ಕೊರೋನ ವಿರುದ್ಧ ಹೋರಾಟ ನಡೆಸಿ ಅದೇ ಸೋಂಕಿಗೆ ಬಲಿಯಾದ ಅರೀಮಾ ನಸ್ರೀನ್

ಕೊರೋನ ಸೋಂಕಿತರ ಸೇವೆಯಲ್ಲಿ ಜೀವನದ ಕೊನೆಯ ಉಸಿರಿನವರೆಗೂ ತೊಡಗಿಸಿಕೊಂಡ 36 ವರ್ಷ ವಯಸ್ಸಿನ ನರ್ಸ್ ಅರೀಮಾ ನಸ್ರೀನ್ ಇದೀಗ ಜಾಗತಿಕ ಕಣ್ಮಣಿಯಾಗಿದ್ದಾರೆ. ಕೊರೋನ ವಿರುದ್ಧದ ಸಮರಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಸ್ರೀನ್ ಅದೇ ಸೋಂಕಿಗೆ ಬಲಿಯಾಗಿದ್ದು ವಿಪರ್ಯಾಸ.

ಹದಿಹರೆಯದಲ್ಲಿ ವೃದ್ಧೆ ಅಜ್ಜಿಯ ಸೇವೆಯಲ್ಲಿ ಖುಷಿ ಕಂಡಿದ್ದ ನಸ್ರೀನ್, ಪಾಕಿಸ್ತಾನದ ಮೀರಪುರ ಮೂಲದವರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಾಲ್ವರು ತಮ್ಮಂದಿರು ಹಾಗೂ ಮೂವರು ತಂಗಿಯರ ಜತೆ ಬೆಳೆದವರು. ನಾನಿ ಅಮ್ಮನ ಸೇವೆಯಲ್ಲಿ ಖುಷಿ ಕಂಡ ನಸ್ರೀನ್, ಮನುಕುಲಕ್ಕೆ ಸೇವೆ ಮಾಡುವುದನ್ನೇ ವೃತ್ತಿ ಹಾಗೂ ಪ್ರವೃತ್ತಿಯಾಗಿ ಬೆಳೆಸಿಕೊಂಡರು. ಕಳೆದ ಜನವರಿಯಲ್ಲಿ ನರ್ಸಿಂಗ್ ಪದವಿ ಪಡೆಯುವ ಅವರ ಜೀವನದ ಕನಸು ನನಸಾಗಿತ್ತು. ಬಳಿಕ ವಲ್ಸಲ್ ಮ್ಯಾನರ್ ಆಸ್ಪತ್ರೆಯಲ್ಲಿ ನರ್ಸ್ ಸೇವೆಗೆ ತೊಡಗಿದರು. ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹರಡಿರುವ ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟಕ್ಕೆ ಸಮರ್ಪಿಸಿಕೊಂಡಿದ್ದ ಇವರು ಹಗಲು ರಾತ್ರಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದರು.

ಆದರೆ ಕಳೆದ ಶುಕ್ರವಾರ ನಸ್ರೀನ್ ಹಾಗೂ ಅವರ ಜತೆ ಕರ್ತವ್ಯದಲ್ಲಿದ್ದ ಐಮೀ ಒ ರೂರ್ಕೆ ಇಬ್ಬರು ಆರೋಗ್ಯ ಸಹಾಯಕರ ಜತೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ನಸ್ರೀನ್ ಈ ಸೋಂಕಿಗೆ ಬಲಿಯಾದ ಅತ್ಯಂತ ಯುವ ನರ್ಸಿಂಗ್ ಕಾರ್ಯಕರ್ತೆ ಎನಿಸಿಕೊಂಡರು. ಮೂವರು ಮಕ್ಕಳನ್ನು ಅಗಲಿದ ಅವರ ಕುಟುಂಬ ಗಾಢ ದುಃಖದಲ್ಲಿದೆ.

ಆಕೆ ನಿಜಕ್ಕೂ ದಂತಕಥೆ ಎಂದು ಒತ್ತರಿಸಿ ಬರುತ್ತಿದ್ದ ಕಣ್ಣೀರು ಒರೆಸಿಕೊಂಡು ತಂಗಿ ಕಝೀಮಾ, ಅಕ್ಕನ ತ್ಯಾಗವನ್ನು ಬಣ್ಣಿಸಿದರು. ಅಕ್ಕ ನಮಗೆ ನಿಜ ಅರ್ಥದಲ್ಲಿ ಅಮ್ಮನಾಗಿದ್ದರು. ಅಷ್ಟು ಪ್ರೀತಿ ಧಾರೆ ಎರೆದಿದ್ದಾರೆ

ನಸ್ರೀನ್ ಎರಡು ವಾರ ಹಿಂದೆ ಕೋವಿಡ್ ಚಿಕಿತ್ಸಾ ವಿಭಾಗದ ತೀವ್ರ ನಿಗಾ ಘಟಕದ ಕರ್ತವ್ಯಕ್ಕೆ ತೆರಳುವ ಮುನ್ನ ಮೂವರು ಸಹೋದರಿಯರೊಂದಿಗೆ ಐದು ಗಂಟೆ ಕಾಲ ಹರಟಿದ್ದರು. ನಾವು ಒಂದೇ ದಿನ ಒಂದೇ ಕುಟುಂಬದವರೊಂದಿಗೆ ವಿವಾಹವಾಗಿದ್ದೆವು. ನಾವು ಅವಳಿ ಜವಳಿಗಳಿದ್ದಂತೆ ಎಂದು ಕಝೀಮಾ ದುಃಖಿಸಿದರು.

ಪಾಕಿಸ್ತಾನದಿಂದ ವಿಮಾನಸೇವೆ ರದ್ದಾದ ಹಿನ್ನೆಲೆಯಲ್ಲಿ ನಸ್ರೀನ್ ವೆಂಟಿಲೇಟರ್ ಚಿಕಿತ್ಸೆಯಲ್ಲಿದ್ದರೂ, ಮಗಳನ್ನು ನೋಡಲು ಪೋಷಕರಿಗೆ ಸಾಧ್ಯವಾಗಲಿಲ್ಲ. ಮೂವರು ಮಕ್ಕಳಿಗೂ ಕೊನೆಯ ಕ್ಷಣಗಳಲ್ಲಿ ತಾಯಿಯನ್ನು ನೋಡಲಾಗಲಿಲ್ಲ. ಸಾಮಾಜಿಕ ಅಂತರ ನಿಯಮಾವಳಿಯನ್ನು ಗೌರವಿಸಿ ಅಕ್ಕಪಕ್ಕದ ಪ್ರತಿಯೊಬ್ಬರೂ ಅಂತಿಮ ನಮನ ಸಲ್ಲಿಸಿದರು ಎಂದು ಕಝೀಮಾ ವಿವರಿಸಿದರು.

ನಸ್ರೀನ್ ಅವರಿಗೆ ರೋಗಿಗಳೇ ಮೊದಲ ಆದ್ಯತೆ. ತಮ್ಮ ಸ್ವಂತದ ಬಗ್ಗೆ ಗಮನವೇ ಇರಲಿಲ್ಲ. ಅದ್ಭುತ ಸೇವಾ ಮನೋಭಾವ ಅವರದ್ದು ಎಂದು ಡಾ.ಸಮರಾ ಅಫ್ಝಲ್ ಬಣ್ಣಿಸಿದರು.

Please follow and like us:
error