ಯಡಿಯೂರಪ್ಪ ಹಸಿರು ಶಾಲು ಹಾಕೊಳ್ಳಲು ನಾಚಿಕೆಯಾಗುವುದಿಲ್ಲವೇ?-ಸಿದ್ದರಾಮಯ್ಯ

ಕೊಪ್ಪಳ, : ಇಡೀ ದೇಶದಲ್ಲಿ ಕಾಂಗ್ರೆಸ್ ಹವಾ ಇದೆ, ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಹಕಾರಿ ಬ್ಯಾಂಕಿನ ಸಾಲ ಮನ್ನಾ ಮಾಡಿದ್ದೇನೆ. ಬಡವರ, ಹಿಂದುಳಿದವರ ಸಾಲ ಮನ್ನಾ ಮಾಡಿದ್ದಾನೆ. ಈಗ ಮೈತ್ರಿ ಸರ್ಕಾರದಲ್ಲಿ ಕುಮಾರ ಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದಾರೆ ಮೋದಿ ಏನು ಮಾಡಿದ್ದಾರೆ ಸುಳ್ಳು ಹೇಳಿ ದೇಶಗಳನ್ನು ಸುತ್ತುವದನ್ನು ಬಿಟ್ಟು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕೊಪ್ಪಳ ನಗರದ ತಾಲೂಕ ಕ್ರೀಡಾಂಗಣದಲ್ಲಿ ಕೊಪ್ಪಳ ಲೋಕಸಭೆಯ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ನಡೆದ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳೆಲ್ಲವೂ ಠುಸ್ಸ್ ಆಗಿವೆ, ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ, ಪ್ರಣಾಳಿಕೆಯಲ್ಲಿ ನೀಡಿದ ೧೬೫ ಭರವಸೆಗಳೆಲ್ಲವನ್ನೂ ಈಡೇರಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ನರೇಂದ್ರ ಮೋದಿಯವರು ಜನರ ಖಾತೆಗೆ ೧೫ ಲಕ್ಷ ಹಾಕ್ತಿನಿ ಅಂತ ಹೇಳಿ ವಂಚಿಸಿದ್ದಾರೆ. ಜನರ ಖಾತೆಗೆ ಐದು ಪೈಸೆನೂ ಬಿದ್ದಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂತ ಹೇಳಿ ದೇಶದಲ್ಲಿ ನಿರುದ್ಯೋಗ ಸೃಷ್ಟಿಸಿ, ಯುವಕರನ್ನು ಆತಂಕಕ್ಕೀಡು ಮಾಡಿದ್ದಾರೆ. ಹೇಳಿದಂತೆ ಮಾಡಿದ್ದರೆ ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ನಿರ್ಮಾಣ ಮಾಡಬಹುದಿತ್ತು. ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಮೋದಿ ಬಡವರ ಪರ ಇಲ್ಲ, ಶ್ರೀಮಂತ ಉದ್ಯಮಿಗಳ ಪರ ಇದ್ದಾನೆ. ಕಪ್ಪುಹಣ ಹೊರ ತರ್‍ತಿನಿ ಅಂತ ಹೇಳಿ, ಯಾಕ ತರ್‍ಲಿಲ್ಲ.
ಅಚ್ಛೆ ದಿನ್, ಮನ್ ಕೀ ಬಾತ್ ಎಂದು ಬರೀ ಬಾಯಲ್ಲಿ ಹೇಳುವುದೇ ಆಯ್ತು, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಮೋದಿಯವರು ಐದು ವರ್ಷದಲ್ಲಿ ಎರಡೇ ಸಾಧನೆ ಮಾಡಿದ್ದಾರೆ. ಒಂದು ಮನ್ ಕೀ ಬಾತ್, ಇನ್ನೊಂದು ವಿದೇಶಿ ಪ್ರವಾಸ. ಇವೆರಡೇ ಅವರು ಮಾಡಿದ ಸಾದನೆ.
ರೈತರ ಆದಾಯ ಎರಡು ಪಟ್ಟು ಮಾಡ್ತಿವಿ ಅಂತ ಹೇಳಿ ಈಗ ರೈತರ ಪರಿಸ್ಥಿತಿ ಏನಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ಎರಡು ವರ್ಷದಿಂದ ರಾಜ್ಯದಲ್ಲಿ ಬೀಕರ ಬರಗಾಲವಿದೆ, ದಯವಿಟ್ಟು ರಾಜ್ಯದ ರೈತರ ಸಾಲ ಮನ್ನಾ ಮಾಡಿ ಎಂದು ಮೋದಿಗೆ ಕೈ ಮುಗಿದು ಕೇಳಿಕೊಂಡೆ. ಮೋದಿ ಸಾಲ ಮನ್ನಾ ಮಾಡಲು ಸಾದ್ಯವಿಲ್ಲ ಎಂದು ಬಿಟ್ಟರು. ನನ್ನ ಜೊತೆಗೆ ಬಂದಿದ್ದ ಜಗದೀಶ ಶಟ್ಟರು, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಇವರಿಗೆ ನೀವಾದರೂ ಮೋದಿಗೆ ಹೇಳಿ ಸಾಲಮನ್ನಾ ಮಾಡಿಸಿ ಎಂದು ಹೇಳಿದರೆ ಆ ಬಾಲಂಗೋಚಿಗಳು ತುಟಿ ಪಿಟಕ್ ಎನ್ನಲಿಲ್ಲ. ಕೊನೆಗೆ ಮೋದಿಯರೇ ನೀವು ಬ್ಯಾಂಕ್ ಸಾಲವಾದರೂ ಮನ್ನಾ ಮಾಡಿ, ನಾನು ಸಹಕಾರ ಸಾಲ ಮನ್ನಾ ಮಾಡುತ್ತೇನೆ ಎಂದರೆ, ಮೋದಿ ಕ್ಯಾರೆ ಎನ್ನಲಿಲ್ಲ. ನಾನು ಸಹಕಾರ ಸಾಲ ಮನ್ನಾ ಮಾಡಿದೆ, ಇದರಿಂದ ರೈತರಿಗೆ, ಬಡವರಿಗೆ ಅನುಕೂಲವಾಯಿತು. ಸಮ್ಮಿಶ್ರ ಸರ್ಕಾರ ರಚನೆಯಾದಾಗ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದರು. ರಾಹುಲ್ ಗಾಂಧಿ ನೇತೃತ್ವದ ಸರಕಾರ, ಚುನಾವಣೆಯಲ್ಲಿ ಗೆದ್ದ ಮದ್ಯಪ್ರದೇಶ, ಪಂಜಾಬ್, ರಾಜಸ್ಥಾನ ಸೇರಿದಂತೆ ಮೂರು ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರು ಎಲ್ಲಿ ಸಾಲ ಮನ್ನಾ ಮಾಡಿದ್ದಾರೆ ತೋರಿಸಲಿ ಎಂದರು.
ಮಿಸ್ಟರ್ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಸಾಲ ಮನ್ನಾ ಮಾಡಿ ಎಂದು ರೈತರು ಕೇಳಿದರೆ, ನನ್ನತ್ರ ನೋಟು ಪ್ರಿಂಟ್ ಮಾಡುವ ಮಿಷನ್ ಇಲ್ಲ ಅಂತ ಹೇಳಿ ರೈತರಿಗೆ ಅವಮಾನ ಮಾಡಿದ, ರೈತರ ನಾಯಕ ಎಂದು ಹೆಗಲ ಮೇಲೆ ಹಸಿರು ಶಾಲು ಹಾಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ವ್ಯಂಗ್ಯವಾಡಿದರು.
ನಾವು ೨೮ ಸೀಟ್‌ನಲ್ಲಿ ೧೭ ಸೀಟ್‌ಗಳನ್ನು ಮೈನಾರಿಟಿ, ಹಿಂದುಳಿದವರು, ದಲಿತರು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಸರಿಸಮಾನವಾಗಿ ಟಿಕೆಟ್ ನೀಡಿದ್ದೇವೆ. ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಅವರಿಗೆ ಮೆದುಳು ನಾಲಿಗೆ ಕನೆಕ್ಷನ್ ತಪ್ಪಿ ಮಿಕ್ಸ್ ಆಗ್ಬಿಟ್ಟಿದೆ ಹಾಗಾಗಿ ಏನು ಮಾತಾಡುತ್ತಿದ್ದೇನೆ ಎನ್ನುವ ಪರಿಜ್ಞಾನ ಇರುವುದಿಲ್ಲ. ಈಶ್ವರಪ್ಪ ಹಿಂದುಳಿದ ವರ್ಗದವರಿಗೆ ಎಷ್ಟು ಟಿಕೆಟ್ ಕೊಡಿಸಿದ್ದಾನೆ ಲೆಕ್ಕ ಹೇಳಲಿ, ಹೊಗ್ಲಿ ಹಿಂದುಳಿದವರಿಗೆ ಇಲ್ಲದಿದ್ದರೂ ಪರವಾಗಿಲ್ಲ. ಕೊನೆ ಪಕ್ಷ ಬಿಜೆಪಿಯಿಂದ ಕುರಬರಿಗೆ ಒಂದಾದರೂ ಟಿಕೆಟ್ ಕೊಡಿಸಿದ್ದಿಯಾ? ಒಂದೂ ಟಿಕೆಟ್ ಕೊಡಿಸಲು ಆಗದಿದ್ದ ಮೇಲೆ ನೀವೆಂತ ನಾಯಕ ರೀ, ನಿಮ್ಮ ಕೈಲೆ ಇಷ್ಟು ಮಾಡಲು ಆಗದಿದ್ದ ಮೇಲೆ ರಾಜಕೀಯ ಸಂನ್ಯಾಸ ಸ್ವೀಕರಿಸುವುದು ಒಳ್ಳೆಯದು ಎಂದು ತಿರುಗೇಟು ನೀಡಿದರು.
ರಾಜ್ಯದ ಎಸ್.ಸಿ. ಎಸ್.ಟಿ ಗಳಿಗೆ ವರ್ಷದಲ್ಲಿ ೩೦ ಸಾವಿರ ಕೋಟಿ ಖರ್ಚು ಮಾಡಿದ್ದೇವೆ, ಮೋದಿ ಇಡೀ ದೇಶದಲ್ಲಿ ಐದು ವರ್ಷದಲ್ಲಿ ಕೇವಲ ೫೪ ಕೋಟಿ ಖರ್ಚು ಮಾಡಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ದಿನ್ನೆಶ್ ಗುಂಡುರಾವ್ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಮೋದಿಯವರ ಭಾಷಣಕ್ಕೆ ಮರಳಾಗಿ ಜನ ವೋಟು ಹಾಕಿದರು, ಆದರೆ ಮೋದಿ ಸರ್ಕಾರದ ಯಾವ ಯೋಜನೆಯೂ ಜನರಿಗೆ ತಲುಪಲಿಲ್ಲ. ಮೋದಿ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ನಿಮ್ಮೂರಿಗೆ ಮೋದಿ ವೋಟ್ ಕೇಳಲು ಬಂದಾಗ ಐದು ವರ್ಷದಲ್ಲಿ ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಿದ್ದೀರಿ, ರೈತರಿಗೆ ಉಪಯೋಗವಾಗುವಂತ ಯಾವ ಯೋಜನೆಗಳನ್ನು ತಂದಿರಿ, ಕಪ್ಪು ಹಣ ಎಷ್ಟು ಹೊರಗೆ ತಂದಿರಿ, ಹದಿನೈದು ಲಕ್ಷ ಹಣ ಯಾರ ಖಾತೆಗೆ ಹಾಕಿದಿರಿ ಎಂದು ಮೋದಿಯನ್ನು ಪ್ರಶ್ನೆ ಮಾಡಿರಿ ಎಂದು ಕಾರ್ಯಕರ್ತರಿಗೆ ಹೇಳಿದರು. ೨೦೧೪ರ ಚುನಾವಣೆಯಲ್ಲಿ ಚಾಯ್‌ವಾಲಾ ಅಂತಿದ್ರು ಇವಾಗ ಚೌಕಿದಾರ ಎನ್ನುತ್ತಿದ್ದಾರೆ. ಚೌಕಿದಾರ ಆಗಿದ್ದರೆ, ನಿರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯನಂತವರು ಸಾವಿರಾರು ಕೋಟಿ ಹಣ ಲೂಟಿ ಮಾಡಿಕೊಂಡು ದೇಶಬಿಟ್ಟು ಓಡಿಹೋಗುವಾಗ ಚೌಕಿದಾರ ಎನ್ನುವ ನೀವು ಏನು ಮಾಡುತ್ತಿದ್ದಿರಿ ಎಂದು ಮೋದಿಗೆ ಪ್ರಶ್ನೆ ಮಾಡಿದರು.
ರಾಹುಲ್ ಗಾಂಧಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಸರ್ಜಿಕಲ್ ಸ್ಟ್ರೈಕ್ ಬಡತನದ ಮೇಲೆ ಮಾಡಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ತಿಂಗಳಿಗೆ ೬೦೦೦ ರೂ. ವರ್ಷಕ್ಕೆ ೭೨ ಸಾವಿರ ರೂ. ಕೊಟ್ಟು ಅವರನ್ನು ಬಡತನ ರೇಖೆಯಿಂದ ಹೊರತರಲು ರಾಹುಲ್ ಗಾಂಧಿ ತಿರ್ಮಾನಿಸಿದ್ದಾರೆ. ಬಿಜೆಪಿಗೆ ಇಂತಹ ಸಾಮಾಜಿಕ ಚಿಂತನೆ ಇಲ್ಲ. ಬಡವರ ಪರ ಇಲ್ಲ. ಅದು ಬರೀ ಕೆಲವೊಂದಿಷ್ಟು ಶ್ರೀಮಂತರ ಪರ ಇದೆ. ಇವಾಗ ಮೋದಿ ಹವಾ ಇಲ್ಲ. ಈ ಸಾರೆ ರಾಜಶೇಖರ್ ಹಿಟ್ನಾಳ ೨ ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಮಾತನಾಡಿ, ಸಿದ್ರಾಮಯ್ಯನವರು ಮಾಡಿದ ಜನಪ್ರಿಯ ಕೆಲಸ ಮೋದಿಯವರು ಒಂದಾದರೂ ಮಾಡಿದ್ದಾರೆಯೇ? ಮೋದಿಯವರೇ ನಿಮಗೆ ೫೨ ಇಂಚಿನ ಎದೆ ಇದೆ, ಆದರೆ ಅದರೊಳಗೆ ಸಿದ್ರಾಮಯ್ಯನ ಹೃದಯ ಇದೆಯೇ? ಎಂದು ವ್ಯಂಗ್ಯವಾಡಿದರು. ಭೆಟಿ ಬಚಾವ್ ಭೆಟಿ ಪಡಾವ್ ಎನ್ನುವ ಮೋದಿಯವರೇ, ಹೆಣ್ಣು ಮಕ್ಕಳು ಪಿಜಿವರೆಗೆ ಒಂದು ರೂ. ಶುಲ್ಕ ಇಲ್ಲದೆ ಓದುವಂತ ವ್ಯವಸ್ಥೆ ಕರ್ನಾಟಕದಲ್ಲಿ ಇದೆ, ಭಾರತದಲ್ಲಿ ಎಲ್ಲಿಯಾದರೂ ಇದೆಯಾ? ಫ್ರೀಯಾಗಿ ಅಕ್ಕಿ ಹಂಚುವ ವ್ಯವಸ್ಥೆ ಕರ್ನಾಟಕದಲ್ಲಿ ಇದೆ, ಭಾರತದಲ್ಲಿ ಎಲ್ಲಿಯಾದರೂ ಇದೆಯಾ? ಪುಲ್ವಾಮಾ ದಾಳಿ ಹೇಗೆ ಆಯ್ತು ವಿವರಣೆ ಕೊಡಲು ಮೋದಿ ತಯಾರಿಲ್ಲ. ನಾನೇ ಸರ್ಜಿಕಲ್ ದಾಳಿ ಮಾಡಿದ್ದೇನೆ ಎಂದು ಚುನಾವಣಾ ಗಿಮಿಕ್ ಮಾಡಿಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಎನ್ನುವ ಆರ್‌ಎಸ್‌ಎಸ್ ಹುಡಗ ಸಂವಿಧಾನ ಸುಟ್ಟು ಹಾಕ್ರಿ ಎಂದು ಹೇಳಿದ, ಅಂಬೇಡ್ಕರ್ ಮೂರ್ತಿ ದ್ವಂಸ ಮಾಡಿ ಎಂದು ಕೋಮು ವಿಷ ಬೀಜ ಬಿತ್ತುತ್ತಿದ್ದವನಿಗೆ ಇಂದು ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ. ದಲಿತ ನಾಯಕರೆ, ಜಿಗಜಿಣಗಿ, ರಾಮುಲು, ಜಾದವ, ಶ್ರೀನಿವಾಸ ಪ್ರಸಾದ ಎಲ್ಲಿದ್ದಿರಾ, ಪ್ರಶ್ನೆ ಮಾಡಲು ಬಾಯಿ ಬಿದ್ದೊಗಿದೆನಾ? ನಿಮಗೆ ಅಂಬೇಡ್ಕರ್ ಮೇಲೆ ಕಿಂಚಿತ್ತೂ ಅಭಿಮಾನವಿಲ್ಲ. ಅವರು ಬರೆದ ಸಂವಿಧಾನದಿಂದಲೇ ನೀವು ಅಧಿಕಾರ ಹಿಡಿದಿದ್ದೀರಿ ಎನ್ನುವುದು ಅರಿವಿರಲಿ. ಇಂತ ದೇಶದ್ರೋಹಿಗಳು, ಸಂವಿಧಾನ ನಾಶ ಮಾಡುವವರನ್ನು ಸೋಲಿಸಿ, ಮೋದಿ ನೀ ಇನ್ನ ಹೋದಿ ಎಂದು ಆಡಿದ ಮಾತಿಗೆ ಇಡೀ ಸಭೆ ನಗೆಗಡಲಲ್ಲಿ ತೇಲಿತು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ, ಸಿದ್ರಾಮಯ್ಯನವರಿಗೆ ಪ್ರಧಾನಮಂತ್ರಿ ಪಟ್ಟ ಸಿಕ್ರೆ ನಿಬಾಯಿಸುವ ಶಕ್ತಿ ಇದೆ, ನಾವು ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸಿದ್ರಾಮಯ್ಯ, ರಾಹುಲ್ ಗಾಂಧಿ ಕೈ ಬಲಪಡಿಸಬೇಕು. ಸಿದ್ರಾಮಯ್ಯ ಮತ್ತೊಂದು ಸಲ ಮುಖ್ಯಮಂತ್ರಿಯಾಗಬೇಕು. ಅವರು ಮುಖ್ಯ ಮಂತ್ರಿಯಾಗಿದ್ದಾಗ ನಾನು ಜೆಡಿಎಸ್ ನಿಂದ ಶಾಸಕನಾಗಿದ್ದೆ, ಅವಾಗಲೇ ನಾನು ಸಿದ್ರಾಮಯ್ಯನವರ ಜೊತೆ ಮೈತ್ರಿ ಮಾಡಿಕೊಂಡಿದ್ದೆ. ಕಾರಣ ಅವರೊಬ್ಬ ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದರು. ಆದ್ದರಿಂದಲೇ ಮೈತ್ರಿ ಮಾಡಿಕೊಂಡಿದ್ದೆ ಎಂದರು.
ಇಡೀ ರಾಜ್ಯಕ್ಕೆ ಮುಸ್ಲಿಂ ಸಮುದಾಯಕ್ಕೆ ಇರುವ ಏಕೈಕ ನಾಯಕ ಅಂದ್ರೆ ಅದು ಸಿದ್ರಾಮಯ್ಯ ಮಾತ್ರ. ಈ ಚುನಾವಣೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ವೋಟು ಹಾಕುವುದರ ಮೂಲಕ ರಾಜೆಶೇಖರ್‌ನನ್ನು ಗೆಲ್ಲಿಸೋಣ. ಸ್ಟೇಜ್ ಮೇಲಿದ್ದವರು ಮನೆಗೆ ಹೋಗಿ ಯಾರಿಗಾದರೂ ಬಿಜೆಪಿಗೆ ವೋಟ್ ಹಾಕು ಎಂದು ಹೇಳಿ ಡಬಲ್ ಗೇಮ್ ಆಡಿದರೆ ಕೂಡಲೆ ನನಗೆ ಫೋನ್ ಮಾಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಪಶುಸಂಗೋಪನಾ ಸಚಿವ ವೆಂಕಟ್‌ರಾವ್ ನಾಡಗೌಡ ಮಾತನಾಡಿ, ಸಿದ್ರಾಮಯ್ಯ ಮತ್ತು ಕುಮಾರಸ್ವಾಮಿ ಮಾಡಿದ ಲಕ್ಷಾಂತರ ರೂ. ಸಾಲ ಮನ್ನಾ ಚರ್ಚೆ ಆಗ್ತಿಲ್ಲ, ಮೋದಿ ತಿಂಗಳಿಗೆ ೫೦೦ ರೂ ಕೊಡುವುದು ಈ ದೇಶದಲ್ಲಿ ದೊಡ್ಡ ಚರ್ಚೆಯಾಗ್ತಿರೋದು ದುರಂತ. ನಮ್ಮ ಪ್ರಣಾಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಬಿಜೆಪಿ ಹಿಂದೆ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಸ್ವಾಮಿನಾಥನ್ ವರದಿ, ಅಚ್ಛೆದಿನ್, ಕಪ್ಪುಹಣ ಹೊರಗೆ ಇಂತಹ ಹತ್ತಾರು ಹೆಸರಿನ ಪ್ರಣಾಳಿಕೆ ನೀಡಿದ ಮೋದಿ ಯಾವುದನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಹೇಳಿ.
ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಿಂದೆ ಪಾಕಿಸ್ತಾನದೊಂದಿಗೆ ೩ ಬಾರಿ ಯುದ್ದ ಮಾಡಿದೆ. ಅವುಗಳ ಬಗ್ಗೆ ಚರ್ಚೆನೇ ಆಗುತ್ತಿಲ್ಲ. ಒಬ್ಬ ಪ್ರಧಾನ ಮಂತ್ರಿ ಹಿಂದುತ್ವದ ಬಗ್ಗೆ ಮಾತಾಡುತ್ತಿದ್ದಾನೆಂದರೆ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದು ವಿಚಾರ ಮಾಡುಬೇಕು ಎಂದರು.
ಮೈತ್ರಿ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಮಾತನಾಡಿ, ಮೋದಿಯ ಅಲೆಯಲ್ಲೂ ತಂದೆಯವರು ಕೆಲವು ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು, ಈ ಬಾರಿ ತಮ್ಮನ್ನು ಆಯ್ಕೆ ಮಾಡಿದಲ್ಲಿ ಸ್ಪಷ್ಟವಾದ ಗುರಿ ಇಟ್ಟುಕೊಂಡು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಇದೊಮ್ಮೆ ತಮ್ಮನ್ನು ಆಯ್ಕೆ ಮಾಡಿ ತಮ್ಮ ಕೆಲಸವನ್ನು ನೋಡಬೇಕು. ಯುಪಿಎ ಸರಕಾರ ಮತ್ತು ಸಿದ್ದರಾಮಯ್ಯ ಸರಕಾರಿ ಹಾಗೂ ಪ್ರಸ್ತುತ ಮೈತ್ರಿ ಸರಕಾರದ ಕೆಲಸ ನೋಡಿ ತಮಗೆ ಮತ ಕೊಡಬೇಕು, ಕಾಂಗ್ರೆಸ್ ಗೆಲ್ಲಿಸುವ ಮೂಲಕ ಒಳ್ಳೆಯ ಆಡಳಿತಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಶಿವರಾಮಗೌಡ ಮತ್ತು ಕೆ. ವಿರುಪಾಕ್ಷಪ್ಪ, ಎಂಎಲ್‌ಸಿ ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರಡ್ಡಿ, ಕಾಂಗ್ರೆಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ, ಸಿರುಗುಪ್ಪ ಮಾಜಿ ಶಾಸಕ ಬಿ.ಎಂ.ನಾಗರಾಜ, ಸಿಂಧನೂರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಸಿಂಧನೂರು, ಜೆಡಿಎಸ್ ಮುಖಂಡರು ಮಾಜಿ ಎಂಎಲ್‌ಸಿಗಳಾದ ಹೆಚ್.ಆರ್.ಶ್ರೀನಾಥ್ ಮತ್ತು ಕರಿಯಣ್ಣ ಸಂಗಟಿ, ಜೆಡಿಎಸ್ ಮುಖಂಡರಾದ ಕೆ.ಎಂ.ಸೈಯ್ಯದ್, ಪ್ರದೀಪಗೌಡ ಮಾಲಿಪಾಟೀಲ್, ವಿರೇಶ ಮಹಾಂತಯ್ಯನಮಠ, ಕಾಂಗ್ರೆಸ್ ಮುಖಂಡರಾದ ಗೂಳಪ್ಪ ಹಲಗೇರಿ, ಎಸ್.ಬಿ ನಾಗರಳ್ಳಿ, ಶ್ರೀನಿವಾಸ ಗುಪ್ತಾ, ಜುಲ್ಲು ಖಾದರ್ ಖಾದ್ರಿ, ಸಿದ್ದಲಿಂಗಯ್ಯ ಹಿರೇಮಠ, ಟಿ. ರತ್ನಾಕರ, ಗಾಳೆಪ್ಪ ಕಡೆಮನಿ, ಇಂದಿರಾ ಭಾವಿಕಟ್ಟಿ, ಮಾಲತಿ ನಾಯಕ್, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ಮಾಲಿಪಾಟೀಲ್, ಅಮ್ಜದ್ ಪಟೇಲ್, ಕಾಟನ್ ಪಾಶಾ, ಕೃಷ್ಣಾ ಇಟ್ಟಂಗಿ, ಟಿ. ಜನಾರ್ಧನ ಹುಲಗಿ ಸೇರಿದಂತೆ ಅನೇಕ ಮುಖಂಡರು ಇದ್ದರು.

ಈ ಸಂದರ್ಭದಲ್ಲಿ ಮಾಜಿ ಕುರಿ ಉಣ್ಣೆ ನಿಗಮದ ಅಧ್ಯಕ್ಷ ವೈ.ಎನ್.ಗೌಡರ್, ಮಾಜಿ ಜಿಪಂ ಸದಸ್ಯ ನಾಗನಗೌಡ ಪಾಟೀಲ್ ಸೇರಿದಂತೆ ಇತರರು ಕಾಂಗ್ರೆಸ್ ಸೇರ್ಪಡೆಗೊಂಡರು. ಮೊದಲು ಕೊಪ್ಪಳದ ರಾಘವೇಂದ್ರಸ್ವಾಮಿ ಮಠ, ಶ್ರೀ ಸಹಸ್ರಾಂಜನೇಯ ದೇವಸ್ಥಾನ, ಕೋಟೆ ಆಂಜನೇಯ ದೇವಸ್ಥಾನ, ದರ್ಗಾಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸಿರಸಪ್ಪಯ್ಯನಮಠದಲ್ಲಿ ಪೂಜೆ ಸಲ್ಲಿಸಿ ಮೆರಣಿಗೆಗೆ ಚಾಲನೆ ನೀಡಿದರು, ಗಡಿಯಾರ ಕಂಬ, ಆಜಾದ್ ವೃತ್ತದ ಮೂಲಕ ಅಶೋಕ ಸರ್ಕಲ್ ಮಾರ್ಗವಾಗಿ ತಾಲೂಕ ಕ್ರೀಡಾಂಗಣಕ್ಕೆ ಬಂದು ವೇದಿಕೆ ಕಾರ್ಯಕ್ರಮ ನಡೆಯಿತು. ಸುಮಾರು ೫೦ ಸಾವಿರ ಜನರು ಸೇರಿದ್ದ ಬೃಹತ್ ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಿದರು. ಸಿ.ವಿ.ಜಡಿಯವರ ಕಾರ್ಯಕ್ರಮ ನಿರೂಪಿಸಿದರು, ಪರಶುರಾಮ ಬಣ್ಣದ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Please follow and like us:
error