ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಣೆ

ಬೆಂಗಳೂರು, ಆ : ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಅವಧಿ ಮುಕ್ತಾಯವಾಗಲಿರುವ 105 ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ನಡೆಯುವ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ಹೈಕೋರ್ಟ್ ಆದೇಶದ ಬಳಿಕ ಚುನಾವಣೆಯ ದಿನಾಂಕ ಘೋಷಿಸಲಾಗಿದೆ.

29 ನಗರಸಭೆ, 53 ಪುರಸಭೆ ಹಾಗೂ 23 ಪಟ್ಟಣ ಪಂಚಾಯತ್‌ಗಳು ಸೇರಿದಂತೆ 105 ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ಆ.29ಕ್ಕೆ ಮತದಾನ ನಡೆಯಲಿದೆ. ಸೆ.1ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ತಡೆಕೋರಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇರುವ ಶಿವಮೊಗ್ಗ, ತುಮಕೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ ಸಿಕ್ಕಿಲ್ಲ. ಅದಲ್ಲದೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ಇರುವುದಿಲ್ಲ ಎಂದವರು ತಿಳಿಸಿದರು.

“105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ಬಳಸಲಾಗುತ್ತದೆ. ಪೊಲೀಸರು ಸೇರಿದಂತೆ 40,000 ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಪ್ರಪ್ರಥಮ ಬಾರಿಗೆ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ನೋಟಾ ಅಳವಡಿಸಲಾಗುತ್ತದೆ. ಆ.10ರಂದು ಸ್ಥಳೀಯ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಧಿಸೂಚನೆಯ ಬಳಿಕ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ” ಎಂದು ರಾಜ್ಯ ಚುನಾವಣಾ ಅಯುಕ್ತರು ತಿಳಿಸಿದ್ದಾರೆ.

Please follow and like us: