ಲೋಕಸಭಾ ಚುನಾವಣೆ; ಎಣಿಕೆ ಕೇಂದ್ರ ಪರಿಶೀಲನೆ

ಕೊಪ್ಪಳ;ಏಪ್ರಿಲ್:  ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯು ಏಪ್ರಿಲ್ 23 ರಂದು ನಡೆಯಲಿದ್ದು ಮತ ಎಣಿಕೆಯು ಮೇ 23 ರಂದು ನಡೆಯಲಿದೆ. ಮತ ಎಣಿಕೆಗೆ ಬೇಕಾದ ಸಿದ್ದತೆಗೆ ಸಂಬಂಧಿಸಿದಂತೆ (ಏ.13) ಎಣಿಕೆ ಕೇಂದ್ರದ ಪರಿಶೀಲನೆಯನ್ನು ಚುನಾವಣಾ ಸಾಮಾನ್ಯ ವೀಕ್ಷಕರಾದ ರಣ ವಿಜಯ ಯಾದವ್ ಸೇರಿದಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ರೇಣುಕಾ ಕೆ.ಸುಕುಮಾರ್ ಜಂಟಿಯಾಗಿ ಪರಿಶೀಲನೆ ನಡೆಸಿದರು.
 ಮತ ಎಣಿಕೆಯನ್ನು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಮತ ಎಣಿಕೆಗೆ ಬೇಕಾದ ಕೊಠಡಿಗಳು, ಭದ್ರತಾ ಕೊಠಡಿಗಳು ಅಗತ್ಯವಿದ್ದು ಪರಿಶೀಲನೆ ನಡೆಸಲಾಯಿತು.
 ಕೊಪ್ಪಳ ಲೋಕಸಭಾ ಕ್ಷೇತ್ರವು ಕೊಪ್ಪಳದ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಕ್ಷೇತ್ರ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದೆ. ಈ ಎಲ್ಲಾ ಕ್ಷೇತ್ರಗಳ ಮತ ಎಣಿಕೆಯು ಕೊಪ್ಪಳದಲ್ಲ್ಲಿಯೇ ನಡೆಯಲಿದೆ.
 ಮತದಾನವು ಏಪ್ರಿಲ್ 23 ರಂದು ನಡೆಯಲಿದ್ದು ಎಣಿಕೆಯು ಮೇ 23 ರಂದು ನಡೆಯಲಿದೆ. ಭದ್ರತಾ ದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಪರಿಶೀಲಿಸಲಾಯಿತು. ಎಣಿಕೆ ಮುಕ್ತಾಯವಾಗುವವರೆಗೂ ಎಣಿಕೆ ಕೇಂದ್ರದ ಹಾಗೂ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಕೇಂದ್ರ ಅರೆ ಸೇನಾಪಡೆ ಇದರ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ.
 ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2033 ಮತಗಟ್ಟೆಗಳಿದ್ದು ಇದರಲ್ಲಿ ಸಿಂಧನೂರು 269, ಮಸ್ಕಿ 231, ಕುಷ್ಟಗಿ 272, ಕನಕಗಿರಿ 261, ಗಂಗಾವತಿ 233, ಯಲಬುರ್ಗಾ 253, ಕೊಪ್ಪಳ 288, ಸಿರುಗುಪ್ಪ 226 ಮತಗಟ್ಟೆಗಳನ್ನು ಹೊಂದಿದ್ದು ಎಣಿಕೆಗೆ ಅಗತ್ಯವಿರುವ ಕೊಠಡಿಗಳು ಹಾಗೂ ಭದ್ರತಾ ಕೊಠಡಿಗಳ ಸಿದ್ದತೆ ಕುರಿತು ಪರಿಶೀಲಿಸಲಾಯಿತು.
 ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು  ವಿನ್ಯಾಸದೊಂದಿಗೆ ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.
 ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್, ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.