ಕುಕನೂರಿನಲ್ಲಿ ಅಂಗವಿಕಲರಿಂದ ಮತದಾನ ಜಾಗೃತಿ ರ್‍ಯಾಲಿ


ಕೊಪ್ಪಳ ಮಾ ೨೦ : ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಅಂಗವಿಕಲರಿಂದ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಬುಧವಾರದಂದು ಮತದಾನ ಜಾಗೃತಿ ರ್‍ಯಾಲಿ ನಡೆಯಿತು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಪ್ರೇರೆಪಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಅಂಗವಿಕಲರು ತಮ್ಮ ಸ್ವಯಂ ಚಾಲಿತ ಮತ್ತು ಯಂತ್ರ ಚಾಲಿತ ತ್ರಿಚಕ್ರ ವಾಹನಗಳ ಮೂಲಕ ರ್‍ಯಾಲಿಯನ್ನು ಹಮ್ಮಿಕೊಂಡು ಜಿಲ್ಲಾ ಸ್ವೀಪ್ ಸಮಿತಿಯೊಂದಿಗೆ ಮತದಾನ ಜಾಗೃತಿಗೆ ಕೈಜೋಡಿಸಿತು.
ರ್‍ಯಾಲಿಯಲ್ಲಿ ಮತ ಚಲಾವಣೆ ನಿಮ್ಮ ಹಕ್ಕು, ತಪ್ಪದೇ ಚಲಾಯಿಸಿ. ವೋಟ್ ಮಾಡುವವನೇ ಹೀರೋ…, ನಾವು ವೋಟ್ ಮಾಡುತ್ತೇವೆ.. ನೀವೂ ಸಹ ತಪ್ಪದೇ ವೋಟ್ ಮಾಡಿ, ಹೀಗೆ ಅನೇಕ ವಾಕ್ಯಗಳ ಜಾಗೃತಿ ಫಲಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿ, ಮತದಾನ ಮಾಡಿ, ಪ್ರಜಾಪ್ರಭುತ್ವಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಅಂಗವಿಕಲರ ಈ ಕಾರ್ಯವು ನಿಜಕ್ಕೂ ವಿಶೇಷವಾಗಿತ್ತು. ಯಲಬುರ್ಗಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಬಾನ ಎಂ. ಶೇಖ್ ಸೇರಿದಂತೆ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ರ್‍ಯಾಲಿಯಲ್ಲಿ ಉಪಸ್ಥಿತರಿದ್ದರು.

Please follow and like us:
error