ಹರ್ಯಾಣದಲ್ಲಿ ‘ಕಿಂಗ್ ಮೇಕರ್’ ಆಗಲಿರುವ ಜೆಜೆಪಿ

ಹೊಸದಿಲ್ಲಿ, ಅ : ಹರ್ಯಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಮುಂದುವರಿದಿರುವಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ನಾಯಕನ ಉದಯವಾಗಿದೆ. ಅವರೇ ಮಾಜಿ ಉಪಪ್ರಧಾನಿ ದೇವೀ ಲಾಲ್ ಅವರ ಮರಿಮೊಮ್ಮಗ, ಮಾಜಿ ಹರ್ಯಾಣ ಸಿಎಂ ಓಂ ಪ್ರಕಾಶ್ ಚೌಟಾಲ ಅವರ ಮೊಮ್ಮಗ ದುಷ್ಯಂತ್ ಚೌಟಾಲ. ಇವರ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ರಾಜ್ಯದಲ್ಲಿ ಕಿಂಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳಿವೆ.

ಮೊದಲ ಬಾರಿ ಚುನಾವಣೆ ಸ್ಪರ್ಧಿಸುತ್ತಿರುವ ಅವರ ಪಕ್ಷ 9ರಿಂದ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಈಗಾಗಲೇ ಅವರ ಪಕ್ಷದ ಜತೆ ಮೈತ್ರಿಗಾಗಿ ಮುಂದೆ ಬಂದಿದೆ ಎಂಬ ಸುದ್ದಿಯಿದೆ.

ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣಾದ ಮಾಜಿ ಸಿಎಂ ಭಜನ್ ಲಾಲ್ ಅವರ ಪುತ್ರ ಕುಲದೀಪ್ ಬಿಷ್ಣೋಯಿ ಅವರನ್ನು ಸೋಲಿಸಿದ್ದ ದುಷ್ಯಂತ್, 2014 ಲೋಕಸಭಾ ಚುನಾವಣೆಯಲ್ಲಿ ಹಿಸಾರ್ ಕ್ಷೇತ್ರದಿಂದ ಸಂಸದರಾಗಿ ಮೊದಲ ಬಾರಿ ಆಯ್ಕೆಯಾಗಿದ್ದಾಗ ಅವರಿಗೆ ಕೇವಲ 26 ವರ್ಷವಾಗಿತ್ತು ಹಾಗೂ ದೇಶದ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಪದವೀಧರರಾಗಿರುವ ದುಷ್ಯಂತ್ ಡಿಸೆಂಬರ್ 2018ರಲ್ಲಿ ಚೌಟಾಲ ಕುಟುಂಬದಲ್ಲಿ ಒಡಕಿನ ನಂತರ ಐಎನ್‍ಎಲ್‍ಡಿಯಿಂದ ದೂರ ಸರಿದಿದ್ದರು.

ಅದೇ ತಿಂಗಳು ತಮ್ಮ ಜನನಾಯಕ್ ಜನತಾ ಪಾರ್ಟಿ ಸ್ಥಾಪಿಸಿದ್ದ ದುಷ್ಯಂತ್ ದೇವಿಲಾಲ್ ಅವರ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ಪಕ್ಷಕ್ಕೆ ಜನನಾಯಕ್ ಹೆಸರು ಇಟ್ಟಿದ್ದರು.

ಈ ಬಾರಿ ಜಿಂದ್ ಜಿಲ್ಲೆಯ ಉಚನ ಕಲನ್ ಕ್ಷೇತ್ರದಿಂದ ಬಿಜೆಪಿಯ ಹಾಲಿ ಶಾಸಕಿ ಪ್ರೇಮ್ ಲತಾ ಅವರ ವಿರುದ್ಧ ಸ್ಪರ್ಧಿಸಿ 30,000ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ ದುಷ್ಯಂತ್. ಪ್ರೇಮ್ ಲತಾ ಅವರು ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಸಭಾ ಸದಸ್ಯ ಬಿರೇಂದರ್ ಸಿಂಗ್ ರ ಪತ್ನಿ. ಇದೇ ಕ್ಷೇತ್ರದಿಂದ ಓಂ ಪ್ರಕಾಶ್ ಚೌಟಾಲ ಅವರು ಸಿಂಗ್ ಅವರನ್ನು 2009 ಚುನಾವಣೆಯಲ್ಲಿ ಸೋಲಿಸಿದ್ದರು.

Please follow and like us:
error