ಎಪ್ರಿಲ್ ೧೨ ರಂದು ಕಾಂಗ್ರೆಸ್ ಅಭ್ಯರ್ಥಿ ಪರ ಹುಲಿಗಿ-ಮುನಿರಾಬಾದ್‌ನಲ್ಲಿ ಬೃಹತ್ ಸಮಾವೇಶ

ಕೊಪ್ಪಳ, ಎ. ೦೯: ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ಯ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರವಾಗಿ ಮತಯಾಚನೆಗೆ ಎಪ್ರಿಲ್ ೧೨ ರಂದು ಹುಲಿಗಿ ಮತ್ತು ಮುನಿರಾಬಾದ್‌ಗಳಲ್ಲಿ ಬೃಹತ್ ಚುನಾವಣೆ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ತಿಳಿಸಿದರು.
ಅವರು ತಾಲೂಕಿನ ಹುಲಿಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ೨೦೧೪ರ ಚುನಾವಣೆಯಲ್ಲಿ ಬಿಜೆಪಿ ಮೋದಿ ಹೆಸರಲ್ಲಿ ದೊಡ್ಡ ಭರವಸೆಗಳನ್ನು ನೀಡಿ, ಒಂದನ್ನೂ ಈಡೇರಿಸಿಲ್ಲ, ಅದು ಕೇವಲ ಮಾತನಾಡುತ್ತದೆ ಹೊರತು ಏನನ್ನೂ ಮಾಡುವದಿಲ್ಲ, ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡುವ ಪಕ್ಷ ದೇಶದಲ್ಲಿ ಕಾಂಗ್ರೆಸ್ ಮಾತ್ರವೇ ಆಗಿದ್ದು, ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮತ್ತು ಮೈತ್ರಿ ಸರಕಾರಗಳ ಸಾಧನೆಯೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ. ಎಲ್ಲಾ ಹಂತದ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲಾಗಿದೆ, ಜನರ ಮನೆ ಬಾಗಿಲಿಗೆ ನಮ್ಮ ಕೆಲಸ ಮತ್ತು ಸಾಧನೆಗಳನ್ನು ತಲುಪಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಮಾತನಾಡಿ, ನಮ್ಮ ಬಂಡಿ ಹರ್ಲಾಪೂರ ಮತ್ತು ಹಿಟ್ನಾಳ ಎರಡೂ ಹೋಬಳಿ ಯಾವತ್ತೂ ಕಾಂಗ್ರೆಸ್ ಪರವಾಗಿದ್ದು, ಇಲ್ಲಿನ ಜನರು ಸಂಪೂರ್ಣವಾಗಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಕಾಂಗ್ರೆಸ್ ಮಾಡಿದ ಸೇವೆ ಮತ್ತು ಜನಪರ ಕೆಲಸಗಳನ್ನು ಜನರು ಮೆಚ್ಚಿಕೊಂಡಿದ್ದಾರೆ, ಅವುಗಳನ್ನು ಕಾಂಗ್ರೆಸ್ ಮಾಡಿದೆ ಎಂಬುದನ್ನು ತಿಳಿಸಿಬೇಕಿದೆ, ಸುಳ್ಳು ಹೇಳುವ ಮೂಲಕ ಬಿಜೆಪಿ ಜನರಿಗೆ ಮೋಸ ಮಾಡಿದೆ, ಯುಪಿಎ ಕೆಲಸಗಳನ್ನು ತನ್ನ ಹೆಸರಲ್ಲಿ ಬರೆದುಕೊಂಡಿದೆ, ಬಂಡಲ್ ಸರಕಾರವನ್ನು ಜನರು ಕಿತ್ತೊಗೆಯಬೇಕು ಎಂದರು.
ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಬಿಜೆಪಿಯ ಎಲ್ಲಾ ಸ್ಕೀಮ್‌ಗಳು ಕೇವಲ ಹೆಸರಿಗಷ್ಟೇ, ಅವು ಜನರಿಗೆ ಏನನ್ನೂ ಮಾಡಲ್ಲ, ನಮ್ಮ ಹಣದಿಂದ ಉಜ್ವಲ, ನಮ್ಮ ಹಣದಿಂದ ಭೇಟಿ ಪಡಾವೋ, ನಮ್ಮ ಕಸಬರಿಗೆಯಿಂದ ಸ್ವಚ್ಛ ಭಾರತ್, ನಮ್ಮ ಹಣದಿಂದ ಜನ್ ಧನ್ ಹೀಗೆ ಮಾಡಿದ ಬಿಜೆಪಿಯ ಜಿಎಸ್‌ಟಿ ಈಗಲೂ ಸುದ್ದಾಗಿಲ್ಲ, ಒಂದು ತೆರಿಗೆ ಪದ್ಧತಿಯನ್ನು ಅಷ್ಟೊಂದು ಬಾರಿಗೆ ತಿದ್ದುಪಡಿ ಮಾಡಿದ ಉದಾಹರಣೆ ಸ್ವಾತಂತ್ರ್ಯ ನಂತರದ ೭೦ ವರ್ಷಗಳಲ್ಲಿ ಮಾಡಿಲ್ಲ. ೭೦ ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಆದರೆ ಅದೇ ೭೦ ವರ್ಷದ ಹಿಂದೆ ೩೩ ಕೋಟಿ ಇದ್ದ ಜನಸಂಖ್ಯೆ ಇಂದು ೧೩೩ ಕೋಟಿ ಆಗಿದೆ, ಅಷ್ಟು ಜನರನ್ನು ಸಂರಕ್ಷನೆ ಮಾಡಿದೆ, ಅವರಿಗೆ ಸೌಕರ್ಯ ಒದಗಿಸಿದೆ. ಅಮೇರಿಕಾದಂಥಹ ದೈತ್ಯ ರಾಷ್ಟಗಳು ಸಂಕಷ್ಟದಲ್ಲಿದ್ದಾಗಲೂ ಭಾರತ್ ಧೃಡವಾಗಿ ನಿಂತುಕೊಂಡಿತ್ತು, ಇವತ್ತಿನ ಎಲ್ಲಾ ಆವಿಷ್ಕಾರಗಳಿಗೆ ಕಾಂಗ್ರೆಸ್ ಕಾರಣ, ಅದನ್ನು ಮರೆಮಾಚಲು ಬಿಜೆಪಿ ತನ್ನ ಪ್ರಚಾರಕ್ಕೆ ಮಾಡಿದ ಖರ್ಚಿನಷ್ಟು ಬಡವರಿಗೆ ಸಹಾಯ ಮಾಡಿಲ್ಲ, ಬಿಜೆಪಿಗೆ ಈಗ ರಾಮ ಮಂದಿರದ ನೆನಪಾಗಿದೆ, ತನಗೆ ಓಟು ಹಾಕದ ಜಮ್ಮುವಿಗೆ ಕೊಟ್ಟ ವಿಶೇಷ ಸ್ಥಾನಮಾನ ಕಿತ್ತುಕೊಂಡು ದೇಶದ ಉಳಿದೆಡೆ ಮತಗಿಟ್ಟಿಸಲು ಪ್ರಯತ್ನ ಮಾಡುತ್ತಿದೆ. ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡುತ್ತದೆ. ಅಹಿಂದ ವರ್ಗದ ಜನ ಇವರ ಹಿಂಧುತ್ವಕ್ಕೆ ಮೋಸ ಹೋಗಬಾರದು, ಏಕರೂಪ ಸಂಹಿತೆಯಿಂದ ದಲಿತರ ಮೀಸಲಾತಿ ಹೋಗಲಿದೆ, ಈ ವರ್ಗ ಮರಳಿ ಗುಲಾಮರಾಗುವ ಕಾಲ ಸನ್ನಿಹಿತವಾಗಿದೆ, ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದ ಅವರು, ೨೫ ವರ್ಷದಲ್ಲಿ ಎದುರಾಳಿ ಅಭ್ಯರ್ಥಿ ಮಾಡದಷ್ಟು ಕೆಲಸವನ್ನು ಕೇವಲ ಐದು ವರ್ಷದಲ್ಲಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಮಾಡಿದ್ದಾರೆ. ಅವರ ಆಯ್ಕೆಯಿಂದ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ, ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ತಾಲೂಕ ಪಂಚಾಯತ ಮಾಜಿ ಸದಸ್ಯ ಪ್ರಭುರಾಜ ಪಾಟೀಲ್ ಮಾತನಾಡಿ, ಯಾರೂ ಪಕ್ಷ ವಿರೋಧಿ ಕೆಲಸ ಮಾಡಬಾರದು, ಪಕ್ಷನಿಷ್ಠೆ ಇರಬೇಕು ಅದರಿಂದ ಒಂದಿಲ್ಲೊಂದು ದಿನ ಪಕ್ಷ ನಮಗೂ ಉಪಕಾರ ಮಾಡತ್ತದೆ ಬೆಳೆಯಲು ಅವಕಾಶ ಕೊಡುತ್ತದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್, ಮುಖಂಡರಾದ ವೆಂಕಟೇಶ ಕಂಪಸಾಗರ, ನಾಗರತ್ನ ಪೂಜಾರ, ಜಿಯಾಸಾಬ್ ಕಟಗೇರಿ ಮಾತನಾಡಿದರು. ಹನುಮಂತಪ್ಪ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಸನ್ನ ಗಡಾದ ಮತ್ತು ರಮೇಶ ಹಿಟ್ನಾಳ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಸಂಚಾಲಕ ಎಸ್.ಬಿ. ಮಾಲಿಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಭೂಮರಡ್ಡಿ, ತಾ.ಪಂ. ಸದಸ್ಯ ಯಂಕಪ್ಪ ಹೊಸಳ್ಳಿ, ಎಪಿಎಂಸಿ ಸದಸ್ಯ ವಿಶ್ವನಾಥ ರಾಜು, ಬುಡ್ಡಪ್ಪ ಜವಳಿ, ಗೋಪಾಲ್ ಕಲಾಲ್, ವೆಂಕಟರಾವ್ ಹುಲಿಗಿ, ಈರಣ್ಣ ಹುಲಿಗಿ, ಹನುಮಂತಪ್ಪ ಗಿಡ್ಡಾಲಿ, ಖಾಜಾವಲಿ, ಸಲೀಂಸಾಬ್ ಅಳವಂಡಿ ಇತರರಿದ್ದರು.

Please follow and like us:
error