ಹಣ, ಕಾಣಿಕೆಗಳಿಗೆ ಮತ ಮಾರಿಕೊಳ್ಳಬೇಡಿ- ವೆಂಕಟ್ ರಾಜಾ ಮನವಿ

: ಪ್ರಸಕ್ತ ವಿಧಾನಸಭಾ ಚುನಾವಣೆಗಾಗಿ ಮೇ. ೧೨ ರಂದು ಮತದಾನ ನಡೆಯಲಿದೆ. ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಹಣ, ಅಥವಾ ಕಾಣಿಕೆ ನೀಡುವಂತಹ ಆಮಿಷಗಳಿಗೆ ಮತವನ್ನು ಮಾರಿಕೊಳ್ಳದಂತೆ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ವಿವಿಧ ಯೋಜನೆಗಳ ಮಹಿಳಾ ಸಂಯೋಜಕರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಜೀವಿನಿ, ಎನ್‌ಆರ್‌ಎಲ್‌ಎಂ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ ಸಂಯೋಜಕರಿಗೆ ಮತದಾನ ಜಾಗೃತಿ ಕುರಿತಂತೆ ಸೋಮವಾರದಂದು ಏರ್ಪಡಿಸಿದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಮಾಜದ ಮನಸ್ಥಿತಿ ಬದಲಾವಣೆಯಲ್ಲಿ ಮಹಿಳಾ ಘಟಕಗಳು ಬಹಳಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಶೌಚಾಲಯ ನಿರ್ಮಾಣ ಸಂದರ್ಭದಲ್ಲಿಯೂ ಇಂತಹ ಘಟಕಗಳು ಜನರ ಮನವೊಲಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲು ತಮ್ಮದೇ ಆದ ಕೊಡುಗೆಯನ್ನು ಮಹಿಳಾ ಘಟಕಗಳು ನೀಡಿವೆ. ಇದೀಗ ಚುನಾವಣೆಯಲ್ಲಿ ಮತದಾರರಿಗೆ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರು ಬದ್ಧತೆಯನ್ನು ಪ್ರದರ್ಶಿಸುವ ಕಾಲ ಕೂಡಿ ಬಂದಿದೆ. ಮನೆಗಳಲ್ಲಿ ತಮ್ಮ ಮನೆಯ ಕಾರ್ಯದಲ್ಲಿ ಸದಾ ಬ್ಯುಸಿಯಾಗಿರುವ ಮಹಿಳೆಯರು, ಮತದಾನ ಜಾಗೃತಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸಲಾಗುತ್ತಿರುವ ಮತದಾನ ಯಂತ್ರ, ವಿವಿ ಪ್ಯಾಟ್ ಕಾರ್ಯವಿಧಾನ ಕುರಿತ ಪ್ರಾತ್ಯಾಕ್ಷಿಕೆಯಲ್ಲಿ ಪಾಲ್ಗೊಳ್ಳದಿರುವುದು ಕಂಡುಬಂದಿದೆ. ಹೀಗಾಗಿ ಮಹಿಳೆಯರಿಗೆ ಸ್ಥಳೀಯವಾಗಿ ಸುಶಿಕ್ಷಿತ ಮಹಿಳೆಯರೇ ನೈತಿಕ ಮತದಾನ ಕುರಿತು ಅರಿವು ಮೂಡಿಸಬೇಕು. ವಿವಿಧ ಪಕ್ಷಗಳು, ರಾಜಕೀಯ ವ್ಯಕ್ತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹಣ ನೀಡುವುದು, ಸೀರೆ, ಕುಕ್ಕರ್ ಸೇರಿದಂತೆ ಇತರೆ ಕಾಣಿಕೆಗಳ ಆಮಿಷವೊಡ್ಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದರೆ, ಇಂತಹ ಆಮಿಷವೊಡ್ಡುವುದು ಅಥವಾ ಪಡೆಯುವುದು ಕೂಡ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಮಹಿಳೆಯರು ಜಾಗೃತಿ ಮೂಡಿಸಬೇಕು. ಮಹಿಳೆಯರೇ ಮಹಿಳಾ ಮತದಾರರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿತ್ಯ ಸಂಜೆ ವೇಳೆ ಆಯೋಜಿಸಬೇಕು. ಈ ಮೂಲಕ ಮಹಿಳೆಯರಲ್ಲಿ ನೈತಿಕ ಮತದಾನದ ಕುರಿತು ಅರಿವು ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
ಮಹಿಳಾ ಮತಗಟ್ಟೆಗಳು : ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಮತದಾನಕ್ಕಾಗಿ ಪ್ರೇರೇಪಿಸುವ ಸಲುವಾಗಿ, ಹಾಗೂ ಮಹಿಳೆಯರಲ್ಲಿ ನೈತಿಕ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ತಲಾ ಒಂದು ಮತಗಟ್ಟೆಯನ್ನು ಮಾದರಿ ಮತಗಟ್ಟೆಗಳನ್ನಾಗಿ ನಿರ್ಮಿಸಲಾಗುತ್ತಿದೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು, ಸಹಾಯಕ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಡಗೂಡಿ ಎಲ್ಲರೂ ಮಹಿಳೆಯರೇ ಇರುತ್ತಾರೆ. ಇದನ್ನು ಪಿಂಕ್ ಮತಗಟ್ಟೆ ಎಂದು ಕರೆಯಲಾಗುತ್ತಿದ್ದು, ಇದರಲ್ಲಿ ವಿಶೇಷ ಮೂಲಭೂತ ವ್ಯವಸ್ಥೆಗಳನ್ನೂ ಕೂಡ ಕಲ್ಪಿಸಲಾಗುವುದು ಎಂದು ವೆಂಕಟ್ ರಾಜಾ ಅವರು ಹೇಳಿದರು.
ಮತದಾನ ಜಾಗೃತಿಗೆ ಆಯೋಗದ ಯತ್ನ : ಕುಷ್ಟಗಿ ತಾಲೂಕಿನಲ್ಲಿ ಇತ್ತೀಚೆಗೆ ಮತದಾನ ಜಾಗೃತಿಗಾಗಿ ಏರ್ಪಡಿಸಿದ ಬೈಕ್ ರ್‍ಯಾಲಿ ಸಂದರ್ಭದಲ್ಲಿ ಆದ ಅನುಭವವನ್ನು ಇಲ್ಲಿ ಹಂಚಿಕೊಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾವು ಸಾಮಾನ್ಯ ವ್ಯಕ್ತಿಗಳಂತೆ ಕುಷ್ಟಗಿ ತಾಲೂಕಿನ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿಯ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತ ಕುಳಿತಿದ್ದ ಕೆಲ ವ್ಯಕ್ತಿಗಳು, ತಮ್ಮನ್ನು ಕಂಡು, ತಾವು ಯಾವ ಪಕ್ಷದಿಂದ ಬಂದಿದ್ದೀರಿ, ತಮಗೆ ಎಷ್ಟು ಹಣ ಕೊಡುತ್ತೀರಿ ಎಂಬುದಾಗಿ ಪ್ರಶ್ನಿಸಿದರು, ಆಗ ತಾವು ಜನರಲ್ಲಿ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗದ ಪರವಾಗಿ ಬಂದಿದ್ದೇವೆ ಎಂದಾಗಲೇ ಜನರಿಗೆ ತಮ್ಮ ತಪ್ಪಿನ ಅರಿವಾಯಿತು. ಕಾರ್ಯಕ್ರಮದಲ್ಲಿ ಮತವನ್ನು ಹಣ ಅಥವಾ ಇತರೆ ಆಮಿಷಗಳಿಗೆ ಮಾರಿಕೊಂಡಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದು ವೆಂಕಟ್ ರಾಜಾ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಪ್ರಜಾಪ್ರಭುತ್ವ ಬಲಗೊಳ್ಳಲು ಮತ ಪ್ರಮಾಣ ಹೆಚ್ಚಬೇಕು : ಜಿಲ್ಲೆಯಲ್ಲಿ ಪುರುಷ- ೫೩೫೮೭೪, ಹಾಗೂ ಮಹಿಳೆ- ೫೩೩೩೨೫ ಸೇರಿದಂತೆ ಒಟ್ಟು ೧೦೬೯೧೯೯ ಮತದಾರರಿದ್ದಾರೆ. ಅಂದರೆ ಸುಮಾರು ಶೇ. ೫೦ ರಷ್ಟು ಮಹಿಳಾ ಮತದಾರರಿದ್ದಾರೆ. ಮತದಾನ ಪ್ರಮಾಣ ಅತ್ಯಂತ ಗರಿಷ್ಠವಾದಾಗಲೇ, ನಿಜವಾದ ಚುನಾವಣೆಯಾದಂತೆ, ನಮ್ಮನ್ನು ಪ್ರತಿನಿಧಿಸುವ ಜನ ಪ್ರತಿನಿಧಿಯನ್ನು ಎಲ್ಲರೂ ಸೇರಿ ಆರಿಸಿದಾಗಲೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರಲು ಸಾಧ್ಯ. ಆದ್ದರಿಂದ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ. ೧೦೦ ರಷ್ಟು ಆಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಆಶಯ ವ್ಯಕ್ತಪಡಿಸಿದರು.
ಕಾರ್ಯಗಾರದಲ್ಲಿ ಜಿಲ್ಲೆಯ ಸಂಜೀವಿನಿ, ಎನ್‌ಆರ್‌ಎಲ್‌ಎಂ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ ಸುಮಾರು ೪೦೦ ಕ್ಕೂ ಹೆಚ್ಚು ಮಹಿಳಾ ಸಂಯೋಜಕರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತಿಯ ಸಹಾಯಕ ನಿರ್ದೇಶಕ ಶರಣಪ್ಪ, ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error