ಅಂಬಿಗರ ಚೌಡಯ್ಯರು ಎಲ್ಲಾ ಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಹೋರಾಡಿದವರು : ಬಾಲಚಂದ್ರನ್

ವಾರ್ತೆ): ಜಾತಿ, ಧರ್ಮ ಯಾವುದೇ ಬೇಧವಿಲ್ಲದೇ ಎಲ್ಲಾ ಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ ಮಹನಿಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ ಎಂದು ಕೊಪ್ಪಳ ತಾಲೂಕ ಪಂಚಾಯತ ಅಧ್ಯಕ್ಷ ಬಾಲಚಂದ್ರನ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಭಾನುವಾರದಂದು ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯನವರು, ಬಸವಾತಿ ಶವಶರಣೆಯರ ೧೨ನೇ ಶತಮಾನದವರು. ಚೌಡಯ್ಯನವರು ನೇರವಾಗಿ ನುಡಿದಂತಹ ಶರಣರಾಗಿದ್ದರು. ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿ, ಅವುಗಳ ವಿರುದ್ಧ ವಚನಗಳ ಮೂಲಕ ಹೋರಾಡಿ ಸಮಾಜದಲ್ಲಿ ಬದಲಾವಣೆಗಳನ್ನು ತಂದಂತಹ ಮಹನಿಯರಲ್ಲಿ ಒಬ್ಬರು. ಭಕ್ತರಲ್ಲಿ ಬೇಧ-ಭಾವ ಹುಟ್ಟಿಸಬಾರದು ಎಲ್ಲರೂ ಒಂದೇ ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ. ಇಂತಹ ಮಹನಿಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಯುವಕರು ಅವರ ಆದರ್ಶ ಮಾರ್ಗದರ್ಶನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಕಾರ್ಯಕ್ರಮಗಳಿಗೆ ಮಹತ್ವ ಬರುತ್ತದೆ ಎಂದು ಕೊಪ್ಪಳ ತಾಲೂಕ ಪಂಚಾಯತ ಅಧ್ಯಕ್ಷ ಬಾಲಚಂದ್ರನ್ ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿ ಉಪನ್ಯಾಸಕರಾದ ಇಮಾಮ್ ಸಾಹೇಬ್ ಹಡಗಲಿ ಅವರು ಮಾತನಾಡಿ, ಅಂಬಿಗರ ಚೌಡಯ್ಯನವರು ೧೨ನೇ ಶತಮಾನದ ವಚನ ಕ್ರಾಂತಿಯ ನಿಜವಾದ ಕ್ರಾಂತಿಕಾರರಾಗಿದ್ದರು. ಮೌಢ್ಯತೆಯಿಂದ ಕೂಡಿದ್ದ ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ ಅನೇಕ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ. ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕು ಪದ್ಧತಿಗಳನ್ನು ತಿದ್ದಲು ವಚನಗಳಿಂದ ಜಾಗೃತಿ ಮೂಡಿಸಿದವರು. ಸಮಾಜ ಸುಧಾರಣೆ, ಶಾಂತಿ ಸ್ಥಾಪನೆಗೆ ಬಸವಣ್ಣ, ಅಂಬಿಗರ ಚೌಡಯ್ಯರಂತಹ ಅನೇಕ ಮಹನೀಯರು ಹೋರಾಡಿದ್ದಾರೆ. ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು. ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ ಎಂದು ಅಂಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಸಂದೇಶವನ್ನು ನೀಡಿದ್ದಾರೆ ಎಂದು ಅಂಬಿಗರ ಚೌಡಯ್ಯನವರ ಜೀವನ ಕುರಿತು ಸ್ವವಿಸ್ತಾರವಾಗಿ ವಿವರಣೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ತುಳಿತಕ್ಕೆ ಒಳಗಾದ ಸಮಾಜದ ಪೈಕಿ ಗಂಗಾಮತ ಸಮಾಜವೂ ಒಂದು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿಯಬೇಕಾದರೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣವಿಲ್ಲದೆ, ಯಾವುದೇ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ರಾಜ್ಯ ಸರ್ಕಾರವು ವಿದ್ಯಾಸಿರಿ, ಕ್ಷೀರಧಾರೆ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಶಿಕ್ಷಣಕ್ಕೆ ಒತ್ತು ಕೊಡುವಂತಹ ಕಾರ್ಯಕ್ಕೆ ಸಮುದಾಯಗಳು ಮುಂದಾಗಬೇಕು. ಎಲ್ಲರೂ ಶಿಕ್ಷಣವಂತರಾದಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಖಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ ದಾಸರ್, ಜಿ.ಪಂ ಮಾಜಿ ಅಧ್ಯಕ್ಷ ಯಮನಪ್ಪ ಕಬ್ಬೇರ, ನಗರಸಭೆ ಸದಸ್ಯ ಬಾಳಪ್ಪ ಬಾರಕೇರ, ಸೋಮಣ್ಣ ಬಾರಕೇರ, ಶಂಕರಗೌಡ ಹಿರೇಗೌಡ್ರ, ಹನುಮಂತಪ್ಪ ಕಂಪಸಾಗರ, ಗವಿಸಿದ್ದಪ್ಪ ಸುಣಗಾರ, ಗಾಳೇಪ್ಪ ಪೂಜಾರ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಮೆರವಣಿಗೆಯು ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಲ್ಲದೇ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Please follow and like us:
error