ಕೊರೋನ ಭೀತಿ: ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು, ಮಾ.13: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆ(ಮಾ.14)ಯಿಂದ ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಸುತ್ತೋಲೆ ಹೊರಡಿಸಿದ್ದು, 1 ರಿಂದ 6ನೇ ತರಗತಿಯ ಎಲ್ಲ ಶಾಲೆಗಳಿಗೆ 2020 ಮಾರ್ಚ್ 14 ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸಲಾಗುವುದು. ಒಂದು ವೇಳೆ ಪರೀಕ್ಷೆಗಳು ನಡೆಯುತ್ತಿದ್ದರೆ ಪರೀಕ್ಷೆಗಳನ್ನು ರದ್ದುಗೊಳಿಸಿ ಬೇಸಿಗೆ ರಜೆ ಘೋಷಿಸಬೇಕು ಎಂದು ಸೂಚಿಸಿದೆ.

7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 14ರಿಂದ ತರಗತಿಗಳನ್ನು ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸಿದೆ.

7ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಾಂಕ 23-03-2020ರೊಳಗೆ ಪರೀಕ್ಷೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ ಬೇಸಿಗೆ ರಜೆ ಘೋಷಿಸುವಂತೆ ಆದೇಶ ಹೊರಡಿಸಲಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಯಲಿದೆ.

15 ದಿನಗಳ ಕಾಲ ಕಾಲೇಜುಗಳಿಗೆ ರಜೆ ಘೋಷಣೆ
ಮಾ.14 ಮಾ.28 ರವರೆಗೂ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳಿಗೆ ರಾಜ್ಯದಾದ್ಯಂತ ರಜೆ ಘೋಷಿಸಿ, ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದ್ದು, ಇಂದಿನಿಂದ 15 ದಿನಗಳ ಕಾಲ ಎಲ್ಲ ವಿದ್ಯಾರ್ಥಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಮುಂದುವರಿದು, ಎಂದಿನಂತೆ ಕಾಲೇಜಿನ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

ಪರೀಕ್ಷೆ ಮುಂದೂಡಿಕೆ ಇಲ್ಲ: ಈ ನಡುವೆ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ಮುಂದೂಡುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಎಂದಿನಂತೆ ಮಾ.14 ರಂದು ನಡೆಯಲಿರುವ ಸೈಕಾಲಜಿ, ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಪರೀಕ್ಷಾ ಮಂಡಳಿಯ ನಿರ್ದೇಶಕಿ ಕನಗವಲ್ಲಿ ಹೇಳಿದ್ದಾರೆ.

Please follow and like us:
error