ಮೋದಿ ಮಾತು ನಂಬಿ ಕೆಡಬೇಡಿ, ಆತನೊಬ್ಬ ಮಾಟಗಾರ : ತಂಗಡಗಿ

ಕೊಪ್ಪಳ, ಎ. ೧೮: ಕಳೆದ ಲೋಕಸಭಾ ಚುನಾವಣಾ ವೇಳೆ ಮತದಾರರು ಮೋದಿಯ ಬಗ್ಗೆ ಏನೇನೋ ಆಸೆಗಳನ್ನು ಕಟ್ಟಿಕೊಂಡಿದ್ದರು. ಆದರೆ ೫ ವರ್ಷ ಆಡಳಿತ ಮಾಡಿದ ಮೋದಿ ಯಾವೊಂದು ಭರವಸೆಗಳನ್ನು ಈಡೇರಿಸಲಿಲ್ಲ. ಮೋದಿ ಒಬ್ಬ ಸುಳ್ಳುಗಾರ, ಮಾಟಗಾರನಿದ್ದಂತೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದರು.
ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ್ ಹಿಂದುಗಡೆ ಇರುವ ಬಯಲು ಮೈದಾನದಲ್ಲಿ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ದೇಶಕ್ಕೆ ಹಲವಾರು ನಾಯಕರುಗಳನ್ನ ಮತ್ತು ಪ್ರಧಾನಿಗಳನ್ನ ನೀಡಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶ ಅಭಿವೃದ್ಧಿಯಾಗತ್ತಲೇ ಬಂದಿದೆ. ವೈಜ್ಞಾನಿಕವಾಗಿ, ವಿಜ್ಞಾನ, ತಂತ್ರಜ್ಞಾನಗಳಿಂದ ಮುಂದುವರೆದಿದೆ. ಬಿಜೆಪಿಯ ಐದು ವರ್ಷದಲ್ಲಿ ಏನು ಆಗಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ದೇಶದಲ್ಲಿ ಹಲವಾರು ರೀತಿಯ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಈ ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿ ಕಟ್ಟಿಸಲಾಗಿದೆ. ಇಂದು ಬಿಜೆಪಿಯವರು ಮನೆಯಲ್ಲೆ ಕುಳಿತು ಮೆಸೇಜ್ ಮಾಡುವ ಮೊಬೈಲ್ ಫೋನ್ ಕೂಡ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜೀವ್ ಗಾಂಧಿಯವರು ಚಾಲನೆ ನೀಡದವರು. ಬಿಜೆಪಿಯವರು ನೋಡುವ ಟಿವಿಗಳನ್ನು ಕೂಡ ಇಂಧಿರಾಗಾಂಧಿಯವರ ಕಾಲದಲ್ಲೇ ತಯಾರು ಮಾಡಲಾಗಿದೆ. ಆದರೆ ಬಿಜೆಪಿ ಏನೂ ಮಾಡದೆ, ಬರೀ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಮೋದಿಯವರಿಂದಲೇ ದೇಶ ರಕ್ಷಣೆ ಸಾಧ್ಯ ಎಂದು ಹೇಳಿಕೊಂಡು ಓಡಾಡುತ್ತಿರುವ ಇವರಿಗೆ ಸ್ವಾತಂತ್ರ್ಯ ಸಿಕ್ಕಾಗಿಂದ ಇಲ್ಲಿಯವರೆಗೆ ದೇಶಕ್ಕೆ ರಕ್ಷಣೆ ಇರಲಿಲ್ಲವೇ ಹಾಗಾದರೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಈ ಸಲ ರಾಜಶೇಖರ್ ಹಿಟ್ನಾಳ ಅವರ ಗೆಲುವು ಖಚಿತ. ನಮ್ಮ ಮೈತ್ರಿ ಸರ್ಕಾರದಲ್ಲಿ ಯಾವುದೇ ಒಡಕಿಲ್ಲ, ಸುಮ್ನೆ ಅಪಪ್ರಚಾರ ಮಾಡುತ್ತಿದ್ದಾರೆ, ಸಚಿವ ವೆಂಕಟರಾವ್ ನಾಡಗೌಡ, ಹಂಪನಗೌಡ ಸೇರಿದಂತೆ ಇಕ್ಬಾಲ್ ಅನ್ಸಾರಿ ಅವರೂ ಕೂಡ ಕೆಲಸಗಳನ್ನು ಬದಿಗೊತ್ತಿ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲರೂ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಯಾವುದೇ ರೀತಿಯ ವೈಮನಸ್ಸು ಇಲ್ಲ ಭಾಗ್ಯನಗರದ ಅಳಿಯ ಆಗಿರುವ ರಾಜಶೇಖರ್‌ಗೆ ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಬೇಕು. ಭಾಗ್ಯನಗರ ಪಟ್ಟಣ ಪಂಚಾಯತ್ ಮಾಡಿದ್ದು, ಎರಡು ರೈಲ್ವೆ ಬ್ರಿಡ್ಜ್‌ಗಳನ್ನು ನಿರ್ಮಾಣ ಮಾಡುವದಕ್ಕೆ ಭೂಸ್ವಾಧೀನಕ್ಕೆ ಪೂರ್ತಿ ಹಣ ಮತ್ತು ಸೇತುವೆ ನಿರ್ಮಾಣಕ್ಕೆ ರಾಜ್ಯದ ಶೇ. ೫೦ ರಷ್ಟು ಹಣ ನೀಡಿದೆ, ಶಾಸಕ ಹಿಟ್ನಾಳ ೨೦ ಕೋಟಿ ರುಪಾಯಿ ಕಾಮಗಾರಿಗಳನ್ನು ಭಾಗ್ಯನಗರದಲ್ಲಿ ಮಾಡಿಸಿದ್ದಾರೆ. ಬಿಜೆಪಿಯ ಸಂಘಣ್ಣ ಭಾಗ್ಯನಗರಕ್ಕೆ ಏನು ಮಾಡಿದ್ದಾರೆ ಎಂದು ಮೊದಲು ಹೇಳಲಿ ಎಂದರು.
ಬಿಜೆಪಿಯವರದು ಬರೀ ಪುಗ್ಸಟ್ಟೆ ಸ್ಕೀಂಗಳು, ಅವರಿಗೆ ಹೇಳಿಕೊಳ್ಳಲು ಬೇರೆ ಯಾವ ಸಾಧನೆಗಳು ಇಲ್ಲದ ಕಾಋಣ ಪುಲ್ವಾಮಾ, ಪಾಕಿಸ್ತಾನ, ಮುಸ್ಲಿಂ, ರಾಮಮಂದಿರ ಎಂದೆಲ್ಲಾ ರೀಲು ಬಿಡ್ತಾ ಇದಾರೆ. ಮತದಾರರು ಈಗ ಪ್ರಬುದ್ಧರಾಗಿದ್ದು, ಮೋದಿಯ ಸುಳ್ಳನ್ನಾಗಲಿ, ಮತ್ತೊಮ್ಮೆ ಮೋಸವನ್ನಾಗಲಿ ನಂಬಲಾರರು ಎಂದ ಅವರು, ಮೋದಿ ನೋಡಿ ಓಟು ಹಾಕ್ರಿ ಎಂದು ಹೇಳುವ ಬಿಜೆಪಿಗರಿಗೆ ಇಲ್ಲಿ ಅಭ್ಯರ್ಥಿಗಳ ಮುಖಕ್ಕೆ ಹುಳಾ ಹತ್ತಿದೆಯೇ ಎಂದು ಪ್ರಶ್ನಿಸಿದರು.
ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ನಮ್ಮ ಕೆಲಸವನ್ನು ನೋಡಿ ಒಂದು ಬಾರಿ ಹೆಚ್ಚಿನ ಮತಗಳನ್ನು ಭಾಗ್ಯನಗರದ ಜನತೆ ನೀಡಬೇಕು. ಲೋಕಸಭಾ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅಪಾರವಾದ ಬೆಂಬಲವಿದೆ. ಮೈತ್ರಿ ಸರಕಾರ ಮತ್ತು ಸಿದ್ದರಾಮಯ್ಯ ಸರಕಾರ ಹಾಗೂ ಹಿಂದಿನ ಮನ್ಮೋಹನ್ ಸಿಂಗ್ ಅವರ ಯುಪಿಎ ಸರಕಾರಗಳು ರೈತರ, ನೇಕಾರರ, ಪರಿಶಿಷ್ಟ ಜಾತಿ ಪಂಗಡದ ಮತ್ತು ಹಿಂದುಳಿದ ಜನರ ಸಾಲ ಮನ್ನಾ ಮಾಡಿದ್ದಾರೆ. ಹಲವು ಭಾಗ್ಯಗಳನ್ನು ನೀಡಿದ್ದಾರೆ. ಹೇಳಿದ ೧೬೫ ಭರವಸೆಗಳನ್ನು ಈಡೇರಿದ್ದೇವೆ. ಮುಂದೆಯೂ ಈಗ ಪ್ರಣಾಳಿಕೆಯಲ್ಲಿ ಕೊಟ್ಟಿರುವಂತೆ ಪ್ರತಿ ಬಡ ಕುಟುಂಬಕ್ಕೆ ನ್ಯಾಯ ಯೋಜನೆಯಲ್ಲಿ ತಿಂಗಳಿಗೆ ೬ ಸಾವಿರದಂತೆ ವರ್ಷಕ್ಕೆ ೭೨ ಸಾವಿರ ಕನಿಷ್ಠ ಜೀವನೋಪಾಯ ಸಹಾಯ ಧನ ನೇರವಾಗಿ ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿಗೆ ಹಾಕಲಾಗುವದು, ಅದಕ್ಕಾಗಿ ಯಾವುದೇ ತೆರಿಗೆ ಹೆಚ್ಚಿಸುವದಿಲ್ಲ ಎಂಬ ಭರವಸೆಯನ್ನು ಸಹ ಹಾಹುಲ್ ಗಾಂಧಿ ನೀಡಿದ್ದಾರೆ. ಅಂಥಹ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನಿಡಿ ಎಂದರು. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್ ಮಾತನಾಡಿ, ಭಾಗ್ಯನಗರಕ್ಕೆ ಹಿಟ್ನಾಳ ಅವರು ನೀಡಿದೆ ಕೊಡುಗೆಯನ್ನು ಗಮನದಲ್ಲಿಸಿರಿಕೊಂಡು ಅವರಿಗೆ ಹೆಚ್ಚಿನ ಮತಗಳನ್ನು ಕೊಡಬೇಕು ಎಂದರು. ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಸಂವಿಧಾನ ಸುಡುವ ಮನುವಾದಿಗಳು ಮತ್ತು ಸಂವಿಧಾನ ಬದಲಿಸಿ, ಮನು ಸಂಸ್ಕೃತಿಯಂತೆ ನಮ್ಮನ್ನು ತಮ್ಮ ಸೇವೆಗೆ ಬಳಸಿಕೊಳ್ಳುವ ಕಾಮಾಂಧ ಬಿಜೆಪಿಗರಿಗೆ ಯಾವುದೇ ಕಾರಣಕ್ಕೂ ಮತ ಹಾಕಬಾರದು. ರಾಜ್ಯ ಮತ್ತು ದೇಶದಲ್ಲಿ ನೂರಾರು ಬಿಜೆಪಿ ಶಾಸಕ ಸಂಸದರು ಅತ್ಯಾಚಾರದ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಂದ ರಕ್ಷಣೆ ಕೊಡಿಸುವ ಕೆಲಸವನ್ನು ಮೊದಲು ಮೋದಿ ಮಾಡಬೇಕಿತ್ತು. ಈಗ ಪ್ರಣಾಳಿಕೆಯಲ್ಲಿ ರಾಮಮಂದಿರ, ೩೭೦ ಮತ್ತು ೩೫ಎ ಕುರಿತು ಮಾತನಾಡವ ಬದಲು ತಮ್ಮ ಸರಕಾರದಲ್ಲೇ ಅದನ್ನು ಜಾರಿ ಮಾಡಬಹುದಿತ್ತು, ಆದರೆ ಬಿಜೆಪಿಗೆ ಅವು ಯಾವನ್ನೂ ಮಾಡೆದು ಬೇಕಿಲ್ಲ ಕೇವಲ ಮಾತನಾಡಿ ಅಧಿಕಾರ ಅನುಭವಿಸಬೇಕಿದೆ ಎಂದರು.
ವೇದಿಕೆಯಲ್ಲಿ ಲೋಕಸಾಭಾ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ, ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಬಿ. ನಾಗರಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಕೊಪ್ಪಳ ನಗರಸಭೆ ಸದಸ್ಯರುಗಳಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಗುರುಬಸವರಾಜ ಹಲಗೇರಿ, ಅಕ್ಬರ್ ಪಾಶಾ ಪಲ್ಟನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಭೂಮರಡ್ಡಿ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಸನ್ನ ಗಡಾದ, ಮುಖಂಡರಾದ ಜುಲ್ಲುಸಾಬ್ ಖಾದ್ರಿ, ಶ್ರೀನಿವಾಸ ಗುಪ್ತಾ, ದಾನಪ್ಪ ಕವಲೂರ, ಹೊನ್ನೂರಸಾಬ್ ಭೈರಾಪೂರ್, ಯಶೋಧಾ ಮರಡಿ, ಹುಲಿಗೆಮ್ಮ ತಟ್ಟಿ, ಸವಿತಾ ಗೋರಂಟ್ಲಿ, ಸುಮಿತ್ರಾ ಕಲಾಲ್, ಮಂಜುನಾಥ ಸಾಲಿಮಠ, ಗಂಗಾಧರ್ ಕಬ್ಬೇರ್, ರವಿ ಕುರಗೋಡ ಯಾದವ್, ಮಾನ್ವಿ ಪಾಶಾ, ಬಾಳಪ್ಪ ಬಾರಕೇರ, ಮೌಲಾಹುಸೇನ್ ಜಮೇದಾರ್, ಕೃಷ್ಣಾ ಇಟ್ಟಂಗಿ, ಅಶೋಕ ಗೋರಂಟ್ಲಿ, ಮೆಹಬೂಬ ಅರಗಂಜಿ, ರಮೇಶ ಹ್ಯಾಟಿ ಅನೇಕ ಮುಖಂಡರು ಇದ್ದರು.

Please follow and like us:
error