ಲೋಕಸಭಾ ಚುನಾವಣೆ, ಕೊಪ್ಪಳ ಕ್ಷೇತ್ರಕ್ಕೆ ಮಾ. ೨೮ ರಿಂದ ನಾಮಪತ್ರ ಸಲ್ಲಿಕೆ ಆರಂಭ: ಪಿ. ಸುನೀಲ್ ಕುಮಾರ್


ಕೊಪ್ಪಳ ಮಾ. : ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮಾರ್ಚ್ ೨೮ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅವರು (ಮಾ.೨೭) ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಔಪಚಾರಿಕವಾಗಿ ಮಾತನಾಡಿದರು. ಈಗಾಗಲೇ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಮಾ. ೧೦ ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಲ್ಲಿರುತ್ತದೆ.
ಕರ್ನಾಟಕದಲ್ಲಿ ಒಟ್ಟು ೨ ಹಂತದಲ್ಲಿ ಚುನಾವಣೆಯನ್ನು ಜರುಗಿಸಲು ಆಯೋಗವು ನಿರ್ಧರಿಸಿದ್ದು ೦೮-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ೨ನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾರ್ಚ್. ೨೮ ರಂದು ಅಧಿಸೂಚನೆ ಪ್ರಕಟವಾಗಲಿದೆ.
ಮಾರ್ಚ್ ೨೮ ರಿಂದ ಏಪ್ರಿಲ್ ೪ ರ ವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿಕೆ ದಿನಗಳಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜಿಲ್ಲಾಧಿಕಾರಿಯವರ ಕೊಠಡಿಯಲ್ಲಿ ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿ ಅಪರ ಜಿಲ್ಲಾಧಿಕಾರಿಗೆ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೩ ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ನಾಮಪತ್ರದ ನಮೂನೆಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ಶಾಖೆಯಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೦೩ ಗಂಟೆ ನಡುವೆ ಪಡೆದುಕೊಳ್ಳಬಹುದು ಎಂದರು.
ನಾಮಪತ್ರಗಳನ್ನು ಏಪ್ರಿಲ್. ೦೫ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕೋರ್ಟ್ ಹಾಲ್‌ನಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಲಿಖಿತ ರೂಪದಲ್ಲಿ ಚುನಾವಣಾಧಿಕಾರಿಗಳು ಅಥವಾ ಸಹಾಯಕ ಚುನಾವಣಾಧಿಕಾರಿಗಳಿಗೆ ಏಪ್ರಿಲ್. ೦೮ (ಸೋಮವಾರ) ದಂದು ಮಧ್ಯಾಹ್ನ ೦೩ ಗಂಟೆ ಒಳಗೆ ಸಲ್ಲಿಸಬಹುದು. ಏಪ್ರಿಲ್. ೦೮ ರಂದು ಮಧ್ಯಾಹ್ನ ೦೪-೦೦ ಗಂಟೆ ನಂತರ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ಮಾಡಲಾಗುವುದು. ಮತದಾನವು ಏಪ್ರಿಲ್ ೨೩ ರಂದು ಬೆಳಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.