ಮತದಾರರ ಪಟ್ಟಿ ಪರಿಶೀಲಿಸಲು ವೆಬ್‌ಸೈಟ್, ಎಸ್.ಎಂ.ಎಸ್. ಸದ್ಬಳಕೆ ಮಾಡಿಕೊಳ್ಳಲು ಮನವಿ

ಕೊಪ್ಪಳ;ಮಾರ್ಚ್-೨೨ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಪವಿತ್ರ ಕಾರ್ಯವಾಗಿದ್ದು ಮತದಾರರು ಏಪ್ರಿಲ್ ೨೩ ರಂದು ನಡೆಯುವ ಮತದಾನದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಮತದಾನಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂಬುದನ್ನು ಪರಿಶೀಲಿಸಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರ ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ೫ ವಿಧಾನಸಭಾ ಕ್ಷೇತ್ರಗಳು, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಸಿರುಗುಪ್ಪ ಕ್ಷೇತ್ರವನ್ನು ಒಳಗೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿಂದ ೮೫೩೭೪೫ ಪುರುಷ, ೮೬೨೯೦೩ ಮಹಿಳಾ ಹಾಗೂ ೧೧೨ ಇತರೆ ಮತದಾರರು ಸೇರಿ ಪ್ರಸ್ತುತ ೧೭೧೬೭೬೦ ಮತದಾರರಿದ್ದಾರೆ. ಹಾಗೂ ಒಟ್ಟು ೨೦೩೩ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಪ್ರಸ್ತುತ ನಡೆಯುತ್ತಿರುವ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಪಟ್ಟಿಯಲ್ಲ್ಲಿ ಹೆಸರನ್ನು ಹೂಂದಿರಬೇಕಾಗುತ್ತದೆ. ಭಾವಚಿತ್ರವಿರುವ ಮತದಾರರ ಪಟ್ಟಿ ಇರಲಿದ್ದು ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿಯ ಜೊತೆಗೆ ಇತರೆ ೧೧ ಭಾವಚಿತ್ರವಿರುವ ಗುರುತಿನ ಚೀಟಿಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಇರುತ್ತದೆ. ಆದರೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆ ಎಂಬುದನ್ನು ಮುಂಚಿತವಾಗಿ ಖಾತರಿಪಡಿಸಿಕೊಳ್ಳಲು ಆಯೋಗ ಸುಲಭವಾದ ಮಾರ್ಗವನ್ನು ಕಲ್ಪಿಸಿಕೊಟ್ಟಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ನಿಮ್ಮಲ್ಲಿರುವ ಮೊಬೈಲ್‌ನಿಂದ ಮೆಸೇಜ್‌ಗೆ ಹೋಗಿ ಇಲ್ಲಿ KAEPIC<space>ID Card No ಸಂಖ್ಯೆಯನ್ನು ಟೈಪ್ ಮಾಡಿ ೯೭೩೧೯೭೯೮೯೯ ಸಂಖ್ಯೆಗೆ ಎಸ್.ಎಂ.ಎಸ್. ಮಾಡಿದ ಕ್ಷಣಾರ್ಧದಲ್ಲಿ ನೀವು ಮತದಾರರಾಗಿರುವ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಹೆಸರು, ಭಾಗದ ಸಂಖ್ಯೆ, ಮತದಾನ ಕೇಂದ್ರದ ಹೆಸರು, ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ, ಮತದಾರರ ಹೆಸರು ಸಮೇತ ವಿವರ ನಿಮ್ಮ ಮೊಬೈಲ್‌ಗೆ ಬರಲಿದೆ.
ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಹಾಯವಾಣಿ ೦೮೫೩೯-೧೯೫೦ ಗೆ ಕರೆ ಮಾಡಿ ತಮ್ಮ ಮತದಾರರ ಪಟ್ಟಿಯ ವಿವರವನ್ನು ಪಡೆದುಕೊಳ್ಳಬಹುದು, ಇದು ಟೋಲ್ ಫ್ರೀ ಸಂಖ್ಯೆಯಾಗಿದೆ.  ಮತ್ತು www.ceo.karnataka.kar.nic.in  ವೆಬ್‌ಸೈಟ್‌ಗೆ ಹೋಗಿ ಇದರಲ್ಲಿ ಮೂರು ವಿಧದಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು. ಮೊದಲನೆಯದು ನಿಮ್ಮ ಎಫಿಕ್ ಸಂಖ್ಯೆಯ ಮೂಲಕ ಹುಡುಕಹುದಾಗಿದ್ದು ಮೊದಲು ಇಲ್ಲಿ ಜಿಲ್ಲೆ ಆಯ್ಕೆ ಮಾಡಿ ನಂತರ ಎಫಿಕ್ ಸಂಖ್ಯೆ ಟೈಪ್ ಮಾಡಿ ಸರ್ಚ್‌ಕೊಟ್ಟಲ್ಲಿ ಹೆಸರು ಸಿಗುತ್ತದೆ. ಎರಡನೆಯದು ಇತರೆ ವಿವರಗಳ ಮೂಲಕ ಜಿಲ್ಲೆ ಹೆಸರು, ಮತದಾರರ ಹೆಸರು, ಲಿಂಗ, ಕ್ಷೇತ್ರದ ಹೆಸರು ಆಯ್ಕೆ ಮಾಡುವ ಮೂಲಕ ಹುಡುಕಬಹುದು. ಹಾಗೂ ಮತದಾರರ ಪಟ್ಟಿ ಸೇರ್ಪಡೆ ವೇಳೆ ನಿಮ್ಮ ಮೊಬೈಲ್ ಸಂಖ್ಯೆ ನೀಡಿದ್ದಲ್ಲಿ ಜಿಲ್ಲೆ ಆಯ್ಕೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿ ಹುಡುಕಿದರೂ ನಿಮ್ಮ ಹೆಸರು ಸಿಗಲಿದೆ.
ಮತ್ತು ಮತದಾನ ಕೆಲವು ದಿನಗಳ ಮುನ್ನ ವೋಟರ್ ಗೈಡ್ ಮೂಲಕ ಮತದಾರರಿಗೆ ಮತದಾನದ ಮಾಹಿತಿಯನ್ನು ತಲುಪಿಸಲಿದ್ದು ಬಿ.ಎಲ್.ಓ.ಗಳ ಮೂಲಕ ಪ್ರತಿ ಮನೆಗೂ ಭಾವಚಿತ್ರವಿರುವ ವೋಟರ್ ಸ್ಲಿಪ್‌ನ್ನು ವಿತರಣೆ ಮಾಡಲಾಗುತ್ತದೆ. ಇದರಲ್ಲಿ ಹೆಸರು, ಮತದಾನ ಕೇಂದ್ರದ ವಿವರ, ಕ್ರಮ ಸಂಖ್ಯೆ ಇರುತ್ತದೆ. ಆದರೆ ಇದನ್ನು ಗುರುತಿನ ಚೀಟಿಯನ್ನಾಗಿ ಪರಿಗಣಿಸಲಾಗುವುದಿಲ್ಲ. ಇತರೆ ೧೧ ದಾಖಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮತದಾನ ದಿನದಂದು ಮತದಾರರಿಗೆ ನೀರು, ನೆರಳಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಇರಲಿದ್ದು ವಿಕಲಚೇತನರಿಗೆ ಅಗತ್ಯವಿರುವ ಪರಿಕರಗಳ ನೆರವನ್ನು ಒದಗಿಸಲಾಗುತ್ತದೆ .

Please follow and like us:
error