ಮದುವೆಯಲ್ಲಿ ಮತದಾನ ಜಾಗೃತಿ ಮೂಲಕ ಸಾಮಾಜಿಕ ಬದ್ಧತೆ :


ಕೊಪ್ಪಳ, ಮಾ. ೧೨: ದ್ಯಾಮಣ್ಣ ಬೇವೂರ ಮತ್ತು ನಿರ್ಮಲಾ ಕುರ್ನಾಳ ಬಂಧುಗಳ ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕುಟುಂಬಗಳು ಸಾಮಾಜಿಕ ಬದ್ಧತೆಯನ್ನು ಪ್ರದರ್ಶನ ಮಾಡಿವೆ ಎಂದು ಸ್ವರಭಾರತಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಹಟ್ಟಿ (ಲೇಬಗೇರಿ) ಗ್ರಾಮದಲ್ಲಿ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ, ರೋಟರಿ ಕ್ಲಬ್ ಕೊಪ್ಪಳ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಜಾನಪದ ಪರಿಷತ್‌ಗಳು ಜಂಟಿಯಾಗಿ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೌಟಂಬಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿಯ ಜಾಗೃತಿಗೆ ಅವಕಾಶ ಕೊಟ್ಟ ಕುಟುಂಬಗಳು ಮಾದರಿಯಾಗಿವೆ. ಅಲ್ಲದೇ ಜನರು ಬದಲಾವಣೆಗಾಗಿ ಮತಗಟ್ಟೆವರೆಗೆ ಬಂದು ಮತ ಚಲಾಯಿಸಬೇಕು, ಆಸೆ ಆಮಿಷಗಳಿಗೆ ಬಲಿಯಾಗದೆ ನಿಜ ನಾಯಕನ ಆಯ್ಕೆಗೆ ಮತದಾನ ಮಾಡಿ ಐದು ವರ್ಷಕ್ಕೆ ಇರುವ ಒಂದೇ ಅವಕಾಶ ಬಳಸಿಕೊಳ್ಳಬೇಕು. ಮತದಾನ ಮಾಡದೆ ಮನೆಯಲ್ಲಿ ಕುಳಿತುಕೊಂಡು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ, ಆದ್ದರಿಂದ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಎಂ. ಗೊಂಡಬಾಳ ಅವರು, ಕಡ್ಡಾಯ ಮತದಾನ ಮತ್ತು ಮತದಾನ ಮಹತ್ವ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮದಲ್ಲಿ ಮದುಮಕ್ಕಳು ಹಾಗೂ ಎಲ್ಲಾ ಕುಟುಂಬ ಮತ್ತು ಅತಿಥಿಗಳಿಗೆ ಮತದಾನ ಪ್ರಮಾಣ ವಚನ ಬೋದಿಸಿದರು. ದೇಶದ ಪ್ರತಿಯೊಬ್ಬರು ಶೇ. ೧೦೦ ರಷ್ಟು ಮತದಾನ ಮಾಡಬೇಕು, ಅದರ ಮೂಲಕ ಜನರಿಗೆ ಬೇಕಾದ ಉತ್ತಮ ವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳಬಹುದು ಎಂದರು.
ಸ್ವೀಪ್ ಕಮಿಟಿಯ ಲೇಬಗೇರಿ ಕ್ಲಸ್ಟರ್ ವ್ಯಾಪ್ತಿಯ ಅಧಿಕಾರಿಗಳಾದ ಸೆಕ್ಟರ್ ಅಧಿಕಾರಿ ನರೇಶ ಹೆಚ್., ಬಿಎಲ್‌ಓ ಮೋಹನ್ ಉಪಾಧ್ಯಾಯ ಮತ್ತು ಪಿಡಿಓ ದಾನಪ್ಪ ಅವರು ವಿವಿಪ್ಯಾಟ್ ಮೂಲಕ ಜನರಿಗೆ ಮತದಾನ ಹೇಗೆ ಮಾಡಬೇಕು ಎನ್ನುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇದೇ ವೇದಿಕೆಯಲ್ಲಿ ಆಚರಿಸಿದರು. ವಿವಿಧ ರಂಗದಲ್ಲಿ ಸಾಧನೆ ಮಾಡಿದ, ಕೊಪ್ಪಳ ಜಿಲ್ಲಾ ಪ್ರಥಮ ಮಹಿಳಾ ನೋಟರಿಯಾದ ಸುಕನ್ಯಾ ಶಿವಶಂಕರ ನಾಯಕ್, ರಾಷ್ಟ್ರೀಯ ಅಥ್ಲೆಟಿಕ್ ಪಟು ಬಾಲಮ್ಮ ಹನುಮಪ್ಪ ಮೇಟಿ ಮತ್ತು ರಾಷ್ಟ್ರೀಯ ವಾಲಿಬಾಲ್ ಪಟು ನಂದಿನಿ ಮಂಜುನಾಥ್ ಮದ್ರಳ್ಳಿ ಅವರಿಗೆ ಗಣ್ಯರು, ಮಧುಮಕ್ಕಳು ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಲೇಬಗೇರಿ ಮದಾನೇಗುಂದಿ ಮಠದ ಶ್ರೀ ನಾಗಮೂರ್ತೆಂದ್ರ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಚಿಕ್ಕೆನಕೊಪ್ಪ ಶ್ರೀ ಚನ್ನವೀರ ಶರಣರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಆಗಮಿಸಿ ಶುಭ ಹಾರೈಸಿ ಮತದಾನ ಕುರಿತು ಮಾಹಿತಿ ಪಡೆದರು. ಮುಖಂಡರಾದ ಜಿ. ಪಂ. ಸದಸ್ಯ ರಾಮಣ್ಣ ಚೌಡ್ಕಿ, ಮಾಜಿ ಜಿ. ಪಂ. ಸದಸ್ಯ ಸಂಗನಗೌಡ ಬಿ.ಟಿ ಪಾಟೀಲ, ಶಿವಶಂಕರ ದೇಸಾಯಿ ಮತ್ತು ಪ್ರಸನ್ನ ಗಡಾದ, ತೋಟಪ್ಪ ಕಾಮನೂರ, ಎಂ.ಎ. ಹನುಮಂತರಾವ್, ಅಂಗನವಾಡಿ ಶಿಕ್ಷಕರಾದ ಶಂಕ್ರಮ್ಮ ಬಡಿಗೇರ ಮತ್ತು ಚಾಂದಬಿ ಚೌಡ್ಕಿ ಇತರರು ಇದ್ದರು.
ವೇದಿಕೆಯ ಕೇಂದ್ರಬಿಂಧುವಾದ ದ್ಯಾಮಣ್ಣ ಶಿವಲಿಂಗಪ್ಪ ಬೇವೂರ ಮತ್ತು ನಿರ್ಮಲಾ ಫಕೀರಪ್ಪ ಕುರ್ನಾಳ ಜೋಡಿ ತಮ್ಮ ಜೊತೆಗೆ ನಾಲ್ಕು ಜೋಡಿ ಮದುವೆ ಮಾಡಿಕೊಟ್ಟರು. ಹಟ್ಟಿಯ ಮಂಜುನಾಥ ಭೀಮಣ್ಣ ತಳವಾರ ಮತ್ತು ನೇತ್ರಾವತಿ ಹೇಮಣ್ಣ ತಳವಾರ, ಮುರ್ಲಾಪೂರ ಆನಂದ ದೇವಪ್ಪ ಅಂಗಡಿ ಮತ್ತು ರೇಣುಕಾ ದುರಗನಗೌಡ ಕ್ಯಾರಿಹಾಳ, ತಾಳಕನಕಾಪೂರ ಗವಿಸಿದ್ದಪ್ಪ ಸಣ್ಣಹನುಮಪ್ಪ ಗೆದಗೇರಿ ಮತ್ತು ಮಲ್ಲಮ್ಮ ಗವಿಗೆಪ್ಪ ಬೇವೂರ, ದನಕನದೊಡ್ಡಿ ರಮೇಶ ಹನುಮಪ್ಪ ಮಡಿವಾಳ ಮತ್ತು ದೇವಮ್ಮ ನಾಗಪ್ಪ ಮಡಿವಾಳ ಅವರ ಕುಟುಂಬಸ್ಥರು, ಬಂಧುಗಳು, ಅಪಾರ ಸ್ನೇಹಿತರು ಇದ್ದರು.
ಸಂಚಲನ ಸಮಿತಿಯ ಅಕ್ಕಮ್ಮ ಕೋಳೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿಜಯಲಕ್ಷ್ಮೀ ಗುಳೇದ ಸ್ವಾಗತಿಸಿದರು, ಧರ್ಮಣ್ಣ ಹಟ್ಟಿ ಕಾರ್ಯಕ್ರಮ ನಿರೂಪಿಸಿದರು, ಅಂಗನವಾಡಿ ಸೂಪರ್‌ವೈಸರ್ ಬಸಲಿಂಗಮ್ಮ ಹಿರೇಮಠ ವಂದಿಸಿದರು. ಮೊದಲು ಐದು ಜೋಡಿ ಮಧುಮಕ್ಕಳು ಮತದಾನ ಮಾಡುವ ಮೂಲಕ ಮತಯಂತ್ರಕ್ಕೆ ಚಾಲನೆ ನೀಡಿದರು. ಸುಮಾರು ೧೫೦೦ ಜನ ಮತಯಂತ್ರದಲ್ಲಿ ಮತ ಚಲಾವಣೆ ಮಾಡಿ, ವಿವಿಪ್ಯಾಟ್ ಪರೀಕ್ಷಿಸಿ ಮಾಹಿತಿ ಪಡೆದರು.

Please follow and like us:
error