಸ್ವಾಮಿಗಳು , ೨೦೧೯ ರಲ್ಲಿ ಅವಿಸ್ಮರಣೀಯ ಶಿಕ್ಷಣಾಧಿಕಾರಿ ವಿ.ಎ. ಉಮರಾಣಿ ಕೃತಿಗಳು ಹೊರಬಂದಿವೆ. ಕೋವಿ ಹೇಳಿದ ಕಥೆಗಳು ಹಾಗೂ ಅವರು ಹೇಳಿದ ನಮ್ಮ ಕಥೆಗಳು ಇಂಗ್ಲೀಷನಿಂದ ಕನ್ನಡಕ್ಕೆ ಅನುವಾದಿಸಿರುವ ಎರಡು ಕೃತಿಗಳು ಸದ್ಯ ಮುದ್ರಣ ಹಂತದಲ್ಲಿವೆ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಶಿಕ್ಷಣ ಕುರಿತ ಲೇಖನಗಳು ಹಾಗೂ ಅನುವಾದಿತ ಕಥೆಗಳ ಪ್ರಕಟಣೆ ಶಿಕ್ಷಣದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಅವರು ಅನುಪಮ ಕೊಡುಗೆ ನೀಡುತ್ತಿದ್ದಾರೆ.
ಪುರಸ್ಕಾರಗಳು
ಶಿಸ್ತು,ಶ್ರದ್ಧೆ ,ಗಾಂಭೀರ್ಯತೆ ಮತ್ತು ನಿಸ್ವಾರ್ಥ ಸೇವೆಗೆ ಹೆಸರಾಗಿರುವ ಟಿ.ವಿ.ಮಾಗಳದ ಅವರು ಎಂದಿಗೂ ಪ್ರಶಸ್ತಿ,ಪುರಸ್ಕಾರಗಳ ಹಿಂದೆ ಬಿದ್ದವರಲ್ಲ. ಅವರ ಪ್ರತಿಭೆ ಹಾಗೂ ವಿದ್ವತ್ತನ್ನು ಅರಸಿ ಹತ್ತು ಹಲವು ಗೌರವ, ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಜನಸಂಖ್ಯಾ ಶಿಕ್ಷಣ ಪ್ರಬಂಧಕ್ಕೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಆSಇಖಖಿ) ದ ಪುರಸ್ಕಾರ.ಲಿಟರಸೀ ಫಾರ ಆಲ್ -ಏ ವೇ ಟು ಲರ್ನಿಂಗ್ ಸೊಸೈಟಿ ಪ್ರಬಂಧಕ್ಕೆ ನವದೆಹಲಿಯ ವಯಸ್ಕ ಶಿಕ್ಷಣ ಮಾನವ ಸಂಪನ್ಮೂಲ ಸಚಿವಾಲಯ ಪುರಸ್ಕಾರ ನೀಡಿ ಗೌರವಿಸಿದೆ.ವಿವಿಧ ಸಮ್ಮೇಳನ,ವಿಚಾರ ಸಂಕಿರಣ ,ಗೋಷ್ಟಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರಗಳನ್ನು ಮಂಡಿಸಿರುವದು ಅವರ ಮೇರು ಪ್ರತಿಭೆಗೆ ಸಾಕ್ಷಿಯಾಗಿದೆ.

ತುಂಬು ಕುಟುಂಬದ ಸಾರಥಿ
ಟಿ.ವಿ.ಮಾಗಳದ ಅವರ ಘನವ್ಯಕ್ತಿತ್ವಕ್ಕೆ ಅನುರೂಪವಾದ ಧರ್ಮಪತ್ನಿ ಶ್ರೀಮತಿ ಸಾವಿತ್ರಮ್ಮ ಮಾಗಳದ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ , ಮಾಗಳದ ಅವರ ಸಾಧನೆಗಳಿಗೆ ತೆರೆಯ ಮರೆಯಲ್ಲಿ ನಿಂತು ಸಹಕರಿಸುತ್ತಿದ್ದಾರೆ. ಪುತ್ರ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ. ವೀರೇಶ, ಸೊಸೆ ಶ್ರೀಮತಿ ಪ್ರೀತಿ, ಪುತ್ರಿ ಸುಮಂಗಳಾ ಗಾಂಜಿ ,ಅಳಿಯ ವಿಶ್ವನಾಥ ಗಾಂಜಿ ಮೊಮ್ಮಕ್ಕಳಾದ ಸೃಷ್ಟಿ ಹಾಗೂ ಶ್ರದ್ಧಾ ಮಾಗಳದ, ಶಶಾಂಕ ಗಾಂಜಿ ಅವರೆಲ್ಲರೊಂದಿಗೆ ತುಂಬು ಕುಟುಂಬದ ಮಾದರಿ ಜೀವನವನ್ನು ಮಾಗಳದ ಅವರು ನಿಭಾಯಿಸುತ್ತಿರುವ ರೀತಿಯು ಸಮಾಜಕ್ಕೆ ಆದರ್ಶಪ್ರಾಯವಾಗಿದೆ
.ಶಾಂತ,ಸೌಹಾರ್ದ , ಬಹುತ್ವ ಸಂಸ್ಕೃತಿಗಳ ನಮ್ಮ ನಾಡನ್ನು ಸಾಹಿತ್ಯ ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಲು ಟಿ.ವಿ.ಮಾಗಳದ ಅವರು ನೀಡಿರುವ ಕೊಡುಗೆಗಳನ್ನು ಮೆಲುಕು ಹಾಕುತ್ತಾ, ಅವರನ್ನು ಗೌರವಿಸುವ ಕಾರ್ಯವನ್ನು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿರುವುದು ಸ್ತುತ್ಯಾರ್ಹವಾಗಿದೆ.

-ಮಂಜುನಾಥ ಡಿ.ಡೊಳ್ಳಿನ
ಹಿರಿಯ ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಧಾರವಾಡ

Please follow and like us:
error