ಚುನಾವಣಾ ಅಕ್ರಮ ತಡಗೆ ಸಿವಿಜಿಲ್ ಆಪ್ ಸಾರ್ವಜನಿಕರ ಕೈಗೆ


ಕೊಪ್ಪಳ;ಮಾರ್ಚ್-೨೦  ಭಾರತ ಚುನಾವಣಾ ಆಯೋಗವು ೧೭ ನೇ ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ, ಪಾರದರ್ಶಕ ಹಾಗೂ ಸಾರ್ವಜನಿಕರ ಕಣ್ಗಾವಲಿನಲ್ಲಿ ನಡೆಸುತ್ತಿದೆ. ನೀತಿ ಸಂಹಿತೆ ಉಲ್ಲಂಘನೆಯ ದೃಶ್ಯಾವಳಿ, ಛಾಯಾಚಿತ್ರಗಳನ್ನು ನೇರವಾಗಿ ಅಪ್‌ಲೋಡ್ ಮಾಡಬಹುದಾದ ಅಫ್ಲಿಕೇಷನ್ ಸಿವಿಜಿಲ್ ಆಫ್ ಇದಾಗಿದ್ದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮತದಾರರನ್ನು ಓಲೈಸಲು ವಿವಿಧ ರೀತಿಯ ಆಮಿಷ, ಉಡುಗೊರೆ ನೀಡುವುದಲ್ಲದೆ ಹಣ ಹಂಚಿಕೆ, ಮದ್ಯ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುವ ಅವಕಾಶ ಇರುತ್ತದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ. ಆಯೋಗವು ಈ ಹಿನ್ನೆಲೆಯಲ್ಲಿ ಸಿವಿಜಿಲ್ ಎಂಬ ಆಫ್‌ನ್ನು ಸಿದ್ದಪಡಿಸಿ ಉಪಯೋಗಿಸಲು ಅವಕಾಶ ಕಲ್ಪಿಸಿದೆ.
ಸಿವಿಜಿಲ್ ಅಪ್ಲಿಕೇಷನ್ ಇದಾಗಿದ್ದು ಆಂಡ್ರಾಯಿಡ್ ಮೊಬೈಲ್‌ಗಳಲ್ಲಿ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುತ್ತದೆ. ಸಿವಿಜಿಲ್ ಡೌನ್‌ಲೋಡ್ ಮಾಡಿಕೊಳ್ಳುವಾಗ ಎರಡು ವಿಧದಲ್ಲಿ ಅವಕಾಶ ಇದೆ. ತಮ್ಮ ಹೆಸರು ನೊಂದಾಯಿಸದೇ ಹಾಗೂ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡುವ ಮೂಲಕ ನೊಂದಾಯಿಸಬಹುದು. ಆದರೆ ಈ ಆಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ವೀಡಿಯೋ, ಪೋಟೋಗಳನ್ನು ನೇರವಾಗಿ ಅಪ್‌ಲೋಡ್ ಮಾಡಿದಲ್ಲಿ ಆಯಾ ಜಿಲ್ಲಾ ನಿಯಂತ್ರಣಾ ಕೇಂದ್ರಕ್ಕೆ ಬರುತ್ತದೆ. ಇದರಲ್ಲಿ ಐದು ನಿಮಿಷವುಳ್ಳ ವೀಡಿಯೋ, ಪೋಟೋ ಕಳುಹಿಸಲು ಅವಕಾಶ ಇದೆ.
ಯಾವ ಸ್ಥಳದಿಂದ ಪೋಟೋ, ವೀಡಿಯೋ ಅಪ್‌ಲೋಡ್ ಮಾಡಲಾಗುತ್ತಿದೆ ಎಂಬುದನ್ನು ಜಿಪಿಎಸ್ ಮೂಲಕ ಸ್ಥಳದ ಮಾಹಿತಿ ಡಿ.ಸಿ.ಸಿ. ಕೇಂದ್ರದಲ್ಲಿ ಪ್ರದರ್ಶನವಾಗುತ್ತದೆ. ತಕ್ಷಣ ನಿಯಂತ್ರಣ ಕೇಂದ್ರದಲ್ಲಿನ ಸಿಬ್ಬಂದಿ ಹತ್ತಿರದ ಪ್ಲೆಯಿಂಗ್ ಸ್ಕ್ವಾಡ್‌ಗೆ ಮಾಹಿತಿಯನ್ನು ರವಾನಿಸಲಿದ್ದು ಅಪ್‌ಲೋಡ್ ಮಾಡಿದ ೧೫ ನಿಮಿಷಗಳ ಒಳಗಾಗಿ ಉಲ್ಲಂಘನೆಯ ಸ್ಥಳಕ್ಕೆ ತಂಡ ಆಗಮಿಸಲಿದೆ. ಲೈವ್ ಪೋಟೋ ಮತ್ತು ವೀಡಿಯೋ ಮಾತ್ರ ಸಿವಿಜಲ್ ಮೂಲಕ ಅಪ್‌ಲೋಡ್ ಮಾಡಲು ಅವಕಾಶ ಇದ್ದು ಗ್ಯಾಲರಿಯಲ್ಲಿನ ಪೋಟೋ, ವೀಡಿಯೋ ತೆಗೆದುಕೊಳ್ಳುವುದಿಲ್ಲ, ಇದು ಸಿವಿಜಿಲ್‌ನ ವಿಶೇಷವಾಗಿದೆ.
ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಕೊಪ್ಪಳ ಜಿಲ್ಲೆಯಾದ್ಯಂತ ೨೦ ಪ್ಲೆಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. ಸಿವಿಜಿಲ್ ಆಪ್‌ನ್ನು ಸಾರ್ವಜನಿಕರು ಬಳಕೆ ಮಾಡಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳ ಲೈವ್ ವೀಡಿಯೋ, ಪೋಟೋ ಕಳುಹಿಸಿದಲ್ಲಿ ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ತಾವು ಸಹ ಕೈಜೋಡಿಸಿದಂತಾಗುತ್ತದೆ. ಆದರೆ ವೀಡಿಯೋ, ಪೋಟೋ ಕಳುಹಿಸಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ತಪ್ಪು ಮಾಹಿತಿ ನೀಡುವಂತಿಲ್ಲ.
ಸಿವಿಜಿಲ್ ಕಣ್ಗಾವಲಿಗಾಗಿ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕಚೇರಿ ಸ್ಥಾಪಿಸಿದ್ದು ದಿನದ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದು ಇಲ್ಲಿ ದಾಖಲಾಗುವ ದೂರುಗಳನ್ನು ದಾಖಲಿಸಿ ತನಿಖೆ, ಪರಿಶೀಲನೆ ನಡೆಸಿ ವರದಿಗಾಗಿ ತಂಡವನ್ನು ರಚಿಸಲಾಗುತ್ತದೆ.
ಚುನಾವಣಾ ಆಯೋಗವು ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಸಾರ್ವಜನಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದೆ ಬರಬೇಕು.
ಸಿವಿಜಿಲ್ ಆಪ್ ಓಪನ್ ಮಾಡಿದಾಗ ಯಾವ ವಿಧಾನಸಭಾ ಕ್ಷೇತ್ರ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕಾರ, ಹಣ ಹಂಚಿಕೆ, ಮದ್ಯ ವಿತರಣೆ, ಸೇರಿದಂತೆ ವಿವಿಧ ತರಹದ ಉಲ್ಲಂಘನೆಯ ೧೫ ವಿಧದ ಉಲ್ಲಂಘನೆಯ ವಿವರ ತೆರೆದುಕೊಳ್ಳಲಿದ್ದು ಪೋಟೋ ಮತ್ತು ವೀಡಿಯೋದಲ್ಲಿರುವಂತೆ ಆಯ್ಕೆ ಮಾಡಿ ಸಬ್‌ಮಿಟ್ ಕೊಡಬೇಕಾಗುತ್ತದೆ.
ಮಾರ್ಚ್ ೨೦ ರವರೆಗೆ ೧೧ ದೂರುಗಳು ಬಂದಿದ್ದು ಇದರಲ್ಲಿ ಪ್ರಾಯೋಗಿಕವಾಗಿ ಕಳುಹಿಸಿರುವ ದೂರುಗಳೆ ಹೆಚ್ಚಿದ್ದು ಪರಿಶೀಲಿಸಿ ಕೈಬಿಡಲಾಗಿದೆ. ಆದರೆ ಇಂತಹ ಪ್ರಾಯೋಗಿಕ ದೂರುಗಳಿಗೆ ಅವಕಾಶ ಇರುವುದಿಲ್ಲ.

Please follow and like us:
error