ಹಾಸ್ಯದ ಮೂಲಕ ಮತದಾನ ಜಾಗೃತಿ ಮೂಡಿಸಿದ ಗಂಗಾವತಿ ಪ್ರಾಣೇಶ್

ಕೊಪ್ಪಳ ಏ. ೧೦  ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾರರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆ ಕೊಪ್ಪಳ ಜಿಲ್ಲಾ ಐಕಾನ್‌ಯಾಗಿ ಆಯ್ಕೆಯಾದ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶರವರು ವಿನೂತನ ಹಾಸ್ಯ ಚಟಾಕೆಗಳ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿದರು.
ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರದಂದು (ಏಪ್ರಿಲ್. ೯ರಂದು) ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಬೃಹತ್ ಮತದಾನ ಜಾಗೃತಿ ಮಾಹ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮತದಾನ ಏಕೆ ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ ಎಂಬ ವಿಷಯವನ್ನು ತಮ್ಮದೇ ಆದ ಉತ್ತರ ಕರ್ನಾಟಕ ಶೈಲಿಯ ಪಂಚಿಂಗ್ ಡೈಲಾಗ್‌ಗಳ ಮೂಲಕ ಜಾಗೃತಿ ಮೂಡಿಸಿ, ಜನರನ್ನು ನಕ್ಕು, ನಗಿಸಿದರು. ಒಂದು ವಿನೂತನ ಹಾಸ್ಯ ಚಟಾಕೆ ಮೂಲಕ ಕಿನ್ನಾಳ ಗ್ರಾಮದ ಗ್ರಾಮಸ್ಥರು ನಗುನಗುತ್ತಲೆ ಮತದಾನ ಬಗ್ಗೆ ಜಾಗೃತಿಯನ್ನು ಪಡೆದುಕೊಂಡರು.
ಕಡ್ಡಾಯ ಮತದಾನ ಕುರಿತು ಪ್ರತಿಜ್ಞಾವಿಧಿ ಸ್ವಿಕರಿಸಲಾಯಿತು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕೋಬಪ್ಪ, ಡಾ. ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮದೇವಿ ಸೊನ್ನದ, ತಾ.ಪಂ. ಯೋಜನಾಧಿಕಾರಿ ಶರಣಯ್ಯ ಸಸಿಮಠ, ಜಿಲ್ಲಾ ಸ್ವೀಪ್ ಸಂಯೋಜಕ ಶ್ರೀನಿವಾಸ್ ಚಿತ್ರಗಾರ, ಕಿನ್ನಾಳ ಪಿಡಿಒ ವಿರನಗೌಡ ಸೇರಿದಂತೆ ವಾಗೇಶ, ಮಹೇಶ ಸಜ್ಜನ್ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ವೋಟರ್‌ಗ್ರಾಂ ಫೋಟೋ ಸ್ಪಾಟ್ ಫ್ರೇಂನಲ್ಲಿ ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವು ಅಧಿಕಾರಿಗಳು, ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ವಿಶೇಷವಾಗಿತ್ತು.

Please follow and like us:
error